×
Ad

ರಾಜ್ಯಾದ್ಯಂತ ಒಂದು ವಾರ ಸಭೆ-ಸಮಾರಂಭ, ಮಾಲ್ ಗಳು, ವಿವಿಗಳು, ಥಿಯೇಟರ್ ಗಳು ಬಂದ್ !

Update: 2020-03-13 15:07 IST

ಬೆಂಗಳೂರು, ಮಾ. 13: ಕೊರೋನ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಾಳೆ(ಮಾ.14)ಯಿಂದ ಒಂದು ವಾರದ ಅವಧಿಗೆ ರಾಜ್ಯಾದ್ಯಂತ ಮಾಲ್ ಗಳು, ಚಿತ್ರಮಂದಿರಗಳು, ನೈಟ್ ಕ್ಲಬ್ ಗಳನ್ನು ಮುಚ್ಚುವಂತೆ ಆದೇಶ ಮಾಡಿದೆ.

ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದ್ದು, ಬೇಸಿಗೆ ಶಿಬಿರಗಳು, ಸಭೆ-ಸಮಾರಂಭಗಳು, ಕ್ರೀಡಾಕೂಟ, ವಿಚಾರ ಸಂಕಿರಣ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸದಿರುವಂತೆ ನಿರ್ದೇಶನ ನೀಡಲಾಗಿದೆ.

ವಿವಿಗಳಿಗೂ ರಜೆ: ಸರಕಾರ ನಡೆಸುತ್ತಿರುವ ವಿದ್ಯಾರ್ಥಿ ನಿಲಯಗಳು, ಸರಕಾರಿ ವಸತಿ ಶಾಲೆಗಳಲ್ಲಿ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ. ಪರೀಕ್ಷೆಗಳು, ಸರಕಾರಿ ಕಚೇರಿಗಳು, ವಿಧಾನ ಮಂಡಲ ಅಧಿವೇಶನ ಅಬಾಧಿತವಾಗಿ ನಡೆಯಲಿವೆ. ವಿಶ್ವ ವಿದ್ಯಾಲಯ, ಕಾಲೇಜುಗಳಿಗೂ ಒಂದು ವಾರ ರಜೆ ಘೋಷಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದು ಯಡಿಯೂರಪ್ಪ ಮನವಿ ಮಾಡಿದರು.

ಈ ಸೋಂಕು ತಗುಲದಿರುವಂತೆ ಮುನ್ನೆಚ್ಚರಿಕೆ ವಹಿಸಲು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು. ಎಲ್ಲ ಖಾಸಗಿ ಆಸ್ಪತ್ರೆಯವರು ಈ ಸೋಂಕಿನ ಲಕ್ಷಣ ಇರುವ ರೋಗಿಗಳು ಬಂದಲ್ಲಿ ಕಡ್ಡಾಯವಾಗಿ ಆರೋಗ್ಯ ಇಲಾಖೆ ಗಮನಕ್ಕೆ ತರಬೇಕು. ಈ ಬಗ್ಗೆ ಖಾಸಗಿ ಆಸ್ಪತ್ರೆಗಳ ಸಂಘಟನೆಯವರಿಗೂ ಸೂಚನೆ ನೀಡಲಾಗಿದೆ ಎಂದರು.

ವಿದೇಶ ಪ್ರಯಾಣದಿಂದ ಬಂದ ಪ್ರಯಾಣಿಕರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಮತ್ತು ಅವರ ಕುಟುಂಬದವರು ಅವರು ಯಾವುದೇ ದೇಶದಿಂದ ಹಿಂದಿರುಗಿದರೂ, ಕಡ್ಡಾಯವಾಗಿ 14 ದಿನಗಳ ಕಾಲ ಅವರ ಮನೆಯಲ್ಲಿಯೇ ಪ್ರತ್ಯೇಕವಾಗಿರಬೇಕು (ಐಸೋಲೇಷನ್) ಎಂದು ಯಡಿಯೂರಪ್ಪ ಸೂಚಿಸಿದರು.

ಎಲ್ಲ ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಖಾಸಗಿ ಕ್ಲಿನಿಕ್‌ನವರು ಕಳೆದ 14 ದಿನಗಳಿಂದ ವಿದೇಶದಿಂದ ಹಿಂದಿರುಗಿ ಚಿಕಿತ್ಸೆ ಪಡೆದವರು ಇದ್ದಲ್ಲಿ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು. ಖಾಸಗಿ ಆಸ್ಪತ್ರೆಗಳು ಎಲ್ಲ ರೀತಿಯಲ್ಲೂ ಸಹಕರಿಸಬೇಕು.

ಐಎಂಎ, ಡಾ.ದೇವಿ ಶೆಟ್ಟಿ, ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷ ಡಾ.ರವೀಂದ್ರ ಸೇರಿದಂತೆ ಖಾಸಗಿ ಆಸ್ಪತ್ರೆಯವರು, ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದು, ಕೋವಿಡ್-19 ಸೋಂಕು ಹರಡದಂತೆ ಸಹಕಾರ ನೀಡಲು ಮುಂದೆ ಬಂದಿದ್ದಾರೆ. ಇನ್‌ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಸೋಂಕು ತಡೆಗಟ್ಟಲು ಸಹಕಾರ ನೀಡಲಾಗುವುದೆಂದು ಹೇಳಿದ್ದಾರೆ ಎಂದರು.

ಅಂತರ ಕಾಯ್ದುಕೊಳ್ಳಿ: ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸಾರ್ವಜನಿಕರು ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಿ. ಯಾರನ್ನೂ ಮುಟ್ಟಬೇಡಿ, ಸೋಂಕು ಪರೀಕ್ಷೆಗೆ ಹೆಚ್ಚುವರಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು. ಖಾಸಗಿ ಆಸ್ಪತ್ರೆಗಳೊಂದಿಗೆ ಸಮನ್ವಯ ವಹಿಸಲು ಒಂದು ಸಮಿತಿ ರಚಿಸಲಾಗುವುದು ಎಂದರು.

ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಅಶ್ವತ್ಥ ನಾರಾಯಣ, ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಶಿಕ್ಷಣ ಸಚಿವ ಸುರೇಶ್‌ ಕುಮಾರ್, ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

‘ಕೊರೋನ ವೈರಸ್ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಮಾಲ್, ಸಿನಿಮಾ ಮಂದಿರ, ಜನನಿಬಿಡ ಪ್ರದೇಶಗಳ ಕಾರ್ಯಕ್ರಮ ಹಾಗೂ ಬೃಹತ್ ಸಮಾವೇಶಗಳನ್ನು ಬಂದ್ ಮಾಡಲು ಸರಕಾರ ಆದೇಶಿಸಿದೆ. ಸೋಂಕನ್ನು ತಡೆಯಲು ನಾಗರಿಕರ ಸಹಕಾರ ಅತ್ಯಗತ್ಯವಾಗಿದೆ. ನಾವೆಲ್ಲರೂ ಸೇರಿ ಸಧೃಡ, ಆರೋಗ್ಯ ಸಮಾಜ ನಿರ್ಮಿಸೋಣ’

-ಬಿ.ಶ್ರೀರಾಮುಲು ಆರೋಗ್ಯ ಸಚಿವ

ನಿರ್ಬಂಧ

ಶಾಪಿಂಗ್ ಮಾಲ್‌ಗಳು, ಚಿತ್ರಮಂದಿರಗಳು, ಪಬ್-ನೈಟ್ ಕ್ಲಬ್‌ಗಳು, ಈಜುಕೊಳ, ಆಟದ ಮೈದಾನಗಳು, ಸಂಗೀತ ಗೋಷ್ಠಿ, ಬೇಸಿಗೆ ಶಿಬಿರಗಳು, ಮದುವೆ (ಹೆಚ್ಚಿನ ಜನ ಸೇರುವುದಕ್ಕೆ ಮಿತಿ), ಸಭೆ, ವಿಚಾರ ಸಂಕಿರಣ, ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ.

ಅಬಾಧಿತ:

ಪರೀಕ್ಷೆಗಳು, ಸರಕಾರಿ ಕಚೇರಿಗಳು, ಸಾರ್ವಜನಿಕ ಸಾರಿಗೆ ಬಸ್, ಮೆಟ್ರೋ, ರೈಲ್ವೆ ಸಂಚಾರ, ರಿಕ್ಷಾ, ಕ್ಯಾಬ್, ಹೊಟೇಲ್, ಬಾರ್ ಮತ್ತು ರೆಸ್ಟೋರೇಟ್, ಮಾರುಕಟ್ಟೆಗಳು ಸೇರಿ ದಿನಸಿ ವ್ಯಾಪಾರದ ಅಂಗಡಿಗಳಿಗೆ ಯಾವುದೇ ನಿರ್ಬಂಧವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News