ಭಾರತದಲ್ಲಿ ಶತಕದ ಗಡಿ ದಾಟಿದ ಕೊರೋನಾ ಸೋಂಕು

Update: 2020-03-15 03:47 GMT

ಹೊಸದಿಲ್ಲಿ: ರಾಜ್ಯಗಳಿಂದ ಕ್ರೋಢೀಕರಿಸಿದ ಅಂಕಿ ಅಂಶಗಳನ್ನು ಗಮನಿಸಿದರೆ ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 100ನ್ನು ದಾಟಿದೆ. ಆದರೆ ಗೃಹ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಸೋಂಕಿತರ ಸಂಖ್ಯೆ 84.

ಮಹಾರಾಷ್ಟ್ರ ಅತ್ಯಧಿಕ ಸೋಂಕಿತರ ರಾಜ್ಯವಾಗಿದ್ದು, ಒಂದೇ ದಿನದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 19 ರಿಂದ 31ಕ್ಕೇರಿದೆ. 22 ಪ್ರಕರಣಗಳು ದಾಖಲಾಗಿರುವ ಕೇರಳ ಎರಡನೇ ಸ್ಥಾನದಲ್ಲಿದೆ.

ಮಹಾರಾಷ್ಟ್ರ ಹೊರತುಪಡಿಸಿ ರಾಜಸ್ಥಾನ, ತೆಲಂಗಾಣ ಹಾಗೂ ಕೇರಳದಲ್ಲಿ ತಲಾ ಒಂದು ಪ್ರಕರಣ ಹೊಸದಾಗಿ ಪತ್ತೆಯಾಗಿದೆ. ಈಗಾಗಲೇ ಗುಣಮುಖರಾಗಿರುವ 10 ಮಂದಿ ಹಾಗೂ ಮೃತಪಟ್ಟ ಇಬ್ಬರು ಕೂಡಾ ಇದರಲ್ಲಿ ಸೇರಿದ್ದಾರೆ.

ಕೇಂದ್ರ ಸರ್ಕಾರ ಈಗಾಗಲೇ ಇದನ್ನು ಅಧಿಸೂಚಿತ ವಿಪತ್ತು ಎಂದು ಘೋಷಿಸಿದ್ದು, ರಾಜ್ಯ ವಿಕೋಪ ಸ್ಪಂದನೆ ನಿಧಿಯಿಂದ ವೈದ್ಯಕೀಯ ಚಿಕಿತ್ಸೆಗಾಗಿ ನೆರವು ನೀಡಿದೆ. ಹೆಚ್ಚುತ್ತಿರುವ ಸೋಂಕಿನ ಹಿನ್ನೆಲೆಯಲ್ಲಿ ಶನಿವಾರ ಮತ್ತೆ ಐದು ರಾಜ್ಯಗಳು ಮುನ್ನೆಚ್ಚರಿಕೆ ಕ್ರಮವಾಗಿ ನಿರ್ಬಂಧ ಹೇರಿವೆ. ಪಂಜಾಬ್, ಪಶ್ಚಿಮ ಬಂಗಾಳ, ತೆಲಂಗಾಣ, ಹಿಮಾಚಲ ಪ್ರದೇಶ ಹಾಗೂ ಗೋವಾದಲ್ಲಿ ಕೂಡಾ ಎಲ್ಲ ಶಾಲಾ ಕಾಲೇಜು, ಚಿತ್ರಮಂದಿರ, ಸಭಾಗೃಹ, ಪಬ್, ಜಿಮ್, ಸಾರ್ವಜನಿಕ ಈಜುಕೊಳಗಳನ್ನು ಮುಚ್ಚಿವೆ. ವಿವಾಹ, ಹುಟ್ಟುಹಬ್ಬ ಸೇರಿದಂತೆ ಸಾಮಾಜಿಕ ಸಭೆ ಸಮಾರಂಭಗಳಿಗೆ ನಿಷೇಧ ಹೇರಲಾಗಿದೆ. ಕೇರಳ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ಹರ್ಯಾಣ ಹಾಗೂ ಮಣಿಪುರ ಇಂಥ ಕ್ರಮಗಳನ್ನು ಈಗಾಗಲೇ ಪ್ರಕಟಿಸಿವೆ.

ಮಹಾರಾಷ್ಟ್ರದಲ್ಲಿ ಶನಿವಾರ 12 ಹೊಸ ಪ್ರಕರಣಗಳು ಪತ್ತೆಯಾಗಿವೆ. ಪಿಂಪ್ರಿ ಚಿಂಚವಾಡದಲ್ಲಿ ಐದು, ಯಾವತ್ಮಲ್‌ನಲ್ಲಿ ಎರಡು, ಮುಂಬೈ, ವಾಶಿ, ಕಮೊಥೆ, ಕಲ್ಯಾಣ್ ಮತ್ತು ನಾಗ್ಪುರದಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ. ಮಾರ್ಚ್ 31ರವರೆಗೆ ರಾಜ್ಯದಲ್ಲಿ ಎಲ್ಲ ಶಾಲಾ ಕಾಲೇಜು, ಮಾಲ್‌ಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.

ಏತನ್ಮಧ್ಯೆ ಸೌದಿ ಅರೇಬಿಯಾದಿಂದ ವಾಪಸ್ಸಾದ 71 ವರ್ಷದ ವ್ಯಕ್ತಿ ಕೊರೋನಾ ವೈರಸ್‌ನಿಂದ ಬಾಧಿತರಾಗಿರುವ ಶಂಕೆ ಇದ್ದು, ಅವರು ಬುಲ್ಡಾನಾದಲ್ಲಿ ಮೃತಪಟ್ಟಿದ್ದಾರೆ. ಆದರೆ ಅವರನ್ನು ಪರೀಕ್ಷೆಗೆ ಗುರಿಪಡಿಸಿದಾಗ ಕೊರೋನಾ ವೈರಸ್ ದೃಢಪಟ್ಟಿಲ್ಲ. ಆದ್ದರಿಂದ ಇದು ಕೊರೋನಾ ಪ್ರಕರಣ ಅಲ್ಲ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News