ಬಿಪಿಎಲ್ ಪಡಿತರ ಚೀಟಿ ವಾಪಸ್ ನೀಡಲು ಹೊಸ ಗಡುವು

Update: 2020-03-13 12:13 GMT

ಬೆಂಗಳೂರು, ಮಾ.13: ರಾಜ್ಯ ವ್ಯಾಪ್ತಿ ಅರ್ಹರಲ್ಲದವರು ಬಿಪಿಎಲ್ ಪಡಿತರ ಚೀಟಿಯನ್ನು ಪಡೆದಿರುವವರು ವಾಪಸ್ ಮಾಡುವ ಪ್ರಕ್ರಿಯೆ ಸಂಬಂಧ ಎಪ್ರಿಲ್ ತಿಂಗಳವರೆಗೂ ಗಡುವು ನೀಡಲಾಗಿದೆ ಎಂದು ಆಹಾರ ಮತ್ತು ನಾಗರಿಕರ ಸರಬರಾಜು ಸಚಿವ ಕೆ.ಗೋಪಾಲಯ್ಯ ಹೇಲದರು.

ಶುಕ್ರವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರ ಪರವಾಗಿ ಎ.ಟಿ.ರಾಮಸ್ವಾಮಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅರ್ಹರಲ್ಲದವರು ಪಡಿತರ ಚೀಟಿಗಳನ್ನು ಪಡೆದಿರುವುದು ಸರಕಾರದ ಗಮನಕ್ಕೆ ಬಂದಿದ್ದು, ದಂಡವಿಲ್ಲದೆ ಈ ಪಡಿತರ ಚೀಟಿಗಳನ್ನು ವಾಪಸ್ ನೀಡಲು ಏಪ್ರಿಲ್ ತಿಂಗಳವರೆಗೂ ಕಾಲಾವಕಾಶ ಮಾಡಿಕೊಡಲಾಗಿದೆ ಎಂದರು. ಈ ಮೊದಲು ನಿಗದಿಯಾದಂತೆ ದಂಡ ಸಹಿತ ಪಡಿತರ ಚೀಟಿಗಳನ್ನು ವಾಪಸ್ ಪಡೆದಿರುವವರಿಗೆ ದಂಡದ ಹಣವನ್ನು ವಾಪಸ್ ಕೊಡಲು ಸಾಧ್ಯವಿಲ್ಲ ಎಂದ ಅವರು, ಹಾಸನ ಜಿಲ್ಲೆಯಲ್ಲಿ ಪಡಿತರ ಚೀಟಿ ಬಾಕಿ ಇರುವ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆಯೂ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಪಡಿತರ ಅಂಗಡಿಯವರು ತೂಕ ಮತ್ತು ಪಡಿತರ ವಿತರಣೆ ಪ್ರಮಾಣವನ್ನು ಕಡಿಮೆ ಮಾಡಿದರೆ ಅಂತಹ ಪಡಿತರ ಅಂಗಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಅದೇ ರೀತಿ, ಬೆಳಗಾವಿ ಜಿಲ್ಲೆಯ ಕುಡಚಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತೂಕದಲ್ಲಿ ಮೋಸ ಮಾಡಿದ ಪಡಿತರ ಅಂಗಡಿ ವಿರುದ್ಧ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News