×
Ad

ಚುನಾವಣಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಅಗತ್ಯ: ಸಿದ್ದರಾಮಯ್ಯ

Update: 2020-03-16 23:25 IST

ಬೆಂಗಳೂರು, ಮಾ.16: ಸಂವಿಧಾನಕ್ಕೆ ತಿದ್ದುಪಡಿ ತಂದು ಚುನಾವಣಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯನ್ನು ಮಾಡದಿದ್ದರೆ, ಭ್ರಷ್ಟಾಚಾರ ಹಾಗೂ ಪಕ್ಷಾಂತರವನ್ನು ನಿಷೇಧಿಸಲು ಸಾಧ್ಯವಾಗುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸೋಮವಾರ ವಿಧಾನಸಭೆಯಲ್ಲಿ ಸಂವಿಧಾನದ ಮೇಲೆ ನಡೆದ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶೇಷನ್ ಅವರು ಭಾರತೀಯ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ವೇಳೆ ಕೆಲವು ಸುಧಾರಣೆಗಳನ್ನು ತಂದಿದ್ದರು ಎಂದರು.

ಚುನಾವಣೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ವಿಶೇಷ ಶಕ್ತಿ ಬಂದು ಬಿಡುತ್ತದೆ. ನೀತಿ ಸಂಹಿತೆ ಘೋಷಣೆಯಾದ ನಂತರ, ದುಡ್ಡು ಹಿಡಿಯಿರಿ ಎಂದರೆ ನಮ್ಮ ಹಿಂದೆ ಬಿದ್ದಿರುತ್ತಾರೆ. ಶೌಚಕ್ಕೂ ಹೋಗಲು ನಮಗೆ ಅವಕಾಶ ನೀಡದಂತೆ ಕಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಚುನಾವಣೆಯಲ್ಲಿ ಭ್ರಷ್ಟಾಚಾರವನ್ನು ತಡೆಯಲು ಸರಕಾರದ ವತಿಯಿಂದ, ಚುನಾವಣಾ ಆಯೋಗದ ಮೂಲಕ ಚುನಾವಣೆ ನಡೆಸಬೇಕು ಎಂದು ಸಿದ್ದರಾಮಯ್ಯ ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಹಿರಿಯ ಸದಸ್ಯ ಕೆ.ಆರ್.ರಮೇಶ್ ಕುಮಾರ್, ಈ ಹಿಂದಿನ ಸರಕಾರದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಒಂದು ಸಮಿತಿ ರಚಿಸಲಾಗಿತ್ತು. ನಾವು ನಮ್ಮ ಶಿಫಾರಸ್ಸುಗಳನ್ನು ನೀಡಿದ್ದೇವೆ. ಸರಕಾರ ಮನಸ್ಸು ಮಾಡಿ ಅವುಗಳನ್ನು ತರಿಸಿಕೊಂಡು ನೋಡಲಿ ಎಂದರು.

ಹರಿಯಾಣದಲ್ಲಿ ಗಯಾಲಾಲ್ ಎಂಬ ವ್ಯಕ್ತಿ ಒಂದೆ ದಿನದಲ್ಲಿ ಮೂರು ಪಕ್ಷಗಳನ್ನು ಸೇರಿದ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ‘ಆಯಾ ರಾಮ್, ಗಯಾ ರಾಮ್’ ಎಂದು ಚರ್ಚೆ ನಡೆಯಿತು. 1985ರಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ(ಶೆಡ್ಯೂಲ್ 10) ಅನ್ನು ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು ಎಂದು ಸಿದ್ದರಾಮಯ್ಯ ಹೇಳಿದರು.

ಒಂದು ಪಕ್ಷದಿಂದ ಚುನಾಯಿತನಾಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೆ ಚುನಾವಣೆ ಎದುರಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಈ ಬಗ್ಗೆ ಮಧ್ಯಪ್ರವೇಶಿಸಿದ ಕಾನೂನು ಸಚಿವ ಮಾಧುಸ್ವಾಮಿ, ಹಾಗಾದರೆ ಸ್ವಾಭಿಮಾನಕ್ಕೆ ಧಕ್ಕೆ ಬಂದರೂ ಒಂದು ಪಕ್ಷದಲ್ಲಿ ಗುಲಾಮರಾಗಿ ಇರಬೇಕೆ ಎಂದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹಾಗಿದ್ದಲ್ಲಿ, ಶೆಡ್ಯೂಲ್ಡ್ 10 ಅನ್ನು ಸಂವಿಧಾನದಿಂದ ಕೈ ಬಿಟ್ಟು ಬಿಡಿ. ಸುಮ್ಮನೆ ಯಾಕೆ ರಾಜೀನಾಮೆ ನೀಡಬೇಕು, ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು. ಸಂವಿಧಾನ, ಕಾನೂನು ಇದಕ್ಕೆಲ್ಲ ಬೆಲೆ ಇಲ್ಲವೇ ಎಂದರು.

ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ 7 ಜನ ಶಾಸಕರು ವಿಪ್ ಉಲ್ಲಂಘಿಸಿದ್ದು ಸರಿಯೋ, ತಪ್ಪೋ ಎಂದು ಮಾಧುಸ್ವಾಮಿ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ವಿಪ್ ಉಲ್ಲಂಘಿಸಿದರೆ ತಪ್ಪೇ? ಎಂದು ಸಮರ್ಥಿಸಿಕೊಂಡರು.

ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌ನಲ್ಲಿ ಇವತ್ತು ಏನಾಗುತ್ತಿದೆ. ಶೆಡ್ಯೂಲ್ಡ್ 10 ಅನ್ನು ನಾವು ಬಲಪಡಿಸುವ ಕೆಲಸ ಮಾಡಬೇಕಲ್ಲವೆ? ಇಲ್ಲದಿದ್ದರೆ, ಪ್ರಜಾಪ್ರಭುತ್ವ, ಚುನಾಯಿತ ಸರಕಾರ, ಜನರ ಆಶೀರ್ವಾದ ಇದ್ಯಾವುದಕ್ಕೂ ಬೆಲೆ ಇರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News