ಬೆಂಗಳೂರಿನಲ್ಲಿ 1ರಿಂದ 6ನೆ ತರಗತಿಗೆ ವಾರ್ಷಿಕ ಪರೀಕ್ಷೆ ಇಲ್ಲ !
ಬೆಂಗಳೂರು, ಮಾ. 12: ಕೊರೋನ ವೈರಸ್ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಉತ್ತರ, ದಕ್ಷಿಣ ಹಾಗೂ ಬೆಂ.ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ 1ರಿಂದ 6ನೆ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಇರುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈಗಾಗಲೇ ಪೂರ್ವ ಪ್ರಾಥಮಿಕ, ಎಲ್‌ಕೆಜಿಯಿಂದ 5ನೆ ತರಗತಿ ವರೆಗೆ ರಜೆ ಘೋಷಣೆ ಮಾಡಲಾಗಿತ್ತು. ಇದೀಗ 6ನೆ ತರಗತಿ ವಿದ್ಯಾರ್ಥಿಗಳಿಗೂ ಬೇಸಿಗೆ ರಜೆ ಘೋಷಿಸಿದ್ದು, 2019-20ನೆ ಸಾಲಿನಲ್ಲಿ ಎಫ್‌ಎ1, ಎಫ್‌ಎ2, ಎಫ್‌ಎ3, ಎಫ್‌ಎ4 ಮತ್ತು ಎಸ್‌ಎ1ರಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿ ವಿದ್ಯಾರ್ಥಿಗಳ ಶ್ರೇಣಿಕೃತ ಫಲಿತಾಂಶ ಪ್ರಕಟಿಸಿ ಮುಂದಿನ ತರಗತಿಗಳಿಗೆ ಭಡ್ತಿ ನೀಡಬೇಕು ಹಾಗೂ ಈ ಸಾಲಿನ ಬೇಸಿಗೆ ರಜೆಯನ್ನು ಇಂದಿನಿಂದಲೇ ಘೋಷಿಸಬೇಕೆಂದು ನಿರ್ದೇಶನ ನೀಡಲಾಗಿದೆ.
ಮಾ.23ರ ಒಳಗೆ ಪರೀಕ್ಷೆ ಪೂರ್ಣ: 7ನೆ ತರಗತಿಯಿಂದ 10ನೆ ತರಗತಿಯ ವರೆಗೆ ಪರೀಕ್ಷಾ ಪೂರ್ವ ಸಿದ್ದತಾ ರಜೆಯ ಮಾದರಿಯಲ್ಲಿ ಸ್ಥಗಿತಗೊಳಿಸಿ ಪರೀಕ್ಷಾ ದಿನಗಳಂದು ಮಾತ್ರ ಹಾಜರಾಗಲು ಸೂಚಿಸುವುದು. 7ರಿಂದ 9ನೆ ತರಗತಿಯ ವಿದ್ಯಾರ್ಥಿಗಳಿಗೆ ಮಾ.23ರ ಒಳಗೆ ಪರೀಕ್ಷೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಿ, ಬೇಸಿಗೆ ರಜೆಯನ್ನು ಘೋಷಿಸಬೇಕು ಎಂದು ಸೂಚಿಸಲಾಗಿದೆ.
10ನೆ ತರಗತಿ ವಿದ್ಯಾರ್ಥಿಗಳಿಗೆ ಈಗಾಗಲೇ ನಿಗದಿಯಾಗಿರುವ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸುವುದು. ಬೇಸಿಗೆ ರಜೆಯ ನಂತರ 2020-21ನೆ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯಂತೆ ಶಾಲೆಗಳನ್ನು ಪುನರಾರಂಭ ಮಾಡಬೇಕು ಎಂದು ಸುತ್ತೋಲೆಯಲ್ಲಿ ನಿರ್ದೇಶಿಸಲಾಗಿದೆ.
ಅಲ್ಲದೆ, ವಿದ್ಯಾರ್ಥಿಗಳು ಸುರಕ್ಷತಾ ಕ್ರಮವಾಗಿ ಮಾಸ್ಕ್ ಧರಿಸಿ ಪರೀಕ್ಷೆ ಬರೆಯಲು ಇಚ್ಛಿಸಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಅನುಮತಿ ನೀಡಬೇಕು. ಪರೀಕ್ಷೆ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಲ್ಲ ಶಾಲಾ ಮುಖ್ಯಸ್ಥರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.