×
Ad

ಮಧ್ಯಪ್ರದೇಶ ಶಾಸಕರ ಭೇಟಿಗೆ ನಿರಾಕರಣೆ: ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡರು- ಪೊಲೀಸರ ನಡುವೆ ಜಟಾಪಟಿ

Update: 2020-03-12 20:25 IST
ಬೆಂಗಳೂರಿನಲ್ಲಿರುವ ಮಧ್ಯಪ್ರದೇಶ ಶಾಸಕರು (ಫೈಲ್ ಚಿತ್ರ)

ಬೆಂಗಳೂರು, ಮಾ.12: ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಉಳಿದುಕೊಂಡಿದ್ದ ಇಲ್ಲಿನ ದೇವನಹಳ್ಳಿಯ ಎಂಬೆಸಿ ರೆಸಾರ್ಟ್‌ಗೆ ಮಧ್ಯಪ್ರದೇಶದ ಸಚಿವ ಸೇರಿದಂತೆ ಪ್ರಮುಖ ಕಾಂಗ್ರೆಸ್ ಮುಖಂಡರು ಆಗಮಿಸಿದ ಸಂದರ್ಭ ಪೊಲೀಸರೊಂದಿಗೆ ಭಾರೀ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಡೆದಿದೆ.

ಗುರುವಾರ ಬಿಲ್ಲಮಾರನಹಳ್ಳಿಯ ಎಂಬೆಸಿ ರೆಸಾರ್ಟ್ ಬಳಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ರಿಸಾರ್ಟ್‌ನಲ್ಲಿರುವ ತಮ್ಮ ಮುಖಂಡರೊಂದಿಗೆ ಮಾತುಕತೆ ನಡೆಸಲು ಮಧ್ಯಪ್ರದೇಶದ ಸಚಿವ ಜಿತು ಪಟ್ವಾರಿ ನೇತೃತ್ವದಲ್ಲಿ ಅನೇಕರು ರೆಸಾರ್ಟ್ ಪ್ರವೇಶಕ್ಕೆ ಮುಂದಾದ ವೇಳೆ ಪೊಲೀಸ್ ಅಧಿಕಾರಿ ಅವರನ್ನು ತಬ್ಬಿ ಹೊರ ನೂಕಲು ಮುಂದಾಗಿದ್ದಾರೆ. ಆಗ ಕೋಪಗೊಂಡ ಜಿತು ಪೊಲೀಸರನ್ನು ಕೈಯಿಂದ ನೂಕಿದ್ದಾರೆ. ಈ ಸಮಯದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು ಎಂದು ತಿಳಿದುಬಂದಿದೆ.

ವಶಕ್ಕೆ: ನಂತರ ಪೊಲೀಸರ ಮೇಲೆ ಕೈ ಮಾಡಿದರೆಂಬ ಆರೋಪದ ಮೇಲೆ ಜಿತು ಪಟ್ವಾರಿ ಸೇರಿದಂತೆ ಹತ್ತಾರು ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ಕೂಡಲೆ ಚಿಕ್ಕಜಾಲ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು.

ಒಟ್ಟು 21 ಮಂದಿ ಶಾಸಕರು ಬೆಂಗಳೂರಿನ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದು ಇವರಿಗೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News