×
Ad

ಸದನದಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾದ 'ಸಂಡೆ, ಮಂಡೆ ಲಾಯರ್'

Update: 2020-03-12 21:51 IST

ಬೆಂಗಳೂರು, ಮಾ. 12: ‘ನಾನು ವಕೀಲನಾಗಿ ಅರ್ಧಂಬರ್ಧ ಕೆಲಸ ಮಾಡಿದ್ದೇನೆ. ನಾನೊಂದು ರೀತಿಯಲ್ಲಿ ಸಂಡೆ, ಮಂಡೆ ಲಾಯರ್ ಇದ್ದಂತೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಉಲ್ಲೇಖಿಸಿದ್ದು ವಿಧಾನಸಭೆಯಲ್ಲಿ ಕೆಲಕಾಲ ಸ್ವಾರಸ್ಯಕರ ಚರ್ಚೆಗೆ ನಾಂದಿಯಾಯಿತು.

ಗುರುವಾರ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಪ್ರಸ್ತಾವದ ಮೇಲೆ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ, ಮಧ್ಯಪ್ರವೇಶಿಸಿದ ಸಚಿವ ಜಗದೀಶ್ ಶೆಟ್ಟರ್, ‘ನೀವು ಚೆನ್ನಾಗಿ ವಕೀಲಿಕೆ ಮಾಡ್ತೀರಿ’ ಎಂದು ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 1974ರಲ್ಲಿ ನಾನು ವಕೀಲನಾಗಿದ್ದೆ. ಆದರೆ, 1975ರಲ್ಲಿ ತುರ್ತು ಪರಿಸ್ಥಿತಿ ಕಾರಣಕ್ಕೆ ಕೈಬಿಟ್ಟೆ. ಆ ಬಳಿಕ ಅರ್ಧ ರಾಜಕಾರಣಿ, ಅರ್ಧ ವಕೀಲನಾಗಿದ್ದೆ ಎಂದರು.

ನಾನು ಪೂರ್ಣ ಪ್ರಮಾಣದ ವಕೀಲನಾಗಲು ಸಾಧ್ಯವಾಗಲಿಲ್ಲ. ವಕೀಲರ ಕೆಲಸ ಮುಂದುವರೆಸಿದರೆ ಜೀವನ ಅಲ್ಲೇ ಇರುತ್ತಿತ್ತು. ಹೀಗಾಗಿ ನಾನು ಒಂದು ರೀತಿ ಸಂಡೆ, ಮಂಡೆ ಲಾಯರ್ ಆಗಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು. ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಸದಸ್ಯ ಕೆ.ಜಿ.ಬೋಪಯ್ಯ, ‘ಸಂಡೆ, ಮಂಡೆ ಲಾಯರ್’ ಎಂಬುದನ್ನು ಕಡತದಿಂದ ತೆಗೆದುಹಾಕಬೇಕೆಂದು ಆಗ್ರಹಿಸಿದರು.

ಆಗ ಸಿದ್ದರಾಮಯ್ಯ, ‘ಸಂಡೆ, ಮಂಡೆ ಲಾಯರ್ ಎಂಬುದು ಅಸಂವಿಧಾನಿಕವಲ್ಲ. ನನಗೆ ನಾನೇ ಹೇಳಿಕೊಂಡಿದ್ದೇನೆ. ಬೋಪಯ್ಯ ಬೇಡ ಎನ್ನುತ್ತಿದ್ದಾರೆ. ಅವರ ಖುಷಿಗಾಗಿ ತೆಗೆದು ಹಾಕಿ. ಆದರೆ, ನಾನು 1983ರಲ್ಲೆ ನನ್ನ ವಕೀಲ ವೃತ್ತಿ ಕೈಬಿಟ್ಟಿದ್ದು, ಮುಖ್ಯಮಂತ್ರಿ ಆದ ಬಳಿಕ ನನ್ನ ಸನ್ನದ್ದನ್ನು ರದ್ದುಪಡಿಸಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News