ಇತಿಹಾಸ ಸೃಷ್ಟಿಸಿದ ಸ್ಮೃತಿ ಮಂಧಾನ : ಭಾರತೀಯ ಆಟಗಾರ್ತಿಯ ಅಪರೂಪದ ದಾಖಲೆ
ಸ್ಮೃತಿ ಮಂಧಾನ | Photo Credit : PTI
ವಿಶಾಖಪಟ್ಟಣಂ: ಭಾರತದ ಮಹಿಳಾ ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ಭಾನುವಾರ ಇಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪ್ರಥಮ ಟಿ20 ಪಂದ್ಯದಲ್ಲಿ ಇತಿಹಾಸ ಸೃಷ್ಟಿಸಿದರು. ಎಡಗೈ ಆರಂಭಿಕ ಆಟಗಾರ್ತಿ ವೃತ್ತಿಜೀವನದಲ್ಲಿ ಪ್ರಮುಖ ಮೈಲುಗಲ್ಲು ಸಾಧಿಸಿ, ಅಂತರರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್‍ನ ಎಲೈಟ್ ಕ್ಲಬ್‍ನಲ್ಲಿ ಸ್ಥಾನ ಪಡೆದರು.
ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ 4,000 ರನ್ ಪೂರೈಸಿದ ಮೊಟ್ಟಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದು ಭಾರತೀಯ ಕ್ರಿಕೆಟ್‍ನಲ್ಲಿ ಬಲುದೊಡ್ಡ ಸಾಧನೆಯಾಗಿದೆ. ಒಟ್ಟಾರೆಯಾಗಿ ಸ್ಮೃತಿ ಮಂಧಾನ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಮೈಲುಗಲ್ಲು ಸಾಧಿಸಿದ ಎರಡನೇ ಆಟಗಾರ್ತಿ ಎನಿಸಿಕೊಂಡರು.
ನ್ಯೂಜಿಲೆಂಡ್‍ನ ಆಟಗಾರ್ತಿ ಸೂಝಿ ಬೇಟ್ಸ್ 4,716 ರನ್‍ಗಳನ್ನು ಚುಟುಕು ಕ್ರಿಕೆಟ್‍ನಲ್ಲಿ ಕಲೆಹಾಕಿದ್ದು, ವಿಶ್ವದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸ್ಮೃತಿ ಮಂಧಾನ ಅವರ ದಾಖಲೆ ಮತ್ತೂ ವಿಶೇಷ ಎನಿಸಿರುವುದು ಏಕೆಂದರೆ ಅತ್ಯಂತ ವೇಗವಾಗಿ ಭಾರತೀಯ ಆಟಗಾರ್ತಿ ಈ ಸಾಧನೆ ಮಾಡಿದ್ದಾರೆ. ಸ್ಮೃತಿ ಮಂಧಾನ ಕೇವಲ 3,227 ಎಸೆತಗಳಲ್ಲಿ 4,000 ರನ್ ಗಳಿಸಿದ್ದು, ಬೇಟ್ಸ್ ಈ ಮೈಲುಗಲ್ಲು ತಲುಪಲು 3,675 ಎಸೆತಗಳನ್ನು ತೆಗೆದುಕೊಂಡಿದ್ದರು.
ಇದು ಟಿ20 ಕ್ರಿಕೆಟ್‍ನಲ್ಲಿ ಭಾರತೀಯ ಆಟಗಾರ್ತಿಯ ಸ್ಫೋಟಕ ಬ್ಯಾಟಿಂಗ್ ನಿರಂತರತೆಯನ್ನು ಸೂಚಿಸುತ್ತದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರು 25 ಎಸೆತಗಳಲ್ಲಿ 25 ರನ್ ಗಳಿಸಿದರು. 1,22 ರನ್‍ಗಳ ಗುರಿ ಬೆನ್ನಟ್ಟುವ ವೇಳೆ 9ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ಅವರ ಇನಿಂಗ್ಸ್ ಚುಟುಕಾದರೂ, ಐತಿಹಾಸಿಕ ಮೈಲುಗಲ್ಲು ತಲುಪಿರುವುದು ವಿಶೇಷ.