‘ಎನ್ನ ಗರುಡಾ ಸೌಖ್ಯಮಾ...’: ವಿಧಾನ ಪರಿಷತ್‌ನಲ್ಲಿ ಬಿಜೆಪಿ ಹಿರಿಯ ಸದಸ್ಯ ಹೇಳಿದ್ದೇನು ?

Update: 2020-03-12 17:48 GMT

ಬೆಂಗಳೂರು, ಮಾ.12: ಇತ್ತೀಚಿನ ದಿನಗಳಲ್ಲಿ ಮಂತ್ರಿ, ಶಾಸಕರ ಸುತ್ತಲೂ ಇರುವ ಆಪ್ತ ಸಹಾಯಕರು ತಾವೇ ಪ್ರಮುಖರು ಎಂದು ಬಿಂಬಿಸಿಕೊಳ್ಳುತ್ತಾರೆ. ಇದಕ್ಕೆ ಹೊಂದಿಕೊಳ್ಳುವಂತೆ ತಮಿಳಿನಲ್ಲಿ ‘ಎನ್ನ ಗರುಡಾ ಸೌಖ್ಯಮಾ’ ಎನ್ನುವ ತಮಿಳು ಜೋಕ್ ಇದೆ ಎಂದು ಹೇಳಿ ಬಿಜೆಪಿ ಹಿರಿಯ ಸದಸ್ಯ ಆಯನೂರು ಮಂಜುನಾಥ ಸದನದ ಗಮನ ಸೆಳೆದರು.

ಗುರುವಾರ ವಿಧಾನ ಪರಿಷತ್‌ನಲ್ಲಿ ಮಧ್ಯಾಹ್ನ ಭೋಜನ ನಂತರ ಆರಂಭವಾದ ಭಾರತ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ವಿಷ್ಣುವಿನ ವಾಹನ ಗರುಡಾ ಶಿವನನ್ನು ನೋಡಲು ಹೋಗುವ ಸಂದರ್ಭದಲ್ಲಿ ಅಲ್ಲಿನ ಮಂಡಲವೆಲ್ಲ ಅಲ್ಲೋಲ ಕಲ್ಲೋಲವಾಗುತ್ತದೆ. ಆಗ ಶಿವ ಕೊರಳಲ್ಲಿದ್ದ ಹಾವು ಗರುಡ ಬರುವ ರಭಸಕ್ಕೆ ಅವಿತುಕೊಳ್ಳುತ್ತದೆ. ಶಾಂತ ಸ್ವರೂಪದತ್ತ ಮಂಡಲ ಇದ್ದಾಗ ಹಾವು ಮೆಲ್ಲಗೆ ಗರುಡನ ಮುಂದೆ ಬಂದಾಗ ‘ಎನ್ನ ಗರುಡಾ ಸೌಖ್ಯಮಾ’ ಎಂದು ಕೇಳುತ್ತದೆ. ಅಂದರೆ ಶಿವನು ಇದ್ದಾಗ ಹಾವಿಗೆ ಪೌರುಷ. ಹಾಗೆಯೇ ಜನಪ್ರತಿನಿಧಿಗಳ ಹೆಸರು ಹೇಳಿಕೊಂಡು ಕೆಲ ವ್ಯಕ್ತಿಗಳು ತಮ್ಮ ಕೆಲಸ ಪೂರೈಸಿಕೊಳ್ಳುತ್ತಾರೆ ಎಂದು ಅವರು ತಮಿಳು ಭಾಷೆಯಲ್ಲಿಯೇ ಉಲ್ಲೇಖಿಸಿದರು.

ಅಲ್ಲದೆ, ಜನಪ್ರತಿನಿಧಿಗಳು ನಮ್ಮ ಪಕ್ಕದಲ್ಲಿರುವ ಚೇಲಾಗಳ ಬಗ್ಗೆ ಎಚ್ಚರಿಕೆ ಇರಬೇಕು. ಆಪ್ತ ಸಹಾಯಕರು ನಮ್ಮ ಹೆಸರು ಹೇಳಿಕೊಂಡು ಅಧಿಕಾರಿಗಳ ಮೇಲೆ ದರ್ಪ ತೋರುತ್ತಾರೆ ಎಂಬುದನ್ನು ತಿಳಿಯಬೇಕು ಎಂದು ಆಯನೂರು ನುಡಿದರು.

ಜಾತಿಗೊಂದು ನಗರ: ಹಣವಿದ್ದವರು ಗಾಂಧಿನಗರದಲ್ಲಿ, ಕೆಳವರ್ಗ ಅಥವಾ ಬಡವರು ಬಾಪೂಜಿ ನಗರದಲ್ಲಿ ಎಂಬುದಾಗಿ ವಿಂಗಡಿಸಿರುವುದು ಬೇಸರದ ಸಂಗತಿ. ಸಮಾಜದಲ್ಲಿ ಮಾತ್ರವಲ್ಲದೆ ರಾಜಕೀಯದಲ್ಲೂ ತಾರತಮ್ಯವಿದೆ ಎಂದು ತಿಳಿಸಿದರು.

ಅಂಬೇಡ್ಕರ್ ಅವರು ಅಲ್ಪಜ್ಞಾನಿಗಳಿಗೆ ದಲಿತ ನಾಯಕರೆನಿಸಬಹುದು. ಅವರು ದಲಿತ ನಾಯಕ ಅಲ್ಲ. ಇಡೀ ಸರ್ವ ಧರ್ಮಗಳ ಸಮನ್ವಯ ಸಾರಿದ ವ್ಯಕ್ತಿ. ಅವರಿಗಾದ ನೋವಿನ ದ್ವೇಷವನ್ನು ಸಂವಿಧಾನ ಹಂಚಲಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News