ರಾಜ್ಯದ ಶಾಲೆಗಳಲ್ಲಿ ‘ಬ್ಯಾರಿ’ ತೃತೀಯ ಭಾಷೆಯಾಗಿ ಕಲಿಸುವ ಪ್ರಸ್ತಾವದ ಬಗ್ಗೆ ಶಿಕ್ಷಣ ಸಚಿವರಿಂದ ಸ್ಪಷ್ಟನೆ

Update: 2020-03-13 16:05 GMT

ಬೆಂಗಳೂರು, ಮಾ.13: ಬ್ಯಾರಿ ಭಾಷೆಯನ್ನು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ತೃತೀಯ ಭಾಷೆಯನ್ನಾಗಿ ಕಲಿಯಲು ಅವಕಾಶ ನೀಡುವ ಯಾವುದೆ ಪ್ರಸ್ತಾವಕ್ಕೆ ಸರಕಾರದಿಂದ ಇದುವರೆಗೆ ಅನುಮೋದನೆ ದೊರಕಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಈ ಸಂಬಂಧ ಬರೆದುಕೊಂಡಿರುವ ಅವರು, 2019ರ ಜೂ.27ರಂದು (ಕಳೆದ ಸರಕಾರದ ಅವಧಿಯಲ್ಲಿ) ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಅಂದಿನ ಶಿಕ್ಷಣ ಸಚಿವರಿಗೆ ಬ್ಯಾರಿ ಭಾಷೆಯನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ತೃತೀಯ ಭಾಷೆಯಾಗಿ ಕಲಿಯಲು ಅವಕಾಶ ನೀಡಬೇಕೆಂಬ ಮನವಿ ಪತ್ರ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.

ಅದಾದ ನಂತರ ಮತ್ತೊಮ್ಮೆ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ 2020ರ ಫೆ.3ರಂದು ನಮ್ಮ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಹಿಂದಿನ ಮನವಿ ಪತ್ರಕ್ಕೆ ಕೆಲ ಪೂರಕ ಅಂಶಗಳನ್ನು ಒದಗಿಸಲಾಗಿತ್ತು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ನಂತರ, ಬ್ಯಾರಿ ಭಾಷೆ ಬೋಧನೆ ಮಾಡಲು ಸಂಪನ್ಮೂಲ ವ್ಯಕ್ತಿಗಳು, ಅವರಿಗಿರುವ ಪಾಂಡಿತ್ಯ, ಅವರ ಸಂಖ್ಯೆ ಹಾಗೂ ಬ್ಯಾರಿ ಭಾಷೆ ಅಧ್ಯಯನ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳ ಸಂಖ್ಯೆ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿರದ ಸಂಗತಿಯ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ನಿರ್ದೇಶಕ(ಅ.ಸಂ)ರಿಂದ ಡಿ.ಎಸ್.ಇ.ಆರ್.ಟಿ.ರವರಿಗೆ ಪತ್ರ ಬರೆಯಲಾಗಿತ್ತು. ಇದುವರೆಗೆ ಈ ಕುರಿತು ಯಾವುದೇ ಅಧಿಕೃತ ಪ್ರಸ್ತಾವ ಸರಕಾರದ ಮುಂದೆ ಬಂದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News