361 ಪ್ರೌಢಶಾಲೆಗಳು ಪದವಿ ಪೂರ್ವ ಕಾಲೇಜುಗಳಾಗಿ ಉನ್ನತೀಕರಣ: ಸಚಿವ ಸುರೇಶ್ ಕುಮಾರ್
Update: 2020-03-12 17:56 IST
ಬೆಂಗಳೂರು, ಮಾ. 12: ರಾಜ್ಯದಲ್ಲಿನ 361 ಪ್ರೌಢಶಾಲೆಗಳನ್ನು ಆರ್ಥಿಕ ಇಲಾಖೆ ಅನುಮೋದನೆ ಪಡೆದು ಶೀಘ್ರದಲ್ಲೆ ಸರಕಾರಿ ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.
ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ದಿನಕರ್ ಕೇಶವ್ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯದ ಪ್ರೌಢಶಾಲೆಗಳ ಉನ್ನತೀಕರಿಸುವ ಪ್ರಸ್ತಾವನೆ ಸರಕಾರದ ಮುಂದಿದ್ದು, ಅದಕ್ಕೆ ಆರ್ಥಿಕ ಇಲಾಖೆ ಅನುಮೋದನೆ ಅಗತ್ಯವಿದೆ. ಈಗಾಗಲೇ ರಾಜ್ಯದ 361 ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲು ಕ್ರಮ ವಹಿಸಿದ್ದು, ಈ ವರ್ಷದಲ್ಲಿ ಆ ಎಲ್ಲ ಕಾಲೇಜುಗಳನ್ನು ಉನ್ನತೀಕರಿಸಲಾಗುವುದು ಎಂದ ಅವರು, ಕುಮಟ ತಾಲೂಕಿನ ಸಂತೆಗುಳಿ ಹಾಗೂ ನಾಡುಮಾಸ್ಕೇರಿಯ ಸರಕಾರಿ ಪ್ರೌಢಶಾಲೆಗಳನ್ನು ಸರಕಾರಿ ಪದವಿ ಪೂರ್ವ ಕಾಲೇಜುಗಳಾಗಿ ಉನ್ನತೀಕರಿಸಲಾಗುವುದು ಎಂದರು.