ರಣಜಿ ಟ್ರೋಫಿ: ಸೌರಾಷ್ಟ್ರ 425ಕ್ಕೆ ಆಲೌಟ್

Update: 2020-03-11 18:45 GMT

ರಾಜ್‌ಕೋಟ್, ಮಾ.11: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಬಂಗಾಳ ವಿರುದ್ಧ ಸೌರಾಷ್ಟ್ರ ತಂಡ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ದಾಖಲಿಸಿದೆ.

  ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಪಂದ್ಯದ ಮೂರನೇ ದಿನವಾಗಿರುವ ಬುಧವಾರ ಸೌರಾಷ್ಟ್ರ ತಂಡ ಮೊದಲ ಇನಿಂಗ್ಸ್‌ನಲ್ಲಿ 171.5 ಓವರ್‌ಗಳಲ್ಲಿ 425 ರನ್‌ಗಳಿಸಿ ಆಲೌಟಾಗಿದೆ.

ಎರಡನೇ ದಿನದಾಟದಂತ್ಯಕ್ಕೆ 160 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟದಲ್ಲಿ 384 ರನ್ ಗಳಿಸಿದ್ದ ಸೌರಾಷ್ಟ್ರ ಈ ಮೊತ್ತಕ್ಕೆ ಇಂದು 41 ರನ್ ಸೇರಿಸಿದೆ.

  13 ರನ್ ಗಳಿಸಿರುವ ಚಿರಾಗ್ ಜೈನ್ ಮತ್ತು 13 ರನ್ ಗಳಿಸಿದ್ದ ಧರ್ಮೇಂದ್ರ ಸಿನ್ಹಾ ಜಡೇಜ ಔಟಾಗದೆ ಕ್ರೀಸ್‌ನಲ್ಲಿದ್ದರು. ಇವರು ಬ್ಯಾಟಿಂಗ್ ಮುಂದುವರಿಸಿ 9ನೇ ವಿಕೆಟ್‌ಗೆ 23 ರನ್ ಸೇರಿಸಿದರು. ಚಿರಾಗ್ ನಿನ್ನೆಯ ಮೊತ್ತಕ್ಕೆ 1 ರನ್ ಸೇರಿಸಿದರು. ಅವರು 14 ರನ್ ಗಳಿಸಿ ಆಕಾಶದೀಪ್ ಎಸೆತದಲ್ಲಿ ಬೌಲ್ಡ್ ಆಗಿ ವಾಪಸಾದರು.

  ಧರ್ಮೆಂದ್ರ ಜಡೇಜ ಮತ್ತು ಜಯದೇವ್ ಉನದ್ಕಟ್ ಅಂತಿಮ ವಿಕೆಟ್‌ಗೆ 38 ರನ್‌ಗಳ ಜೊತೆಯಾಟ ನೀಡಿದರು. ಉನದ್ಕಟ್ (20) ಅವರು ಶಹಬಾಝ್ ಅಹ್ಮದ್ ಎಸೆತದಲ್ಲಿ ಬೌಲ್ಡ್ ಆಗಿ ನಿರ್ಗಮಿಸುವುದರೊಂದಿಗೆ ಸೌರಾಷ್ಟ್ರ ಆಲೌಟಾಯಿತು. ಧರ್ಮೆಂದ್ರ ಜಡೇಜ ಔಟಾಗದೆ 33 ರನ್(52ಎ, 5ಬೌ) ಗಳಿಸಿದರು. ಬಂಗಾಳ ತಂಡದ ಆಕಾಶ ದೀಪ್ 98ಕ್ಕೆ 4 ವಿಕೆಟ್, ಶಹಬಾಝ್ 103ಕ್ಕೆ 3 ವಿಕೆಟ್, ಮುಕೇಶ್ ಕುಮಾರ್ 103ಕ್ಕೆ 2 ಇಶಾನ್ ಪೊರೆಲ್ 51ಕ್ಕೆ 1 ವಿಕೆಟ್ ಪಡೆದರು.

ಬಂಗಾಳ 134ಕ್ಕೆ 3:  ಬಂಗಾಳ ತಂಡ ಮೊದಲ ಇನಿಂಗ್ಸ್‌ನಲ್ಲಿ 65 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟದಲ್ಲಿ 134 ರನ್ ಗಳಿಸಿದೆ.

ಬಂಗಾಳ ಮೊದಲ ಎರಡು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಸುದೀಪ್ ಕುಮಾರ್ ಘಾರಮಿ ಜೊತೆ ಇನಿಂಗ್ಸ್ ಆರಂಭಿಸಿದ ನಾಯಕ ಅಭಿಮನ್ಯು ಈಶ್ವರನ್ (9) ಅವರು ಪ್ರೇರಕ್ ಮಂಕಡ್ ಎಸೆತದಲ್ಲಿ ಎಲ್ಬಿಡಬ್ಲು ಬಲೆಗೆ ಬಿದ್ದು ನಿರ್ಗಮಿಸಿದರು. ಆರಂಭಿಕ ಬ್ಯಾಟ್ಸ್‌ಮನ್ ಸುದೀಪ್ ಕುಮಾರ್ ಘಾರಮಿ 26 ರನ್ ಗಳಿಸಿ ನಿರ್ಗಮಿಸಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ ಸುದೀಪ್ ಚಟರ್ಜಿ ಮತ್ತು ಮನೋಜ್ ತಿವಾರಿ 89 ರನ್ ಸೇರಿಸಿದರು. ಮನೋಜ್ 35 ರನ್ ಗಳಿಸಿದ್ದಾಗ ಅವರನ್ನು ಚಿರಾಗ್ ಜೈನ್ ಎಲ್‌ಬಿಡಬ್ಲು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದರು. ಆ ಬಳಿಕ ಚಟರ್ಜಿಗೆ ವೃದ್ದಿಮಾನ್ ಸಹಾ ಜೊತೆಯಾದರು. ಸುದೀಪ್ ಚಟರ್ಜಿ 47 ರನ್(145ಎ, 5ಬೌ) ಮತ್ತು ವಿಕೆಟ್ ಕೀಪರ್ ಸಹಾ 4 ರನ್ ಗಳಿಸಿ ಬ್ಯಾಟಿಂಗ್‌ನ್ನು ನಾಲ್ಕನೇ ದಿನಕ್ಕೆ ಕಾಯ್ದಿರಿಸಿದ್ದಾರೆ.

ಸೌರಾಷ್ಟ್ರ ತಂಡದ ಧರ್ಮೆಂದ್ರ ಸಿನ್ಹಾ ಜಡೇಜ, ಪ್ರೇರಕ್ ಮಂಕಡ್ ಮತ್ತು ಚಿರಾಗ್ ಜೈನ್ ತಲಾ 1 ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News