×
Ad

ಪಾಕ್‌ ಸಚಿವ ಮೊಹ್ಸಿನ್‌ ನಖ್ವಿಯಿಂದ ಪದಕ ಸ್ವೀಕರಿಸದ ಭಾರತ ಅಂಡರ್‌-19 ತಂಡ!

ನಖ್ವಿ ಇದ್ದ ವೇದಿಕೆ ಏರಲು ನಕಾರ

Update: 2025-12-21 23:47 IST

Photo : X/@BCCI


ಹೊಸದಿಲ್ಲಿ: ಭಾರತ ತಂಡವನ್ನು ಮಣಿಸಿದ ಪಾಕಿಸ್ತಾನ ಕ್ರಿಕೆಟ್ ತಂಡವು ಅಂಡರ್-19 ಏಶ್ಯಕಪ್ ಪ್ರಶಸ್ತಿಯನ್ನು ಜಯಿಸಿದೆ. ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ)ಅಧ್ಯಕ್ಷ ಮುಹ್ಸಿನ್ ನಖ್ವಿ ದುಬೈನ ಐಸಿಸಿ ಅಕಾಡಮಿ ಸ್ಟೇಡಿಯಂನಲ್ಲಿ ರವಿವಾರ ಪ್ರಶಸ್ತಿಯನ್ನು ಪ್ರದಾನಿಸಿದರು. ಈ ವರ್ಷಾರಂಭದಲ್ಲಿ ಸೀನಿಯರ್ ಏಶ್ಯಕಪ್ ಫೈನಲ್ ನ ನಾಟಕೀಯ ಘಟನಾವಳಿಗಳು ಈ ವೇಳೆ ನೆನಪಿಗೆ ಬಂದವು.

ಆಗ ಭಾರತೀಯ ಕ್ರಿಕೆಟ್ ತಂಡವು ಪಾಕಿಸ್ತಾನ ಸರಕಾರದಲ್ಲಿ ಸಚಿವರೂ ಆಗಿರುವ ನಖ್ವಿ ಅವರಿಂದ ಏಶ್ಯಕಪ್ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ಆ ನಂತರ ನಖ್ವಿ ಏಶ್ಯಕಪ್ ಟ್ರೋಫಿಯನ್ನು ತನ್ನ ಕಚೇರಿಯಲ್ಲೇ ಇಟ್ಟುಕೊಂಡು ವಿವಾದ ಸೃಷ್ಟಿಸಿದ್ದರು.

ಅಂಡರ್-19 ಏಶ್ಯಕಪ್ ನಲ್ಲಿ ಭಾರತವು ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಫೈನಲ್ ಗೆ ಪ್ರವೇಶಿಸಿದಾಗ ಇಂತಹ ಪರಿಸ್ಥಿತಿ ಮತ್ತೆ ಮರುಕಳಿಸಬಹುದೆಂದು ನಿರೀಕ್ಷಿಸಲಾಗಿತ್ತು.

ನಖ್ವಿ ವೇದಿಕೆಯಲ್ಲಿ ಇರುವ ತನಕ ಭಾರತದ ಆಟಗಾರರು ವೇದಿಕೆಯತ್ತ ಹೋಗಿಲ್ಲ. ಭಾರತ ತಂಡವು ಇನ್ನೋರ್ವ ಎಸಿಸಿ ಅಧಿಕಾರಿಯಿಂದ ರನ್ನರ್ಸ್ ಅಪ್ ಪದಕಗಳನ್ನು ಸ್ವೀಕರಿಸಿತು. ಆ ನಂತರ ನಖ್ವಿ ಪಾಕಿಸ್ತಾನದ ಅಂಡರ್-19 ಆಟಗಾರರಿಗೆ ವಿಜೇತ ಪದಕಗಳನ್ನು ನೀಡಿ ಫೋಟೊಕ್ಕೆ ಪೋಸ್ ನೀಡಿದರು.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ(ಪಿಸಿಬಿ)ಅಧ್ಯಕ್ಷರಾಗಿರುವ ನಖ್ವಿ ಅವರು ಪಾಕ್ ತಂಡದ ಸಂಭ್ರಮಾಚರಣೆಯಲ್ಲಿ ಭಾಗಿಯಾದರು.

ಪರಸ್ಪರ ಕೈಕುಲುಕದ ಭಾರತ-ಪಾಕ್ ಆಟಗಾರರು:

ಅಂಡರ್-19 ಏಶ್ಯಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ 191 ರನ್ಗಳಿಂದ ಸೋತ ನಂತರ ಭಾರತದ ಅಂಡರ್-19 ಕ್ರಿಕೆಟ್ ತಂಡದ ಆಟಗಾರರು ಎದುರಾಳಿ ಪಾಕಿಸ್ತಾನ ತಂಡದ ಆಟಗಾರರೊಂದಿಗೆ ಸಾಂಪ್ರದಾಯಿಕ ಹಸ್ತಲಾಘವದಲ್ಲಿ ಭಾಗಿಯಾಗಲಿಲ್ಲ. ಉಭಯ ತಂಡಗಳು ಗ್ರೂಪ್ ಹಂತದಲ್ಲಿ ಮುಖಾಮುಖಿಯಾಗಿದ್ದ ಸಂದರ್ಭದಲ್ಲೂ ಆಯುಷ್ ಮ್ಹಾತ್ರೆ ನಾಯಕತ್ವದ ಭಾರತ ತಂಡವು ʼಹ್ಯಾಂಡ್ ಶೇಕ್ʼ ಮಾಡಲಿಲ್ಲ. ಫೈನಲ್ ಪಂದ್ಯದ ಟಾಸ್ ನಂತರ ಉಭಯ ನಾಯಕರು ಪರಸ್ಪರ ಕೈಕುಲುಕಲಿಲ್ಲ.

ಈ ವರ್ಷಾರಂಭದಲ್ಲಿ ಪುರುಷರ ಏಶ್ಯಕಪ್ ಟೂರ್ನಿಯ ಮೂರು ಪಂದ್ಯಗಳಲ್ಲಿ ಭಾರತ ತಂಡದ ಆಟಗಾರರು ಪಾಕ್ ಕ್ರಿಕೆಟಿಗರ ಕೈಕುಲುಕಿರಲಿಲ್ಲ. ಅದನ್ನೇ ಈಗಲೂ ಮುಂದುವರಿಸಲಾಗಿದೆ. 2025ರ ಮಹಿಳೆಯರ ವಿಶ್ವಕಪ್ ನಲ್ಲೂ ಭಾರತೀಯ ಮಹಿಳಾ ತಂಡವು ಇದನ್ನೇ ಅನುಕರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News