'ಕೊರೋನದಿಂದ ಬಚಾವಾಗಲು ಬ್ರಾಂದಿ ಮೊರೆ ಹೋಗಬೇಕಾಗಿದೆ': ಮೇಲ್ಮನೆಯಲ್ಲಿ ಸ್ವಾರಸ್ಯಕರ ಚರ್ಚೆ
ಬೆಂಗಳೂರು, ಮಾ.12: ಕೋವಿಡ್-19(ಕೊರೋನ) ವೈರಸ್‌ನಿಂದ ಕಾಪಾಡಬೇಕಾಗಿರುವ ದೇವರು, ದಿಂಡರು ಎಲ್ಲಿ ಹೋಗಿದ್ದಾರೆ? ಕಣ್ಣಿಗೆ ಕಾಣದಂತಹ ಒಂದು ವೈರಾಣುವನ್ನು ಕೊಲ್ಲಲು ಬ್ರಾಂದಿಯ ಮೊರೆ ಹೋಗಬೇಕಾಗಿದೆ...!!
ಗುರುವಾರ ವಿಧಾನಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಸಂವಿಧಾನದ ಮೇಲಿನ ಚರ್ಚೆಯ ಮಧ್ಯೆ ಈ ಕುರಿತು ಪ್ರಸ್ತಾಪಿಸಿ, ಇವತ್ತು ಕೊರೋನ ವೈರಸ್ ಎಲ್ಲೆಡೆ ವ್ಯಾಪಕವಾಗಿ ಹರಡಿಕೊಳ್ಳುತ್ತಿದೆ. ದಿನಾ ಒಂದೊಂದು ತರ ಹೇಳುವ ಸ್ವಾಮಿಗಳು, ಎಲ್ಲವನ್ನೂ ಪರಿಹರಿಸುವ ಮುಕ್ಕೋಟಿ ದೇವರುಗಳು ಎಲ್ಲಿಗೆ ಹೋದರು ಪೂಜಾರಿ ಅವ್ರೇ? ಎಂದು ಪ್ರಶ್ನಿಸುವ ಮೂಲಕ ಒಂದು ಸ್ವಾರಸ್ಯಕರ ಚರ್ಚೆಗೆ ಪೀಠಿಕೆ ಹಾಕಿದರು.
ಚರ್ಚೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ನಗೆಯ ಬುಗ್ಗೆ ಚಿಮ್ಮಿಸಿದರು. ಸಾಮಾನ್ಯವಾಗಿ ಸಮಸ್ಯೆ ಬಂದಾಗ, ದೇವರ ಮೊರೆಹೋಗುತ್ತೇವೆ. ಆದರೆ, ಕೊರೋನ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ದೇವಸ್ಥಾನಗಳಿಗೇ ಬರಬೇಡಿ ಎಂದು ಹೇಳಲಾಗುತ್ತಿದೆ. ದೇವತೆಗಳು, ಸ್ವಾಮೀಜಿಗಳು ಯಾರಿಗೂ ದರ್ಶನ ನೀಡುತ್ತಿಲ್ಲ. ಇನ್ನು, ಭಕ್ತರನ್ನು ಕಾಪಾಡುವವರು ಯಾರು? ಈ ವೈರಸ್‌ನಿಂದ ಬಚಾವಾಗಲು ಬ್ರಾಂದಿ ಮೊರೆ ಹೋಗಬೇಕಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಭಕ್ತರ ಕಷ್ಟಗಳನ್ನು ನಿವಾರಣೆ ಮಾಡುವ ಎಲ್ಲ ಧರ್ಮಗಳ ದೇವರುಗಳಿಂದ ಯಾಕೆ ಅವರ ನೋವಿಗೆ ಈಗ ಸ್ಪಂದಿಸುತ್ತಿಲ್ಲ ಎಂದ ಅವರು, ಕೊರೋನ ಮಹಾಮಾರಿಗೆ ಬ್ರಾಂದಿಯೇ ಔಷಧಿ ಆಗಿದೆ. ಹೀಗಾಗಿ, ಇನ್ನು ಸ್ವಲ್ಪ ದಿನಗಳ ಕಾಲ ಈ ಕಾಯಿಲೆಯನ್ನು ಉಳಿಸಿಕೊಳ್ಳಿ ಎಂದು ಎದುರಿಗಿದ್ದ ಅಬಕಾರಿ ಸಚಿವರಿಗೆ ಸಲಹೆ ಮಾಡಿದರು.
ಕೋವಿಡಮ್ಮ ದೇವಸ್ಥಾನದಲ್ಲಿ ಬ್ರಾಂದಿ ತೀರ್ಥ!: ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್‌ನ ಪಿ.ಆರ್.ರಮೇಶ್, ಈ ಹಿಂದೆ ಒಮ್ಮೆ ಪ್ಲೇಗ್ ಮಹಾಮಾರಿ ಬಂದಿತ್ತು. ಆಗ ಎಲ್ಲ ಕಡೆಗಳಲ್ಲಿ ಪ್ಲೇಗಮ್ಮ ದೇವಸ್ಥಾನಗಳು ನಿರ್ಮಾಣವಾಗಿದ್ದವು. ಈಗ ಕೊರೋನ ಬಂದಿದ್ದು, ಕೋವಿಡಮ್ಮ ದೇವಸ್ಥಾನ ಅಂತ ಬಂದರೂ ಬರಬಹುದು. ಒಂದು ವೇಳೆ ದೇವಾಲಯ ನಿರ್ಮಿಸಿದರೆ, ಅಲ್ಲಿ ತೀರ್ಥವಾಗಿ ಬ್ರಾಂದಿಯೇ ಇರಲಿದೆ ಎಂದು ಚಟಾಕಿ ಹಾರಿಸಿದರು.
ಜೆಡಿಎಸ್‌ನ ಶ್ರೀಕಂಠೇಗೌಡ ಎದ್ದುನಿಂತು ‘ನನಗೆ ತುಂಬಾ ಕನ್‌ಫ್ಯೂಸ್ ಆಗುತ್ತಿದೆ. ಸಿ.ಎಂ. ಇಬ್ರಾಹಿಂ ಈರುಳ್ಳಿ ಜತೆಗೆ ಉಪ್ಪು ಹಾಕಿಕೊಂಡು ತಿನ್ನಿರಿ ಅಂದರು, ಇವರು ಬ್ರಾಂದಿ ತೆಗೆದುಕೊಳ್ಳಿ ಅಂತಿದಾರೆ. ನಾವು ಯಾವುದನ್ನು ನಂಬಬೇಕು ಎಂದು ಸಭಾಪತಿಗೆ ಮನವಿ ಮಾಡಿದರು.
ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಮಾತನಾಡಿ, ಬ್ರಾಂದಿ ಮಾತ್ರನಾ ಅಥವಾ ಅದರ ಜತೆಗೆ ಇನ್ನು ಏನಾದರೂ ಇದಿಯಾ ಅಂದರು. ಆದರೆ ಆಡಳಿತ ಪಕ್ಷದ ತೇಜಸ್ವಿನಿಗೌಡ, ‘ನಾವು ಮಹಿಳೆಯರು ಕೋವಿಡ್-19 ಮತ್ತು 90 (ನೈಂಟಿ) ಎರಡನ್ನೂ ವಿರೋಧಿಸುತ್ತೇವೆ’ ಎಂದು ನಿಲುವು ಪ್ರಕಟಿಸಿದರು. ಆಗ ಸಭೆ ನಗೆಗಡಲಲ್ಲಿ ತೇಲಿತು. ಆದರೆ, ಈ ಎಲ್ಲ ಚರ್ಚೆಗಳ ನಡುವೆ ಅಬಕಾರಿ ಸಚಿವ ಎಚ್. ನಾಗೇಶ್ ಮಾತ್ರ ಗಂಭೀರವಾಗಿ ಕೇಳಿಸಿಕೊಂಡು, ಮೌನಕ್ಕೆ ಶರಣಾಗಿದ್ದರು.