ಐವರಿಗೆ ಕೊರೋನ ಸೋಂಕು ದೃಢ: ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು, ಮಾ.12: ರಾಜ್ಯದಲ್ಲಿ ಈವರೆಗೆ ಐವರಿಗೆ ಕೊರೋನ ಸೋಂಕು ತಗುಲಿರುವ ಖಚಿತ ಪ್ರಕರಣಗಳು ವರದಿಯಾಗಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮದುವೆ ಬಳಿಕ ಮಧುಚಂದ್ರಕ್ಕೆ ಗ್ರೀಸ್ ದೇಶಕ್ಕೆ ಪ್ರವಾಸ ಹೋಗಿದ್ದ ವ್ಯಕ್ತಿಯೊಬ್ಬರು ಹಿಂದಿರುಗಿದ್ದು, ತಪಾಸಣೆ ವೇಳೆ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದರು.
ಆ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ 17 ಮಂದಿ ಹಾಗೂ 10 ಮಂದಿ ಕುಟುಂಬ ಸದಸ್ಯರನ್ನು ತಪಾಸಣೆಗೊಳಪಡಿಸಿ ಐಸೋಲೇಷನ್‌ನಲ್ಲಿ ಇಡಲಾಗಿದೆ. ಕೊರೋನ ಸೋಂಕಿತರಿಗೆ ಸಮಗ್ರವಾಗಿ ಚಿಕಿತ್ಸೆ ನೀಡಲು ಬೆಂಗಳೂರಿನಲ್ಲಿ 350-400 ಹಾಸಿಗೆಗಳ ಒಂದು ಪ್ರತ್ಯೇಕ ಆಸ್ಪತ್ರೆ ಸ್ಥಾಪನೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಸುಧಾಕರ್ ಹೇಳಿದರು.
ಐಟಿ, ಬಿಟಿ ಕಂಪೆನಿಗಳ ಸುಮಾರು 300 ಜನ ಪ್ರತಿನಿಧಿಗಳ ಜೊತೆ ಇವತ್ತು ಒಂದು ಸಭೆಯನ್ನು ನಡೆಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವಂತಹ ಯಾವುದೇ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು ಆಯೋಜನೆ ಮಾಡುವುದಿದ್ದರೆ, ಅದನ್ನು ಮುಂದೂಡುವಂತೆ ಸಲಹೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಅಲ್ಲದೆ, ಫೆ.21ರ ಬಳಿಕ ವಿದೇಶಗಳಿಗೆ ಹೋಗಿರುವ ಉದ್ಯೋಗಿಗಳ ಮಾಹಿತಿ ಒದಗಿಸುವಂತೆ ಐಟಿ, ಬಿಟಿ ಕಂಪೆನಿಗಳ ಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ. ಒಂದು ವೇಳೆ ಯಾರಾದರೂ ಈಗ ವಿದೇಶ ಪ್ರವಾಸ ಕೈಗೊಳ್ಳುವುದಿದ್ದರೆ ಸ್ವಲ್ಪ ದಿನಗಳ ಮಟ್ಟಿಗೆ ಮುಂದೂಡುವಂತೆಯೂ ತಿಳಿಸಲಾಗಿದೆ ಎಂದು ಸುಧಾಕರ್ ಹೇಳಿದರು.
ಆರೋಗ್ಯ ಸಚಿವ ಬಿ.ಶ್ರೀರಾಮುಲು ಜೊತೆ ಮಾತನಾಡಿದ್ದೇನೆ. ಅವರು ಬೇರೆ ಕೆಲಸದಲ್ಲಿ ತೊಡಗಿಕೊಂಡಿರುವುದರಿಂದ, ನಾನೊಬ್ಬನೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.