ಬಹುತೇಕ ಎಲ್ಲ ಸರಕಾರಿ ಅಧಿಕಾರಿಗಳೂ ಭ್ರಷ್ಟರು: ಬಸವರಾಜ ಹೊರಟ್ಟಿ

Update: 2020-03-13 12:40 GMT

ಬೆಂಗಳೂರು, ಮಾ.13: ರಾಜ್ಯದಾದ್ಯಂತ ಕೆಲವು ಪ್ರಾಮಾಣಿಕ ಅಧಿಕಾರಿಗಳು ಬಿಟ್ಟರೆ, ಬಹುತೇಕ ಎಲ್ಲರೂ ಭ್ರಷ್ಟರಾಗಿದ್ದಾರೆ ಎಂದು ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಆರೋಪಿಸಿದ್ದಾರೆ.

ಶುಕ್ರವಾರ ವಿಧಾನಪರಿಷತ್‌ನಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಾರ್ಯಾಂಗದಲ್ಲಿನ ಅಧಿಕಾರಿಗಳಲ್ಲಿ ಕೆಲವರು ಬಿಟ್ಟರೆ, ಎಲ್ಲರೂ ಭ್ರಷ್ಟರು. ತಹಶೀಲ್ದಾರ್ ಕಚೇರಿಯಿಂದ ಎಂ.ಎಸ್.ಬಿಲ್ಡಿಂಗ್‌ವರೆಗೂ ಕನೆಕ್ಷನ್ ಇದೆ ಎಂದು ದೂರಿದರು.

ಕಾರ್ಯಾಂಗ ಅಷ್ಟೇ ಅಲ್ಲದೆ, ನ್ಯಾಯಾಂಗದಲ್ಲಿಯೂ ಈ ಭ್ರಷ್ಟಾಚಾರವಿದೆ ಎಂದ ಅವರು, ನ್ಯಾಯಾಲಯಗಳ ಒಳಗೆ ನಮಗೆ ಇಂತಹ ನ್ಯಾಯಾಧೀಶರೇ ಬೇಕು, ವಕೀಲರೇ ಬೇಕು ಎನ್ನುವ ಜನರೂ ಇದ್ದಾರೆ. ಜನಪ್ರತಿನಿಧಿಗಳು ಸರಿಯಾಗಿ ಇರದಿದ್ದಲ್ಲಿ ಪ್ರಜಾಪ್ರಭುತ್ವದ ಮೂರು ಅಂಗಗಳು ಬಲಿಷ್ಠವಾಗುವುದಿಲ್ಲ ಎಂದರು.

ಭಾರತ ಜಾತಿಗಳ ದೇಶವಾಗಿದೆ: ಭಾರತವನ್ನು ಸಂವಿಧಾನದ ಅಡಿಯಲ್ಲಿ ಜಾತ್ಯತೀತ ದೇಶ ಎಂದು ಗುರುತಿಸಲಾಗುತ್ತದೆ. ಆದರೆ, ಈ ದೇಶದೊಳಗೆ ಜಾತಿಗಳದೇ ಕಾರುಬಾರು ನಡೆಯುತ್ತಿದೆ. ಇಂತಹ ಜಾತಿಯವರಿಗೆ ಟಿಕೆಟ್ ನೀಡಬೇಕು, ಮಂತ್ರಿ ಮಾಡಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿದ್ಧಗಂಗಾ ಮಠದ ಸ್ವಾಮೀಜಿ ಸೇರಿ ಕೆಲವೊಂದು ಸ್ವಾಮೀಜಿಗಳು ಬಿಟ್ಟರೆ ಯಾರೂ ಸರಿಯಿಲ್ಲ. ನಮ್ಮಲ್ಲಿ ಜಾತಿಗೊಂದು ಮಠ ನಿರ್ಮಾಣವಾಗಿದೆ. ಎಲ್ಲ ಜಾತಿಗಳ ಸರಕಾರಿ ಸಹಕಾರ ಸಂಘಗಳಿವೆ ಎಂದ ಅವರು, ಈ ವ್ಯವಸ್ಥೆಯು ಒಂದು ಕ್ಯಾನ್ಸರ್ ಇದ್ದಂತೆ. ಈ ವ್ಯವಸ್ಥೆಯನ್ನು ಜನರಾದರೂ ಎಷ್ಟು ದಿನ ಸಹಿಸುತ್ತಾರೆ. ಒಂದಲ್ಲಾ ಒಂದು ದಿನ ದಂಗೆ ಏಳುತ್ತಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News