×
Ad

ಐಟಿ ಕಂಪೆನಿಗಳ ಕಾಶ್ಮೀರಿ ಉದ್ಯೋಗಿಗಳ ಮಾಹಿತಿ ಕೇಳಿದ ಪೊಲೀಸರು: ಬೆಂಗಳೂರು ಪೊಲೀಸ್ ಆಯುಕ್ತರಿಂದ ತನಿಖೆಗೆ ಆದೇಶ

Update: 2020-03-13 15:44 IST

ಬೆಂಗಳೂರು: ರಾಜಧಾನಿಯ ಹಲವು ಪ್ರಮುಖ ಐಟಿ ಕಂಪೆನಿಗಳ ಕಚೇರಿಗಳಿರುವ ಮಾನ್ಯತಾ ಟೆಕ್ ಪಾರ್ಕ್‍ನಲ್ಲಿ ಉದ್ಯೋಗದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಜನರ ಮಾಹಿತಿಗಳನ್ನು ಒದಗಿಸುವಂತೆ ಮಾರ್ಚ್ 5ರಂದು ಕಂಪೆನಿಗಳಿಗೆ  ಸಂಪಿಗೆಹಳ್ಳಿ ಠಾಣಾಧಿಕಾರಿ ಬಿ ಎಂ ನಂದಕುಮಾರ್ ಆದೇಶಿಸಿದ ಪ್ರಕರಣ ಕುರಿತಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತನಿಖೆಗೆ ಆದೇಶಿಸಿದ್ದಾರೆ.

ಸಂಪಿಗೆಹಳ್ಳಿ ಠಾಣಾಧಿಕಾರಿಯ ಆದೇಶವನ್ನು ಕೂಡಲೇ ವಾಪಸ್ ಪಡೆಯುವಂತೆ ಹಾಗೂ ಈ ಕುರಿತಂತೆ ಸಂಬಂಧಿತ ಡಿಸಿಪಿ ವರದಿ ಸಲ್ಲಿಸುವಂತೆ ಅವರು ಆದೇಶಿಸಿದ್ದಾರೆ.

ಆದರೆ ನಂದಕುಮಾರ್ ಮಾತ್ರ ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಕ್ರಮ ಕೈಗೊಂಡಿದ್ದಾಗಿ ಹಾಗೂ ಎಲ್ಲಾ ಸಮುದಾಯಗಳ ಕುರಿತಂತೆ ಮಾಹಿತಿ ಸಂಗ್ರಹಿಸುತ್ತಿರುವುದಾಗಿ Thequint.com ಜತೆ ಮಾತನಾಡುತ್ತಾ ತಿಳಿಸಿದ್ದಾರೆ.

"ಇದು ಹಿಂದು-ಮುಸ್ಲಿಂ ಕುರಿತಂತೆ ಅಲ್ಲ. ನಮ್ಮ ವ್ಯಾಪ್ತಿಯ ಎಲ್ಲಾ ನಾಗರಿಕರ ಮಾಹಿತಿ ಸಂಗ್ರಹಿಸುತ್ತಿದ್ದೇವೆ, ಈಶಾನ್ಯ ರಾಜ್ಯಗಳವರು, ರೋಹಿಂಗ್ಯನ್ನರು ಹಾಗೂ ರಾಜಕೀಯ ಸಂಘಟನೆಗಳಾದ ಎಬಿವಿಪಿ ಕುರಿತಂತೆಯೂ ನಿಗಾ ಇಟ್ಟಿದ್ದೇವೆ'' ಎಂದು ಅವರು ಹೇಳಿದ್ದಾರೆ.

"ಮಾಹಿತಿ ಸಂಗ್ರಹಿಸಿ ಜನರು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ನಾವು ಇಂತಹ ಆದೇಶಗಳನ್ನು ಎಲ್ಲೆಲ್ಲಿ ನೀಡಿದ್ದೇವೆ ಎಂದು ಬಹಿರಂಗಪಡಿಸಲು ಸಾಧ್ಯವಿಲ್ಲ. ನಾವು ಪಿಜಿಗಳ ಮೇಲೂ ನಿಗಾ ಇಟ್ಟಿದ್ದೇವೆ'' ಎಂದು ಅವರು ಹೇಳಿದ್ದಾರೆ.

ಯಾವೆಲ್ಲಾ ಕಂಪೆನಿಗಳು  ಪೊಲೀಸ್ ಅಧಿಕಾರಿ ಕೇಳಿದ್ದ ಮಾಹಿತಿ ನೀಡಲು ಸಿದ್ಧವಾಗಿದ್ದವು ಎಂಬುದು ತಿಳಿದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News