×
Ad

ಸಿಐಡಿ ಅಪರ ಪೊಲೀಸ್ ಮಹಾನಿರ್ದೇಶಕ ಚರಣ್ ರೆಡ್ಡಿ ನಿಧನ

Update: 2020-03-13 22:18 IST

ಬೆಂಗಳೂರು, ಫೆ.13: ಸಿಐಡಿ ಅಪರ ಪೊಲೀಸ್ ಮಹಾನಿರ್ದೇಶಕರಾಗಿದ್ದ ಚರಣ್ ರೆಡ್ಡಿ (55) ಅವರು ಅನಾರೋಗ್ಯದಿಂದಾಗಿ ನಿಧನ ಹೊಂದಿದರು.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಚರಣ್‌ ರೆಡ್ಡಿ ಅವರು ಶುಕವವಾರ ಬೆಳಗ್ಗೆ ಕೊನೆಯುಸಿರೆಳೆದರು. ಪತ್ನಿ ಗಾಯತ್ರಿ ರೆಡ್ಡಿ, ಪುತ್ರಿ ಲಾಸ್ಯ ರೆಡ್ಡಿ, ಪುತ್ರ ಪನಿಲ್‌ ರೆಡ್ಡಿ ಅವರನ್ನು ಅಗಲಿರುವ ಚರಣ್‌ ರೆಡ್ಡಿ ಅವರ ಪ್ರಾರ್ಥಿವ ಶರೀರದ ದರ್ಶನ ವ್ಯವಸ್ಥೆಯನ್ನು ಡಾಲರ್ ಕಾಲನಿಯ ಆರ್‌ಎಂವಿ ಬಡಾವಣೆ 2ನೇ ಹಂತದ 14ನೇ ಕ್ರಾಸ್‌ನ ನಿವಾಸದ ಬಳಿ ಮಾಡಲಾಗಿತ್ತು. ಮೃತರ ಅಂತ್ಯಕ್ರಿಯೆಯು ಅವರ ಹುಟ್ಟೂರಾದ ಚಿತ್ತೂರಿನ ಮದನಪಲ್ಲಿ ಬಳಿಯ ಗೊಲ್ಲಪಲ್ಲಿ ಬಳಿ ಶನಿವಾರ(ಮಾ.14) ಸರಕಾರಿ ಗೌರವಗಳೊಂದಿಗೆ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

1966ರಲ್ಲಿ ಜನಿಸಿದ ಚರಣ್‌ ರೆಡ್ಡಿ ಅವರು, 1993 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದರು. ಮಂಡ್ಯ, ಬಿಜಾಪುರ, ಗದಗ, ಚಾಮರಾಜನಗರದಲ್ಲಿ ಎಸ್ಪಿ ಆಗಿದ್ದರು. ತದನಂತರ, ಸತತ ಐದು ವರ್ಷಗಳ ಕಾಲ ಸಿಬಿಐಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಲೋಕಾಯುಕ್ತ ವಿಶೇಷ ತನಿಖಾ ತಂಡಗಳಲ್ಲಿ ಕೆಲಸ ಮಾಡಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಹೆಸರು ಗಳಿಸಿದ್ದ ಚರಣ್‌ ರೆಡ್ಡಿ ಅವರು ತರಬೇತಿ ವಿಭಾಗ ಬೆಳಗಾವಿ ವಲಯ, ಆಂತರಿಕ ಭದ್ರತಾ ಪಡೆಯ ಐಜಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬೆಂಗಳೂರು ನಗರದ ಪಶ್ಚಿಮದ ಹೆಚ್ಚುವರಿ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿತ್ತು. ಬಳಿಕ ಅಲ್ಲಿಂದ ಕೆಎಸ್ಸಾರ್ಪಿ, ಸಿಐಡಿಗೆ ನಿಯೋಜನೆಗೊಂಡಿದ್ದ ಅವರು ಎರಡು ವರ್ಷಗಳ ಹಿಂದೆ ಎಡಿಜಿಪಿ ಹುದ್ದೆಗೆ ಭಡ್ತಿ ಹೊಂದಿ ಅಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ 10 ವರ್ಷಗಳ ಹಿಂದೆ ಕ್ಯಾನ್ಸರ್‌ಗೆ ತುತ್ತಾಗಿದ್ದ ಅವರು ಗುಣಮುಖರಾದರೂ ನಂತರ ಆರು ತಿಂಗಳಿನಿಂದ ಅವರು ತೀವ್ರ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ವಸಂತನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಸೇರಿ ಹಲವರು ಸಂತಾಪ

ಚರಣ್ ರೆಡ್ಡಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂತಾಪ ವ್ಯಕ್ತಪಡಿಸಿದ್ದು, ಚರಣ್ ರೆಡ್ಡಿ ಅವರು ಒಬ್ಬ ದಕ್ಷ, ನೇರ ನಡೆನುಡಿಯ ಅಧಿಕಾರಿಯಾಗಿದ್ದರು. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಸ್ಥರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್, ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮೃತರ ಆತ್ಮಕ್ಕೆ ಶಾಂತಿ ಕೋರಿ ಅವರ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬ ವರ್ಗಕ್ಕೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News