×
Ad

ಒಂದೇ ಟೆಸ್ಟ್ ನಲ್ಲಿ ದ್ವಿಶತಕ, ಶತಕ ಗಳಿಸಿದ ಕಿವೀಸ್ ನ ಮೊದಲ ಬ್ಯಾಟರ್ ಡೆವೊನ್ ಕಾನ್ವೆ

Update: 2025-12-21 23:11 IST

Photo : x/@ICC

ವೆಲ್ಲಿಂಗ್ಟನ್: ವೆಸ್ಟ್ಇಂಡೀಸ್ ವಿರುದ್ಧ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ ಐತಿಹಾಸಿಕ ಸಾಧನೆ ಮಾಡಿದರು.

ಎಡಗೈ ಆಟಗಾರ ಕಾನ್ವೆ ಒಂದೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕ ದಾಖಲಿಸಿರುವ ನ್ಯೂಝಿಲ್ಯಾಂಡ್ ನ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾದರು. ಟೆಸ್ಟ್ ಕ್ರಿಕೆಟ್ ನ ದೀರ್ಘ ಇತಿಹಾಸದಲ್ಲಿ ಕೆಲವೇ ಬ್ಯಾಟರ್ಗಳು ಈ ಸಾಧನೆ ಮಾಡಿದ್ದಾರೆ.

ಮೊದಲ ಇನಿಂಗ್ಸ್ ನಲ್ಲಿ 227 ರನ್ ಗಳಿಸಿರುವ ಕಾನ್ವೆ ಅವರು ನಾಲ್ಕನೇ ದಿನದಾಟದಲ್ಲಿ ಎರಡನೇ ಇನಿಂಗ್ಸ್ ನಲ್ಲಿ 100 ರನ್ ಗಳಿಸಿದ್ದಾರೆ. ಈ ಸಾಧನೆಯ ಮೂಲಕ 34ರ ವಯಸ್ಸಿನ ಕಾನ್ವೆ ಅವರು ಒಂದೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕ ಗಳಿಸಿರುವ ವಿಶ್ವದ 10ನೇ ಕ್ರಿಕೆಟಿಗನೆಂಬ ಹಿರಿಮೆಗೆ ಪಾತ್ರರಾದರು. ಇದರೊಂದಿಗೆ ವಾಲ್ಟರ್ಸ್, ಗ್ರೆಗ್ ಚಾಪೆಲ್, ಸುನೀಲ್ ಗವಾಸ್ಕರ್, ಬ್ರಿಯಾನ್ ಲಾರಾ, ಗ್ರಹಾಂ ಗೂಚ್, ಲಾರೆನ್ಸ್ ರೋವ್, ಕುಮಾರ ಸಂಗಕ್ಕರ, ಮಾರ್ನಸ್ ಲ್ಯಾಬುಶೇನ್ ಹಾಗೂ ಶುಭಮನ್ ಗಿಲ್ ಅವರಿದ್ದ ಎಲೈಟ್ ಗ್ರೂಪ್ ಗೆ ಸೇರಿದರು.

ಮೂರನೇ ಪಂದ್ಯದಲ್ಲಿ ಒಟ್ಟು 327 ರನ್ ಗಳಿಸಿದ ಕಾನ್ವೆ ಕಿವೀಸ್ ಪರ ಒಂದೇ ಟೆಸ್ಟ್ ನಲ್ಲಿ ಗರಿಷ್ಠ ಮೊತ್ತ ಗಳಿಸಿದ ಮೂರನೇ ಆಟಗಾರನಾಗಿದ್ದಾರೆ. ಸ್ಟೆಫನ್ ಫ್ಲೆಮಿಂಗ್ 343 ರನ್(2003ರಲ್ಲಿ ಶ್ರೀಲಂಕಾ ವಿರುದ್ಧ 274 ಹಾಗೂ 69) ಹಾಗೂ ಮಾರ್ಟಿನ್ ಕ್ರೋವ್ 329ರನ್(1991ರಲ್ಲಿ ಶ್ರೀಲಂಕಾ ವಿರುದ್ಧ 30 ಹಾಗೂ 299 ರನ್)ಗಳಿಸುವ ಮೂಲಕ ಮೊದಲೆರಡು ಸ್ಥಾನದಲ್ಲಿದ್ದಾರೆ.

ಮೊದಲ ಇನಿಂಗ್ಸ್ ನಲ್ಲಿ ದ್ವಿಶತಕ ಗಳಿಸಿದ್ದ ಕಾನ್ವೆ ನ್ಯೂಝಿಲ್ಯಾಂಡ್ ತಂಡ 8 ವಿಕೆಟ್ ಗಳ ನಷ್ಟಕ್ಕೆ 575 ರನ್ ಗಳಿಸಲು ನೆರವಾಗಿದ್ದರು. ಇದಕ್ಕೆ ಉತ್ತರವಾಗಿ ವೆಸ್ಟ್ಇಂಡೀಸ್ 420 ರನ್ ಗೆ ಆಲೌಟಾಯಿತು.

ಕಾನ್ವೆ ಅವರು ಟೆಸ್ಟ್ ಕ್ರಿಕೆಟಿನಲ್ಲಿ ತನ್ನ ಏಳನೇ ಶತಕ ಗಳಿಸಿ ನ್ಯೂಝಿಲ್ಯಾಂಡ್ ಟೆಸ್ಟ್ ಕ್ರಿಕೆಟಿನ ಆಧಾರಸ್ತಂಭವಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News