×
Ad

ಅಂಡರ್ 19 ಏಶ್ಯಕಪ್ | ಭಾರತವನ್ನು ಮಣಿಸಿ ಚಾಂಪಿಯನ್ ಆದ ಪಾಕಿಸ್ತಾನ

Update: 2025-12-21 19:26 IST

Photo Credit : Asian Cricket Council

ದುಬೈ: ಐಸಿಸಿ ಆಯೋಜಿತ ಅಂಡರ್-19 ಕ್ರಿಕೆಟ್ ಏಶ್ಯಕಪ್ ಟೂರ್ನಿಯ ಫೈನಲ್ ನಲ್ಲಿ ಭಾರತ ತಂಡವನ್ನು 191 ರನ್ ಗಳ ಅಂತರದಿಂದ ಮಣಿಸಿದ ಪಾಕಿಸ್ತಾನ ತಂಡ ಚಾಂಪಿಯನ್ಪಟ್ಟಕ್ಕೇರಿದೆ.

ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಗೆಲ್ಲಲು 348 ರನ್ ಕಠಿಣ ಗುರಿ ಪಡೆದ ಭಾರತ ಕ್ರಿಕೆಟ್ ತಂಡವು ಕೇವಲ 26.2 ಓವರ್ಗಳಲ್ಲಿ 156 ರನ್ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿದೆ.

ಭರ್ಜರಿ ಗೆಲುವು ದಾಖಲಿಸಿರುವ ಪಾಕಿಸ್ತಾನ ತಂಡವು ಅಂಡರ್-19 ಏಶ್ಯಕಪ್ ನಲ್ಲಿ ಎರಡನೇ ಬಾರಿ ಟ್ರೋಫಿ ಗೆದ್ದಿದೆ. ಈ ಹಿಂದೆ 2013ರಲ್ಲಿ ಭಾರತ ತಂಡದೊಂದಿಗೆ ಟ್ರೋಫಿ ಹಂಚಿಕೊಂಡಿತ್ತು.

ಗೆಲ್ಲಲು 348 ರನ್ ಗುರಿ ಪಡೆದಿದ್ದ ಭಾರತ ತಂಡಕ್ಕೆ ಉತ್ತಮ ಆರಂಭದ ಅಗತ್ಯವಿತ್ತು. ಮೊದಲ ಎರಡು ಓವರ್ಗಳಲ್ಲಿ 32 ರನ್ ಕಲೆ ಹಾಕಿದ ಭಾರತವು ಭರವಸೆಯ ಆರಂಭ ಪಡೆದಿತ್ತು. ಇಬ್ಬರು ಆರಂಭಿಕ ಆಟಗಾರರಾದ ಆಯುಷ್ ಮ್ಹಾತ್ರೆ(2 ರನ್), ವೈಭವ್ ಸೂರ್ಯವಂಶಿ (26 ರನ್) ಹಾಗೂ 3ನೇ ಕ್ರಮಾಂಕದ ಆಟಗಾರ ಆ್ಯರೊನ್ ಜಾರ್ಜ್ (16 ರನ್) ಅಲ್ಪ ಮೊತ್ತಕ್ಕೆ ಔಟಾದ ಕಾರಣ ಭಾರತವು 4.1 ಓವರ್ಗಳಲ್ಲಿ 49 ರನ್ ಗೆ ಮೂರನೇ ವಿಕೆಟ್ ಕಳೆದುಕೊಂಡಿತು.

ನಿರಂತರ ವಿಕೆಟ್ ಗಳನ್ನು ಕಳೆದುಕೊಳ್ಳುತ್ತಾ ಸಾಗಿದ ಭಾರತ ತಂಡದಲ್ಲಿ ಉತ್ತಮ ಜೊತೆಯಾಟ ಮೂಡಿಬರಲಿಲ್ಲ. ದೀಪೇಶ್ ದೇವೇಂದ್ರನ್(36 ರನ್) ಹಾಗೂ ಕಿಶನ್ ಸಿಂಗ್ (ಔಟಾಗದೆ 3) ನಡುವಿನ 36 ರನ್ ಭಾರತದ ಇನಿಂಗ್ಸ್ ನ ಗರಿಷ್ಠ ಜೊತೆಯಾಟವಾಗಿದೆ. ಭಾರತದ ಪರ ದೀಪೇಶ್ ದೇವೇಂದ್ರನ್ (36 ರನ್) ಸರ್ವಾಧಿಕ ಸ್ಕೋರ್ ಗಳಿಸಿದರು.

ಪಾಕಿಸ್ತಾನದ ವೇಗದ ಬೌಲರ್ ಅಲಿ ರಾಝಾ(4-42) ಅವರು ಆಯುಷ್ ಮ್ಹಾತ್ರೆ ಹಾಗೂ ವೈಭವ್ ಸೂರ್ಯವಂಶಿ ಸಹಿತ ನಾಲ್ಕುವಿಕೆಟ್ ಗಳನ್ನು ಪಡೆದರು. ಮುಹಮ್ಮದ್ ಸಯ್ಯಮ್(2-38), ಅಬ್ದುಲ್ ಸುಭಾನ್(2-29), ಹುಝೈಫಾ ಅಹ್ಸಾನ್(2-12)ತಲಾ ಎರಡು ವಿಕೆಟ್ ಗಳನ್ನು ಪಡೆದು ಭಾರತವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು.

ಪಾಕಿಸ್ತಾನ 347/8: ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಪಾಕಿಸ್ತಾನ ತಂಡವು ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 347 ರನ್ ಗಳಿಸಿತು. ಪಾಕ್ ತಂಡದ ಆರಂಭಿಕ ಆಟಗಾರ ಸಮೀರ್ ಮಿನ್ಹಾಸ್ ಶತಕ ಗಳಿಸಿ ಪಂದ್ಯಾವಳಿಯಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು. ಟೂರ್ನಿಯಲ್ಲಿ 2ನೇ ಶತಕ ಗಳಿಸಿದ ಸಮೀರ್ ಏಕಾಂಗಿ ಹೋರಾಟದ ನೆರವಿನಿಂದ ಪಾಕಿಸ್ತಾನ ತಂಡವು ಬೃಹತ್ ಮೊತ್ತ ಗಳಿಸಿತು.

ಸಮೀರ್ 113 ಎಸೆತಗಳಲ್ಲಿ 17 ಬೌಂಡರಿ ಹಾಗೂ 9 ಸಿಕ್ಸರ್ಗಳ ಸಹಿತ 172 ರನ್ ಗಳಿಸಿದರು. 29ನೇ ಓವರ್ನಲ್ಲಿ ದೇವೇಂದ್ರನ್ ಬೌಲಿಂಗ್ ನಲ್ಲಿ ಬೌಂಡರಿ ಗಳಿಸಿ 71 ಎಸೆತಗಳಲ್ಲಿ ಶತಕ ಪೂರೈಸಿದರು.

ಸಮೀರ್ ಆರಂಭಿಕ ಗ್ರೂಪ್ ಪಂದ್ಯದಲ್ಲಿ ಮಲೇಶ್ಯ ತಂಡದ ವಿರುದ್ಧ ಔಟಾಗದೆ 177 ರನ್ ಗಳಿಸಿದ್ದರು.

ಸಮೀರ್ ಅವರು ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಎರಡೂ ಪ್ರಶಸ್ತಿಗೆ ಭಾಜನರಾದರು.

ಪಾಕಿಸ್ತಾನ ತಂಡವು ಗ್ರೂಪ್ ಹಂತದಲ್ಲಿ ಭಾರತದ ವಿರುದ್ದ 90 ರನ್ಗಳಿಂದ ಸೋತಿತ್ತು. ಸೆಮಿ ಫೈನಲ್ನಲ್ಲಿ ಕಳೆದ ಬಾರಿಯ ಚಾಂಪಿಯನ್ ಬಾಂಗ್ಲಾದೇಶವನ್ನು ಸೋಲಿಸಿ ಫೈನಲ್ ಗೆ ಪ್ರವೇಶಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News