ತುರ್ತು ಪ್ರಕರಣಗಳ ವಿಚಾರಣೆ ಮಾತ್ರ ನಡೆಸಿ: ಹೈಕೋರ್ಟ್‌ಗೆ ಮನವಿ ಮಾಡಿದ ವಕೀಲ

Update: 2020-03-13 17:05 GMT

ಬೆಂಗಳೂರು, ಮಾ.13: ಕೋರ್ಟ್‌ಗಳಲ್ಲಿ ಕೊರೋನ ಆತಂಕ ಮನೆ ಮಾಡಿದ್ದು, ಆದಷ್ಟು ತುರ್ತಾಗಿ ವಿಚಾರಣೆಯಾಗಬೇಕಿರುವ ಪ್ರಕರಣಗಳನ್ನು ಮಾತ್ರ ಲಿಸ್ಟ್ ಮಾಡಿ ತೆಗೆದುಕೊಳ್ಳಬೇಕೆಂದು ವಕೀಲರೊಬ್ಬರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಹೈಕೋರ್ಟ್ ವಕೀಲ ಪ್ರವೀಣ್‌ ಕುಮಾರ್ ಹಿರೇಮಠ್, ಹೈಕೋರ್ಟ್ ಸಿಜೆ ಎ.ಎಸ್.ಓಕಾ ಅವರಿಗೆ ಪತ್ರ ಬರೆದು, ತುರ್ತಾಗಿ ವಿಚಾರಣೆಯಾಗಬೇಕಿರುವ ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಿ ಎಂದು ಮನವಿ ಸಲ್ಲಿಸಿದ್ದಾರೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕ್ಷಿದಾರರು, ಕೋರ್ಟ್‌ನಲ್ಲಿ ಸಾಕ್ಷಿ ಹೇಳುವಾಗ ಕಡ್ಡಾಯವಾಗಿ ಜನ ಹಾಜರಿರಲೇಬೇಕಾದ ಸನ್ನಿವೇಶ ಇರುತ್ತದೆ. ಹೀಗಾಗಿ, ದೂರುದಾರರು ಮತ್ತು ಕಕ್ಷಿದಾರರು ಹಾಜರಾತಿಯಲ್ಲಿ ಸ್ವಲ್ಪ ವಿನಾಯಿತಿ ನೀಡಬೇಕು.

ಕೋರ್ಟ್‌ಗಳನ್ನು ಯಾವುದೇ ಕಾರಣಕ್ಕೂ ವಾರಗಟ್ಟಲೇ ಬಂದ್ ಮಾಡಲು ಸಾಧ್ಯವಿಲ್ಲ. ದೂರು ದಾಖಲಿಸುವ ಅರ್ಜಿದಾರರು ಮತ್ತು ಸಾಕ್ಷಿಗಳು, ಕಕ್ಷಿದಾರರು ಸಾರ್ವಜನಿಕ ವಾಹನದ ಮೂಲಕ ಕೋರ್ಟ್‌ಗೆ ಬರುತ್ತಾರೆ. ಪ್ರತಿ ಕೋರ್ಟ್ ಹಾಲ್‌ನಲ್ಲಿ 40 ರಿಂದ 50 ಮಂದಿ ಇರುತ್ತಾರೆ. ಹೀಗಾಗಿ, ಸಾಧ್ಯವಾದಷ್ಟು ಹೆಚ್ಚು ಜನ ಕೋರ್ಟ್‌ಗೆ ಆಗಮಿಸುವುದನ್ನು ತಡೆಯುವುದರಿಂದ, ಆಕಸ್ಮಿಕವಾಗಿ ಕೊರೋನ ಹರಡುವುದನ್ನು ತಡೆಯಬಹುದು. ಒಂದು ವೇಳೆ ದೂರುಗಳ ವಿಚಾರಣೆ ಮುಂದೂಡಿಕೆಯಾದರೆ ರಜಾ ದಿನದ ವಿಶೇಷ ಬೆಂಚ್‌ನಲ್ಲಿ ಆ ಅರ್ಜಿಗಳನ್ನು ತೆಗೆದುಕೊಳ್ಳಲು ವ್ಯವಸ್ಥೆ ಮಾಡಬಹುದು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಇನ್ನು, ಹೈಕೋರ್ಟ್ ಸಿಜೆ ಎ.ಎಸ್.ಓಕಾ ಅವರು, ಕೋರ್ಟ್ ಆಡಳಿತ ಮಂಡಳಿಯವರ ಮೂಲಕ ಕೋರ್ಟ್‌ನ ನ್ಯಾಯಪೀಠದ ಸದಸ್ಯರು, ಸಿಬ್ಬಂದಿ ಹಾಗೂ ಎಲ್ಲರನ್ನೂ ತಕ್ಷಣ ಕರೆದು ಕೊರೋನ ವೈರಸ್ ಹರಡದಂತೆ ತಡೆಯುವ ಬಗ್ಗೆ ಜಾಗೃತಿ ಮೂಡಿಸಬೇಕು. ಅಧೀನ ನ್ಯಾಯಾಲಯದಲ್ಲಿ ಕೋರ್ಟ್ ಸಿಬ್ಬಂದಿ ಮತ್ತು ಅರ್ಜಿದಾರರು ತುಂಬಾ ಹತ್ತಿರದಿಂದ ಚರ್ಚೆ ಮಾಡುತ್ತಾರೆ. ಈ ವೇಳೆ ಆಕಸ್ಮಿಕವಾಗಿ ಓರ್ವ ಕೊರೋನ ವೈರಸ್ ಪೀಡಿತ ಕೋರ್ಟ್ ಹಾಲ್‌ಗೆ ಬಂದರೂ ಆತನಿಂದ ಹಲವು ವಕೀಲರಿಗೆ, ಕೋರ್ಟ್ ಸಿಬ್ಬಂದಿಗೆ ಸೊಂಕು ಹರಡುವ ಸಾಧ್ಯತೆ ಇದೆ. ಕೋರ್ಟ್‌ಗೆ ಅಗತ್ಯ ವಸ್ತುಗಳನ್ನು ಮಾಸ್ಕ್‌ಗಳನ್ನು ಒದಗಿಸಲು ನಿರ್ದೇಶಿಸಬೇಕೆಂದು ಪ್ರವೀಣ್‌ ಕುಮಾರ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News