'ಅಸ್ಪೃಶ್ಯತೆ ನಿವಾರಣೆಗೆ ಜನಪ್ರತಿನಿಧಿಗಳೇ ಕೆಲಸ ಮಾಡಬೇಕು': ಅನಿಷ್ಟ ಪದ್ಧತಿ ಬಗ್ಗೆ ಮೇಲ್ಮನೆಯಲ್ಲಿ ಗಂಭೀರ ಚರ್ಚೆ

Update: 2020-03-12 13:03 GMT

ಬೆಂಗಳೂರು, ಮಾ.12: ಪ್ರಜಾಪ್ರಭುತ್ವ ದೇಶದಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ಅನೇಕ ಕಾರ್ಯಕ್ರಮಗಳು ರೂಪಿಸಿದರೂ, ಇಂದಿಗೂ ದೇಶದಲ್ಲಿ ಅಸ್ಪೃಶ್ಯತೆಯ ಅನಿಷ್ಟ ಪದ್ಧತಿ ಜೀವಂತವಾಗಿರುವುದರ ಕುರಿತು ಮೇಲ್ಮನೆಯಲ್ಲಿ ಪಕ್ಷಾತೀತವಾಗಿ ಎಲ್ಲರೂ ವಿಷಾದ ವ್ಯಕ್ತಪಡಿಸಿದ ಘಟನೆ ನಡೆಯಿತು. 

ಗುರುವಾರ ವಿಧಾನಪರಿಷತ್‌ನಲ್ಲಿ ಭಾರತದ ಸಂವಿಧಾನದ ಮೇಲಿನ ಮುಂದುವರಿದ ಚರ್ಚೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಧರ್ಮಸೇನಾ, ಅಸ್ಪೃಶ್ಯರಿಗೆ, ಶೋಷಿತರ ಅಭ್ಯುದಯಕ್ಕೆ ಸಂವಿಧಾನದಲ್ಲಿ ಅನೇಕ ಅವಕಾಶಗಳು ನೀಡಲಾಗಿದೆ. ಆದರೆ, ಇಂದಿಗೂ ಈ ಅನಿಷ್ಟ ಪದ್ಧತಿ ತೊಲಗಿಸಲು ಸಾಧ್ಯವಾಗದಿರುವುದು ವಿಷಾದನೀಯ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸದಸ್ಯ ಆರ್.ಬಿ.ತಿಮ್ಮಾಪುರ, ದೇಶದ ವಿವಿಧ ಕಡೆಗಳಲ್ಲಿ ಕೆಲವು ಸಂಸತ್ ಸದಸ್ಯರು, ಶಾಸಕರುಗಳೇ ಜೇಬಿನಲ್ಲಿ ಲೋಟ ಇಟ್ಟುಕೊಂಡು ಕಾಫಿ ಕುಡಿಯುವವರಿದ್ದಾರೆ ಎಂದು ಹೇಳುವ ಮೂಲಕ ಮತ್ತಷ್ಟು ಚರ್ಚೆಗೆ ನಾಂದಿ ಹಾಡಿದರು. ಇದಕ್ಕೆ ಬಿಜೆಪಿ ಸದಸ್ಯ ರವಿಕುಮಾರ್ ವಿಷಾದ ವ್ಯಕ್ತಪಡಿಸಿದರು.

ಬಿಜೆಪಿಯ ರವಿಕುಮಾರ್ ಮಾತನಾಡಿ, ದೇಶದಲ್ಲಿ ಅನಿಷ್ಟ ಪದ್ಧತಿಯೊಂದು ಜೀವಂತವಾಗಿರುವುದು ಖಂಡನೀಯ. ಇದನ್ನು ಎಲ್ಲರೂ ಖಂಡಿಸಲೇಬೇಕು. ನಾವಿಂದು ಯಾವ ಕಾಲದಲ್ಲಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕು. ಕಿಸೆಯಲ್ಲಿ ಟೀ ಲೋಟವನ್ನಿಟ್ಟುಕೊಂಡು ಬರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದ ಅವರು, ಈ ಪದ್ಧತಿ ಎಲ್ಲ ಸರಕಾರಗಳ ಆಡಳಿತದಲ್ಲಿಯೂ ಜೀವಂತವಾಗಿದೆ ಎಂದರು.

ಪರಿಷತ್‌ನ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ದೇಶದ ಯಾವುದೇ ಗ್ರಾಮಕ್ಕೆ ಹೋದರೂ, ಅಸ್ಪೃಶ್ಯತೆ ಕಂಡುಬರುತ್ತಿದೆ. 12ನೇ ಶತಮಾನದಲ್ಲೇ ಸಮಾನತೆಗೆ ಬಸವಣ್ಣ ಬಹುದೊಡ್ಡ ಕ್ರಾಂತಿ ಮಾಡಿದ್ದರು. ಅಂದು ಅಸ್ಪೃಶ್ಯರು ತಮ್ಮ ಹೆಜ್ಜೆ ಗುರುತು ಕಾಣದಂತೆ, ಪೊರಕೆ ಕಟ್ಟಿಕೊಂಡು ಬರಬೇಕಿತ್ತು. ಎಲ್ಲಿಯೂ ಉಗುಳುವಂತಿರಲಿಲ್ಲ. ಅಸ್ಪೃಶ್ಯತೆಯನ್ನು ಹೋಗಲಾಡಿಸದಿದ್ದರೆ, ನಮಗೆ ನಾವೇ ಆತ್ಮವಂಚನೆ ಮಾಡಿಕೊಂಡಂತೆ ಎಂದು ಹೇಳಿದರು.

ಬಿಜೆಪಿ ಸದಸ್ಯ ಪ್ರಾಣೇಶ್ ಪ್ರತಿಕ್ರಿಯಿಸಿ, ಈ ಅಸ್ಪೃಶ್ಯತೆಯನ್ನು ನಿವಾರಣೆ ಮಾಡಲು ಜನಪ್ರತಿನಿಧಿಗಳೇ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು. ಈ ವೇಳೆ ಪ್ರತಿಕ್ರಿಯಿಸಿದ ಎಸ್.ಆರ್.ಪಾಟೀಲ್, ಸಂವಿಧಾನವನ್ನು ಸಮರ್ಪಕವಾಗಿ ಜಾರಿ ಮಾಡಿದ್ದರೆ ಈ ಪದ್ಧತಿಯೂ ಜೀವಂತವಾಗಿರುತ್ತಿರಲಿಲ್ಲ ಎಂದು ಹೇಳುತ್ತಾ ಚರ್ಚೆಗೆ ತೆರೆ ಎಳೆದರು. ಈ ವೇಳೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸದಸ್ಯರು ಪಕ್ಷಾತೀತವಾಗಿ ಈ ಪದ್ಧತಿಯನ್ನು ಖಂಡಿಸಿದ ಪ್ರಸಂಗ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News