ರೌಡಿಶೀಟರ್ ಕಿರಣ್‌ಗೆ ಗುಂಡೇಟು: ಬಂಧನ
ಬೆಂಗಳೂರು, ಮಾ.15 : ಪೊಲೀಸರ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ ಕುಖ್ಯಾತ ರೌಡಿಶೀಟರ್ ಕಿರಣ್ ಅಲಿಯಾಸ್ ತಮಟೆ ಎಂಬಾತನನ್ನು ರಾಮನಗರ ಪೊಲೀರು ಗುಂಡು ಹೊಡೆದು ಬಂಧಿಸಿದ್ದಾರೆ
ಫೆ.24 ರಂದು ಕುದೂರು ಠಾಣೆ ವ್ಯಾಪ್ತಿಯ ಕಣ್ಣೂರು ಗ್ರಾಮದ ಲೋಕನಾಥ್ ಸಿಂಗ್ ಎಂಬವರ ಮನೆಗೆ ತಮಟೆ ಸೇರಿ 13 ಮಂದಿ ಗ್ಯಾಂಗ್ ನುಗ್ಗಿ ಗಂಭೀರ ಹಲ್ಲೆ ಮಾಡಿ ದರೋಡೆ ಮಾಡಲು ಪ್ರಯತ್ನಿಸಿದ್ದರು. ಈ ಸಂಬಂಧ ಕುದೂರು ಪೊಲೀಸರು ಕಾರ್ಯಾಚರಣೆ ನಡೆಸಿ ಎಂಟು ಆರೋಪಿಗಳನ್ನು ಬಂಧಿಸಿದ್ದರು.
ಅವರಲ್ಲಿ ರೌಡಿ ತಮಟೆ ಪ್ರಮುಖ ಆರೋಪಿಯಾಗಿದ್ದು, ರವಿವಾರ ಆತನನ್ನು ವಿಚಾರಣೆಗಾಗಿ ಕೆಂಗೇರಿ ಬಳಿಯ ಸೂಲಿಕೆರೆ ರಸ್ತೆಯಹಳೇ ಬೈರೋಹಳ್ಳಿ ಬಳಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಯು ಮೂತ್ರ ವಿಸರ್ಜನೆಯ ನೆಪ ಮಾಡಿದ್ದಾನೆ. ಈ ವೇಳೆ ಆರೋಪಿಯನ್ನು ಕಾನ್ಸ್‌ಸ್ಟೇಬಲ್ ವೀರಭದ್ರನನ್ನು ಕಳುಹಿಸಿದಾಗ ಕಲ್ಲಿನಿಂದ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.
ಪೊಲೀಸರು ಸಾಕಷ್ಟು ಎಚ್ಚರಿಕೆ ನೀಡಿದರೂ ಆರೋಪಿ ಹಲ್ಲೆಗೆ ಮುಂದಾಗಿದ್ದನು. ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ್ ಶರಣಾಗುವಂತೆ ಸೂಚನೆ ನೀಡಿದರೂ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮತ್ತೊಂದು ಸುತ್ತು ಗುಂಡು ಹಾರಿಸಿದ್ದಾರೆ. ಅದು ಎಡಗಾಲಿಗೆ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ, ಆರೋಪಿಯನ್ನು ನಗರದ ರಾಜರಾಜೇಶ್ವರಿ ನಗರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯಲ್ಲಿ ಕಾನ್ಸ್‌ಸ್ಟೇಬಲ್ ವೀರಭದ್ರ ಎಂಬವರೂ ಗಾಯಗೊಂಡಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ಕಿರಣ್ ರೌಡಿಶೀಟರ್ ಆಗಿದ್ದು, ಆತನ ವಿರುದ್ಧ ಕೆಂಗೇರಿ, ತಾವರಕೆರೆ, ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ 11 ಪ್ರಕರಣಗಳು ದಾಖಲಾಗಿದ್ದು, ಕೆಲವು ಪ್ರಕರಣಗಳಲ್ಲಿ ವಾರೆಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ಗ್ಯಾಂಗ್ ದರೋಡೆಗೆ ಇಳಿದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.