ಬೆಂಗಳೂರು: ಶಾಲೆಗೆ ತೆರಳುತ್ತಿದ್ದಾಗ ಬಾಲಕಿಯ ಮೇಲೆ ಬಿದ್ದ ಮರದ ಕೊಂಬೆ
ಬೆಂಗಳೂರು, ಮಾ.12: ನಗರದ ಹೊರವಲಯದ ರಾಮಮೂರ್ತಿ ನಗರದಲ್ಲಿ ತಂದೆಯೊಂದಿಗೆ ಬೈಕಿನಲ್ಲಿ ಶಾಲೆಗೆ ತೆರಳುತ್ತಿದ್ದ ಬಾಲಕಿಯ ತಲೆಯ ಮೇಲೆ ಒಣಗಿದ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಈ ಕುರಿತು ಸ್ಥಳೀಯರು ಬಿಬಿಎಂಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೌದೇನಹಳ್ಳಿ ಬಳಿ ಈ ಘಟನೆ ನಡೆದಿದ್ದು, ಎಂಟು ವರ್ಷದ ಬಾಲಕಿ ತ್ರಿಷಾ ತಲೆಗೆ ಗಂಭೀರವಾಗಿ ಗಾಯವಾಗಿದೆ. ತ್ರಿಷಾ ಮತ್ತು ತಂದೆ ರಾಜು ಬೆಳಗಿನ ಜಾವ ಶಾಲೆಗೆ ಎಂದು ತಮ್ಮ ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ಬೈಕಿನಲ್ಲಿ ಹೋಗುತ್ತಿದ್ದ ತಂದೆ ಮಗಳ ಮೇಲೆ ಏಕಾಏಕಿ ಒಣಗಿದ್ದ ಮರದ ಕೊಂಬೆ ಬಿದ್ದಿದೆ.
ಬಾರಿ ಗಾತ್ರದ ಮರದ ಕೊಂಬೆ ಬಿದ್ದ ಪರಿಣಾಮ ಬೈಕಿನಲ್ಲಿ ಹಿಂದೆ ಕೂತಿದ್ದ ತ್ರಿಷಾ ತಲೆಗೆ ಗಂಭೀರವಾಗಿ ಪೆಟ್ಟಾಗಿದೆ. ತಂದೆ ರಾಜುಗೂ ಸಣ್ಣಪುಟ್ಟ ಗಾಯವಾಗಿದೆ. ಸದ್ಯ ಬಾಲಕಿಯನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಒಣಗಿದ ಮರದ ಕೊಂಬೆಗಳನ್ನು ತೆರವು ಮಾಡುವಂತೆ ಇಲ್ಲಿನ ಸ್ಥಳೀಯರು ಬಿಬಿಎಂಪಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಒಣ ಮರದ ಕೊಂಬೆ ವಿದ್ಯಾರ್ಥಿನಿ ಮೇಲೆ ಬಿದ್ದಿರೋ ದೃಶ್ಯ ಇಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಿಬಿಎಂಪಿ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಾಲಕಿ ಪೋಷಕರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಚಿಕಿತ್ಸಾ ವೆಚ್ಚ ಭರಿಸಿದ ಬಿಬಿಎಂಪಿ: ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿ ತ್ರಿಷಾಳ ಆರೋಗ್ಯವನ್ನು ಗುರುವಾರ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹಾಗೂ ಆಯುಕ್ತ ಅನಿಲ್ ಕುಮಾರ್ ವಿಚಾರಿಸಿದ್ದಾರೆ.
ಈ ವೇಳೆ ಮಾತನಾಡಿದ ಆಯುಕ್ತ ಅನಿಲ್ ಕುಮಾರ್, ಮಗು ಐಸಿಯುನಲ್ಲಿದೆ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಬಾಲಕಿ ಆರೋಗ್ಯವಾಗಿ ಹೊರಬರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ. ಆಕೆಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಬಿಬಿಎಂಪಿಯೇ ಭರಿಸಲಿದೆ ಎಂದು ತಿಳಿಸಿದರು.
ಒಂದು ವಾರದ ಮುಂಚೆ ಮರ ತೆರವು ಮಾಡಲು ಬಿಬಿಎಂಪಿ ಅಧಿಕಾರಿಗಳು ಹೋಗಿದ್ದರು. ಆದರೆ, ಸ್ಥಳೀಯರು ಅದಕ್ಕೆ ವಿರೋಧ ಮಾಡಿದ್ದಾರೆ. ಅರಳಿಕಟ್ಟೆ ಮರ ಅಂತಾ ಅಡ್ಡಿಪಡಿಸಿದ್ದಾರೆ ಎಂದು ತಿಳಿಸಿದರು.