‘ನಿಮ್ಮ ಅಪ್ಪನ ಮನೆಯಿಂದ ಹಣ ತರುತ್ತೀರಾ ?’: ಸದನದಲ್ಲಿ ಗದ್ದಲ ಸೃಷ್ಟಿಸಿದ ಜೆಡಿಎಸ್‌ ಸದಸ್ಯನ ಹೇಳಿಕೆ

Update: 2020-03-12 13:28 GMT

ಬೆಂಗಳೂರು, ಮಾ. 12: ಜೆಡಿಎಸ್ ಸದಸ್ಯ ಶರವಣ ಅವರ 'ಅಭಿವೃದ್ಧಿ ಕೆಲಸಗಳನ್ನು ಮಾಡಲು ನಿಮ್ಮ ಅಪ್ಪನ ಮನೆಯಿಂದ ಹಣ ತರುತ್ತೀರಾ’ ಎಂಬ ಹೇಳಿಕೆಯು ಮೇಲ್ಮನೆಯಲ್ಲಿಂದು ವಾದ-ವಿವಾದಗಳಿಗೆ ವೇದಿಕೆಯಾಯಿತು.

ಗುರುವಾರ ವಿಧಾನಪರಿಷತ್‌ನಲ್ಲಿ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಶರವಣ, ‘ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಒಬ್ಬರು ಮುಸ್ಲಿಮರು ನನಗೆ ಮತ ಹಾಕಿಲ್ಲ, ಆದರೆ, ಅಭಿವೃದ್ಧಿ ಕೆಲಸಕ್ಕೆ ನಾನು ಬೇಕು, ಹೀಗಾಗಿ, ಇನ್ಮುಂದೆ ಯಾವುದೇ ಅಭಿವೃದ್ಧಿ ಮಾಡಲ್ಲ, ವಿಶೇಷ ಪ್ಯಾಕೇಜ್ ಕೊಡಲ್ಲ ಎಂದಿದ್ದನ್ನು ಪ್ರಸ್ತಾಪಿಸಿದರು. ಜೊತೆಗೆ ಅಭಿವೃದ್ಧಿ ಕೆಲಸಕ್ಕೆ ಅವರಪ್ಪನ ಮನೆಯಿಂದ ಏನಾದರೂ ಹಣ ಕೊಡುತ್ತಾರ ಎಂದು ಕಿಡಿಕಾಡಿದರು.

ಶರವಣ ನೀಡಿದ ಹೇಳಿಕೆಯು ಪರಿಷತ್‌ನ ಆಡಳಿತ ಪಕ್ಷದ ಶಾಸಕರನ್ನು ಕೆರಳಿಸಿದ್ದು, ಆಡಳಿತ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ, ವಿಪಕ್ಷದ ಸದಸ್ಯರು ಶರವಣ ಮಾತಿಗೆ ಪ್ರತಿರೋಧ ತೋರಿದರು. ಈ ವೇಳೆ ಮಾತನಾಡಿದ ಆಡಳಿತ ಪಕ್ಷದ ನಾಯಕ ಕೋಟಾ ಶ್ರೀನಿವಾಸಪೂಜಾರಿ, ಸದನದ ಸದಸ್ಯರು ಮಾತನಾಡುವ ವೇಳೆ ಮಾತಿನ ಮೇಲೆ ಹಿಡಿತವಿರಬೇಕು ಎಂದರು.

ಈ ಮನೆಗೆ ಸಂಬಂಧಪಡದ ಶಾಸಕರೊಬ್ಬರ ಹೆಸರನ್ನು ಪ್ರಸ್ತಾಪಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ಈ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ ಎಂದು ಹೇಳಿದರು. ಇದಕ್ಕೆ ಬಿಜೆಪಿಯ ಪ್ರಾಣೇಶ್, ತೇಜಸ್ವಿನಿ, ರವಿಕುಮಾರ್ ದ್ವನಿಗೂಡಿಸಿ, ಶರವಣ ಮಾತಿಗೆ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು. ಈ ವೇಳೆ ಆಡಳಿತ ಪಕ್ಷದ ಎಲ್ಲರೂ ದ್ವನಿಗೂಡಿಸಿದರು.

ಜೆಡಿಎಸ್‌ನ ಬಸವರಾಜ ಹೊರಟ್ಟಿ, ತಮ್ಮದೇ ಪಕ್ಷದ ಸದಸ್ಯರಾದ ಶರವಣ ಆಡಿದ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಹಾಗೂ ಐವನ್ ಡಿಸೋಜ ಸೇರಿದಂತೆ ಮತ್ತಿತರರು ಶರವಣ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಅನಂತರ ಮಾತನಾಡಿದ ಶರವಣ, ಯಾರ ಮನಸ್ಸನ್ನೂ ನಾನು ನೋಯಿಸಲು ಈ ಮಾತಾಡಿಲ್ಲ ಎಂದು ಸ್ಪಷ್ಟಪಡಿಸಲು ಪ್ರಯತ್ನಿಸಿದರು. ಆದರೆ, ಆಡಳಿತ ಪಕ್ಷದವರು ಮಾತನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಅದಕ್ಕೆ ಶರವಣ ಈ ಪದವನ್ನು ಹಿಂಪಡೆಯುತ್ತಿದ್ದೇನೆ ಎಂದು ಘೋಷಿಸಿದರು.

ಆಡಳಿತ ಪಕ್ಷದವರು ಶರವಣ ಕ್ಷಮಯಾಚಿಸಲೇಬೇಕು ಎಂದು ಪಟ್ಟು ಹಿಡಿದರು. ಈ ನಡುವೆ ಮಧ್ಯಪ್ರವೇಶಿಸಿದ ಪ್ರತಿಪಕ್ಷದ ನಾಯಕ, ಶರವಣ ಮಾತನ್ನು ಹಿಂಪಡೆದಿದ್ದಾರೆ. ಹೆಚ್ಚು ಬೆಳೆಸಬೇಡಿ ಎಂದು ಮನವಿ ಮಾಡಿದರು. ಆಗ ಆಡಳಿತ ಪಕ್ಷದ ನಾಯಕ ಶ್ರೀನಿವಾಸ ಪೂಜಾರಿ, ಆ ಪದವನ್ನು ಕಡತದಿಂದ ತೆಗೆಯುವಂತೆ ಮನವಿ ಮಾಡಿದರು. ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ, ಆ ಪದವನ್ನು ತೆಗೆಯುವಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News