ವೈಜ್ಞಾನಿಕವಾಗಿ ಜನಸಂಖ್ಯಾವಾರು ಮೀಸಲಾತಿ ಹೆಚ್ಚಳವಾಗಲಿ

Update: 2020-03-16 17:59 GMT

ಮೀಸಲಾತಿಯನ್ನು ರಾಜಕೀಯ ಪಕ್ಷಗಳ ವೋಟಿನ ಬೇಟೆಗೆ ಇರುವ ದಾಳವಾಗಿ ಉಪಯೋಗಿಸುತ್ತಾ ಬರಲಾಗಿದೆ ಎನ್ನುವುದು ಎದ್ದು ಕಾಣುವ ವಿಚಾರ. ಅಲ್ಲದೆ ದಲಿತ ದಮನಿತರನ್ನು ಆಮಿಷಗಳಿಗೆ ನೂಕಿ ಅವರ ಪಾಲನ್ನು ಕಸಿದು ತಿನ್ನುವ ಆಳುವ ಶಕ್ತಿಗಳ ದುಷ್ಟ ಕುತಂತ್ರಗಳಿಗೆ, ಒಡೆದಾಳುವ ನೀತಿಗಳಿಗೆ, ದಲಿತ ದಮನಿತರ ಮೇಲೆ ಇತರ ಸಮುದಾಯಗಳನ್ನು ಎತ್ತಿ ಕಟ್ಟುವ ಮಸಲತ್ತುಗಳಿಗೆ, ಕೊಟ್ಟಂತೆ ಮಾಡಿ ದೋಚುವ ಹಗಲುದರೋಡೆಗೆ ಬಳಸುತ್ತಾ ಬರಲಾಗುತ್ತಿದೆ.


ನ್ಯಾಯಾಧೀಶ ಎ.ಜೆ. ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಬೇಕೆಂದು ಇತ್ತೀಚೆಗೆ ಒಂದು ನಿಯೋಗ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸುದ್ದಿ ಕೆಲವು ಮಾಧ್ಯಮಗಳಲ್ಲಿ ಬಂದಿವೆ. ಸದಾಶಿವ ಆಯೋಗದ ವರದಿ ದಲಿತ ವಿರೋಧಿಯಾಗಿದ್ದು, ದಲಿತರ ಒಗ್ಗಟ್ಟನ್ನು ಒಡೆಯುವ ಈ ವರದಿ ತಿರಸ್ಕಾರಕ್ಕೆ ಯೋಗ್ಯವಾಗಿದೆ ಎಂದೆಲ್ಲಾ ಆರೋಪಗಳನ್ನು ಮಾಡಲಾಗಿದೆ. ದಲಿತರಲ್ಲಿನ ಸ್ಪಶ್ಯ ಸಮುದಾಯಗಳ ಮುಖಂಡರು, ರಾಜಕಾರಣಿಗಳು, ಸ್ವಾಮಿಗಳು ಮೊದಲಾದವರು ಈ ನಿಯೋಗದಲ್ಲಿದ್ದರು ಎನ್ನಲಾಗಿದೆ. ಅಲ್ಲದೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ 2011ರ ಜನಸಂಖ್ಯೆ ಆಧರಿಸಿ ಮೀಸಲಾತಿ ಹೆಚ್ಚಳಗೊಳಿಸಲು ಸರಕಾರ ನೇಮಿಸಿರುವ ನ್ಯಾಯಾಧೀಶ ನಾಗಮೋಹನದಾಸ ಆಯೋಗಕ್ಕೆ ಷರತ್ತು ನಿಗದಿಪಡಿಸಲಾಗಿದೆ. ಅದಕ್ಕೆ 2020ರ ಪ್ರೊಜೆಕ್ಟೆಡ್ ಜನಸಂಖ್ಯೆ ಆಧರಿಸಿ ಮೀಸಲಾತಿ ಹೆಚ್ಚಿಸುವ ವರದಿ ನೀಡಲು ಸಹಾಯವಾಗುವಂತೆ ಆದೇಶವನ್ನು ತಿದ್ದುಪಡಿ ಮಾಡುವಂತೆಯೂ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿತವಾಗಿದೆ.

 ಪರಿಶಿಷ್ಟ ಜಾತಿಗಳಿಗಿರುವ ಮೀಸಲಾತಿಯು ಹೆಚ್ಚಾಗಿ ಸ್ಪಶ್ಯ ಜಾತಿಗಳಿಗೆ ಸೇರುತ್ತಿದೆ. ಅಸ್ಪಶ್ಯವೆಂದು ಸಮಾಜ ಪರಿಗಣಿಸಿರುವ ಜಾತಿಗಳಿಗೆ ಮೀಸಲಾತಿಯ ಉಪಯೋಗ ಸಿಗುತ್ತಿಲ್ಲ. ಇದರಿಂದ ದಲಿತರಿಗೆ ಮೀಸಲಾತಿ ಎಂಬ ಪರಿಕಲ್ಪನೆಗೆ ಚ್ಯುತಿಯಾಗುತ್ತಿದೆ. ದಲಿತರಲ್ಲಿ ಅತೀ ದಲಿತ ಸಮುದಾಯಗಳು ಅವಕಾಶ ವಂಚನೆಗೊಳಗಾಗಿವೆ. ಅಸ್ಪಶ್ಯರಲ್ಲಿನ ಎಡವೆಂದು ಕರೆಯುಲ್ಪಡುತ್ತಿರುವ ಸಮುದಾಯಕ್ಕೆ ಮೀಸಲಾತಿ ಅನುಕೂಲಗಳು ಲಭಿಸುತ್ತಿಲ್ಲ. ಹಾಗಾಗಿ ಒಳಮೀಸಲಾತಿ ಜಾರಿಮಾಡಬೇಕು. ಪರಿಶಿಷ್ಟರಲ್ಲಿನ ಆಯಾ ಸಮುದಾಯಗಳ ಜನಸಂಖ್ಯೆಗೆ ಅನುಸಾರವಾಗಿ ಮೀಸಲಾತಿ ಹಂಚಿಕೆಯಾಗಬೇಕು ಎಂಬ ಹಕ್ಕೊತ್ತಾಯಗಳೊಂದಿಗೆ ಕೆಲವು ಸಂಘಟನೆಗಳು ಸಭೆ, ಸಮಾವೇಶ, ಪ್ರತಿಭಟನೆಗಳನ್ನು ಮಾಡುತ್ತಾ ಬಂದಿವೆ. ರಾಜಕೀಯ ಮುಖಂಡರಿಗೆ ಪಕ್ಷಗಳಿಗೆ, ಸ್ವಾಮಿಗಳಿಗೆ ನಿಯೋಗಗಳನ್ನು ಒಯ್ದು ಮನವಿಗಳನ್ನು ಸಲ್ಲಿಸುತ್ತಾ ಬಂದಿವೆ. ಮೀಸಲಾತಿ ಬಹುಸಂಖ್ಯಾತ ದಲಿತರಿಗೆ ಅದರಲ್ಲೂ ದಲಿತರಲ್ಲಿನ ದಲಿತರಿಗೆ ಈಗಲೂ ಲಭಿಸುತ್ತಿಲ್ಲ ಎನ್ನುವುದು ವಾಸ್ತವ ಸಂಗತಿಯೇ. ಆದರೆ ಮೀಸಲಾತಿಯನ್ನು ರಾಜಕೀಯ ಪಕ್ಷಗಳ ವೋಟಿನ ಬೇಟೆಗೆ ಇರುವ ದಾಳವಾಗಿ ಉಪಯೋಗಿಸುತ್ತಾ ಬರಲಾಗಿದೆ ಎನ್ನುವುದು ಎದ್ದು ಕಾಣುವ ವಿಚಾರ. ಅಲ್ಲದೆ ದಲಿತ ದಮನಿತರನ್ನು ಆಮಿಷಗಳಿಗೆ ನೂಕಿ ಅವರ ಪಾಲನ್ನು ಕಸಿದು ತಿನ್ನುವ ಆಳುವ ಶಕ್ತಿಗಳ ದುಷ್ಟ ಕುತಂತ್ರಗಳಿಗೆ, ಒಡೆದಾಳುವ ನೀತಿಗಳಿಗೆ, ದಲಿತ ದಮನಿತರ ಮೇಲೆ ಇತರ ಸಮುದಾಯಗಳನ್ನು ಎತ್ತಿ ಕಟ್ಟುವ ಮಸಲತ್ತುಗಳಿಗೆ, ಕೊಟ್ಟಂತೆ ಮಾಡಿ ದೋಚುವ ಹಗಲುದರೋಡೆಗೆ ಬಳಸುತ್ತಾ ಬರಲಾಗುತ್ತಿದೆ.

ದಲಿತ ಮಾನವ ಹಕ್ಕುಗಳು ಹಾಗೂ ದಲಿತ ಆರ್ಥಿಕ ಅಧಿಕಾರ ಆಂದೋಲನಕ್ಕಾಗಿ ರಾಷ್ಟ್ರೀಯ ಪ್ರಚಾರ ಪ್ರಕಟಿಸಿದ ದಲಿತ ಆದಿವಾಸಿ ಆಯವ್ಯಯ ಅವಲೋಕನ 2019-20 ಎಂಬ ವರದಿಯಲ್ಲಿ ದಲಿತ ದಮನಿತರ ಬಗೆಗಿನ ಸರಕಾರಿ ಯೋಜನೆಗಳ ವಾಸ್ತವಗಳನ್ನು ತೆರೆದಿಟ್ಟಿದೆ. ಸರಕಾರ ದಲಿತ ದಮನಿತರಿಗೆಂದು ಆಯವ್ಯಯದಲ್ಲಿ ತೆಗೆದಿರಿಸಲಾಗುವ ಹಣಕಾಸು ಪ್ರಧಾನವಾಗಿ ಲೆಕ್ಕಪತ್ರದಲ್ಲಿ ಕಾಣಿಸಲು ಮಾತ್ರವಾಗಿದೆ. ತೆಗೆದಿರಿಸಲಾಗಿದೆ ಎಂದು ಹೇಳುವ ಹಣ ಅದೇ ಉದ್ದೇಶಕ್ಕೆ ವಿನಿಯೋಗಿಸದೆ ಇತರ ಉದ್ದೇಶಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ಹೇಳಿದೆ. ಅಲ್ಲದೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆಂದು ಆಯವ್ಯಯದಲ್ಲಿ ನಿಗದಿಪಡಿಸುವ ಹಣಕಾಸನ್ನು ಸಾಮಾನ್ಯ ವರ್ಗದ ಯೋಜನೆಗಳಿಗೆ ಹರಿಸುವ, ನಿರ್ದಿಷ್ಟತೆಯಿಲ್ಲದ ಯೋಜನೆಗಳಿಗೆ ಖರ್ಚುಮಾಡಿ ಎಸ್ಸಿ/ಎಸ್ಟಿಗಳ ಬಾಬತ್ತಿನಲ್ಲಿ ಖರ್ಚು ತೋರಿಸುವ ಕಾರ್ಯ ನಡೆಸಲಾಗುತ್ತದೆ ಎಂದಿದೆ. ಅದಕ್ಕೆ ಹಲವಾರು ಅಂಕಿಅಂಶಗಳನ್ನು ಅದು ಮುಂದಿಡುತ್ತದೆ.

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಎಸ್ಸಿ/ಎಸ್ಟಿಗಳಿಗೆ ಸೇರಿದ ವಿದ್ಯಾರ್ಥಿಗಳಿಗಾಗಿ ತೆಗೆದಿರಿಸುವ ಹಣದಲ್ಲಿ ಶೇ. 55ರಷ್ಟು ಮಾತ್ರ ಖರ್ಚು ಮಾಡಿರುವ ಉದಾಹರಣೆಯನ್ನು ವರದಿ ಮುಂದಿಡುತ್ತದೆ. ಇದು ಆಯವ್ಯಯ ನೀತಿ ಸೂತ್ರಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಬೊಟ್ಟು ಮಾಡಿ ತೋರಿಸುತ್ತದೆ.

ದಲಿತರಲ್ಲಿನ ಬಹುಸಂಖ್ಯಾತ ಜನರು ಕೃಷಿ ಕೂಲಿಕಾರರು, ಜೀತಗಾರರು ಆಗಿದ್ದಾರೆ. ವಾಸ್ತವದಲ್ಲಿ ಭೂಮಿಯಲ್ಲಿ ದುಡಿಯುವ ಇವರು ನಿಜವಾದ ರೈತರು. ಆದರೆ ನಮ್ಮ ಸಮಾಜದ ಹಾಗೂ ಸರಕಾರಿ ಪರಿಕಲ್ಪನೆಯ ಪ್ರಕಾರ ಭೂಮಿಯಲ್ಲಿ ದುಡಿಯುತ್ತಾ ಕೃಷಿ ಉತ್ಪನ್ನದ ಪ್ರಧಾನ ಕೊಡುಗೆದಾರರಾದ ಇವರು ರೈತರಾಗುವುದಿಲ್ಲ. ಇದು ಸತ್ಯವನ್ನು ತಲೆಕೆಳಗು ಮಾಡಿ ಹಿಡಿದು ತೋರಿಸುವ ಆಳುವ ಶಕ್ತಿಗಳ ಮಾಮೂಲಿ ಕುತಂತ್ರ. ದೇಶದ ಒಟ್ಟು ಕೃಷಿ ಹಾಗೂ ಕೃಷಿಯೇತರ ಕೂಲಿಕಾರ್ಮಿಕರಲ್ಲಿ ಪರಿಶಿಷ್ಟ ಜಾತಿಗಳು ಶೇ. 52.6ರಷ್ಟಿದ್ದರೆ, ಪರಿಶಿಷ್ಟ ಪಂಗಡಗಳು ಶೇ.38.3ರಷ್ಟಿದೆ. ಇತರ ಸಾಮಾನ್ಯ ವರ್ಗದವರು ಶೇ. 21.6ರಷ್ಟಿದೆ.

 2015-2016ರ ಕೃಷಿ ಗಣತಿಯ ಪ್ರಕಾರ ದೇಶದ ಒಟ್ಟು ಕೃಷಿ ಭೂಮಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಸೇರಿದವರ ಹಿಡಿತದಲ್ಲಿ ಶೇ.9ಕ್ಕಿಂತಲೂ ಕಡಿಮೆ, ಪರಿಶಿಷ್ಟ ವರ್ಗದಲ್ಲಿನ ಜನರ ಕೈಯಲ್ಲಿ ಶೇ. 11ಕ್ಕಿಂತಲೂ ಕಡಿಮೆ ಹಿಡಿತವಿದೆ. ಪರಿಶಿಷ್ಟ ಜಾತಿಗಳ ಬಳಿ ಸರಾಸರಿ ಇರುವ ಭೂಮಿ ಕೇವಲ ಶೇ. 0.78 ಹೆಕ್ಟೇರ್, ಪರಿಶಿಷ್ಟ ಪಂಗಡಗಳ ಬಳಿ ಇರುವ ಸರಾಸರಿ ಭೂಮಿ ಕೇವಲ ಶೇ. 1.48 ಹೆಕ್ಟೇರ್ ಆಗಿದೆ. ಮಲಗುಂಡಿಗಳನ್ನು ಶುಚಿಗೊಳಿಸುವ, ಮಲಹೊರುವಂತಹ ಕೆಲಸಗಳನ್ನು ಪರಿಶಿಷ್ಟ ಸಮುದಾಯಗಳಿಂದ ಮಾಡಿಸಲಾಗುತ್ತಿದೆ. ನಾಗರಿಕತೆಗೂ ಮೊದಲಿದ್ದ ಕಿರಾತಾವಸ್ಥೆಯಲ್ಲೂ ಇಲ್ಲದ ಕ್ರೂರ ಪದ್ಧತಿಯಿದು. ಮಲದ ಗುಂಡಿಗಳಲ್ಲಿ, ಒಳಚರಂಡಿಗಳ ಶುಚೀಕರಣಗಳಲ್ಲಿ ಉಸಿರುಗಟ್ಟಿ ಸಾಯುವ ಪರಿಸ್ಥಿತಿಯಲ್ಲಿ ಈ ಸಮುದಾಯವನ್ನು ಇಡಲಾಗಿದೆ. ಅವರ ಸಾವುಗಳಿಗೆ ಸರಿಯಾದ ಅಂಕಿಅಂಶಗಳನ್ನೂ ಇಡಲಾಗುವುದಿಲ್ಲ. ಅವರಿಗೆ ಯಾವ ಪರಿಹಾರಗಳನ್ನೂ ನೀಡಲಾಗುವುದಿಲ್ಲ. ಅವರ ಜೀವಗಳಿಗೆ ಯಾವುದೇ ಭದ್ರತೆಯೂ ಇಲ್ಲ. ಅಂತಹ ಕೆಲಸಗಳಲ್ಲಿ ತೊಡಗಿಸುವವರ ಮೇಲೆ ಯಾವುದೇ ಕ್ರಮಗಳೂ ಇಲ್ಲ. ಕೇವಲ ಕಾಗದದಲ್ಲಿ ಮಾತ್ರ ಮಲಹೊರುವ ಪದ್ಧತಿಯ ರದ್ದತಿಯಿದೆ. ಆ ಸಮುದಾಯಗಳ ಪುನರ್ವಸತಿ ವ್ಯವಸ್ಥೆಯ ಉಲ್ಲೇಖವಿದೆ. ಅದಕ್ಕೆಂದೇ 2018-2019ರ ಆಯವ್ಯಯದಲ್ಲಿ 70 ಕೋಟಿ ರೂಪಾಯಿಗಳನ್ನು 2019-2020ರ ಆಯವ್ಯಯದಲ್ಲಿ 110 ಕೋಟಿ ರೂಪಾಯಿಗಳನ್ನೂ ತೆಗೆದಿರಿಸಲಾಗಿದೆ. ಆದರೆ ಈ ಹಣವನ್ನು ಸಂಬಂಧಿತರಿಗಾಗಿ ಬಳಸಲಾಗುತ್ತಿಲ್ಲ. ಮಾಹಿತಿ ಹಕ್ಕಿನಡಿ ಪಡೆದ ವಿವರಗಳು ಅದನ್ನು ದೃಢೀಕರಿಸುತ್ತವೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ಕೊಲೆ, ಅತ್ಯಾಚಾರ, ಅಪಹರಣ, ಹಲ್ಲೆ, ಬಹಿಷ್ಕಾರ, ಕಿರುಕುಳ, ಅಪಮಾನ ಮೊದಲಾದ ದೌರ್ಜನ್ಯಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಲೇ ಸಾಗುತ್ತಿದೆ. ರಾಷ್ಟ್ರೀಯ ಅಪರಾಧಿ ಕೃತ್ಯಗಳ ಸಂಶೋಧನಾ ಸಂಸ್ಥೆಯ(NCRB) ವರದಿಗಳು ಇದನ್ನು ದೃಢೀಕರಿಸುತ್ತವೆ. ಆದರೆ ದಾಖಲಾಗದ ಪ್ರಕರಣಗಳು ದಾಖಲಾಗುವ ಪ್ರಕರಣಗಳಿಗಿಂತಲೂ ಹಲವು ಪಟ್ಟು ಹೆಚ್ಚಿರುತ್ತವೆ. ದಾಖಲಾಗುವ ಪ್ರಕರಣಗಳೂ ಕೂಡ ನ್ಯಾಯಯುತವಾಗಿ ಪರಿಹಾರವಾಗುವುದು ಬಹಳ ಕಡಿಮೆ. ಈ ಅಂಶವನ್ನೂ ಕೂಡ ಅಪರಾಧಿ ಪ್ರಕರಣಗಳ ಸಂಶೋಧನಾ ಸಂಸ್ಥೆಯ ಅಂಕಿ ಅಂಶಗಳೇ ಸ್ಪಷ್ಟಪಡಿಸುತ್ತವೆ. ಇಂತಹ ಪ್ರಕರಣಗಳಿಗೆ ಈಡಾಗುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ ಜನರಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಲೆಂದೇ 2018-19ರ ಆಯವ್ಯಯದಲ್ಲಿ 403.72 ಕೋಟಿ ರೂ.ಗಳನ್ನು, 2019-2020 ರ ಆಯವ್ಯಯದಲ್ಲಿ 530 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿತ್ತು. ಆದರೆ ನಿರ್ದಿಷ್ಟೀಕೃತ ಯೋಜನೆಗಳನ್ನು ಮಾಡದೆ ಇರುವುದು, ಪ್ರಕರಣಗಳು ನ್ಯಾಯಾಲಯಗಳಲ್ಲಿ ಸಕಾಲದಲ್ಲಿ ಇತ್ಯರ್ಥವಾಗದೇ ಹೋಗುವ, ವಿಚಾರಣೆಗಳಲ್ಲಿ ನಿಲ್ಲದೇ ಬಿದ್ದು ಹೋಗುವ, ಅಧಿಕಾರಶಾಹಿಗಳ ಜಾತೀಯ ಮನಸ್ಸುಗಳು ಇತ್ಯಾದಿ ಕಾರಣಗಳಿಂದ ನಿಗದಿತ ಹಣ ಸಂಬಂಧಪಟ್ಟವರಿಗೆ ತಲುಪದೇ ಎಲ್ಲೆಲ್ಲಿಗೋ ಹರಿಸಲಾಗುತ್ತದೆ. ದಲಿತ ದಮನಿತರ ಬಗೆಗಿನ ಬಹುತೇಕ ಸರಕಾರಿ ಧೋರಣೆಗಳು ಇದೇ ರೀತಿಗಳಲ್ಲೇ ಸಾಗುತ್ತವೆ. ಮೂರುಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಸರ್ದಾರ್ ವಲ್ಲಭಬಾಯ್ ಪಟೇಲರ ಬೃಹತ್ ಮೂರ್ತಿಯನ್ನು ಬಹುತೇಕವಾಗಿ ದಲಿತ ದಮನಿತರಿಗೆಂದು ನಿಗದಿಯಾಗಿದ್ದ ಹಣದಲ್ಲೇ ನಿರ್ಮಿಸಲಾಗಿದೆ ಎಂಬ ವರದಿಯನ್ನೂ ಕೂಡ ನಾವು ಈ ಹಿನ್ನೆಲೆಯಲ್ಲಿ ಗಮನಿಸಬಹುದು. ಬಹುತೇಕ ಸರಕಾರಿ ಇಲಾಖೆಗಳಿಗೆ ಈ ರೀತಿಯ ಹಣಕಾಸುಗಳನ್ನು ಸಂಬಂಧಪಟ್ಟವರಿಗಾಗಿ ಖರ್ಚು ಮಾಡದೇ ವಾಪಾಸು ಸರಕಾರಕ್ಕೆ ಕಳಿಸುವ ಪರಿಪಾಠ ಕೂಡ ಇದೆ. ಸರಕಾರವೇ ಆ ಹಣ ವಾಪಾಸು ಬರುವಂತೆ ವ್ಯವಸ್ಥಿತವಾಗಿ ನೋಡಿಕೊಳ್ಳುವುದೂ ಕೂಡ ಇದೆ. ಇನ್ನು ಭ್ರಷ್ಟ ಅಧಿಕಾರಶಾಹಿ ವ್ಯವಸ್ಥೆ ಯಾವುದೋ ನೆಪ ತೋರಿಸಿ ಅಂತಹ ಹಣವನ್ನು ನುಂಗಿಹಾಕುವ ಕಾರ್ಯವೂ ಸಾಕಷ್ಟು ನಡೆಯುತ್ತದೆ.

ಇನ್ನು ಮೀಸಲಾತಿಯ ಪ್ರಕಾರ ಖಾಲಿ ಇರುವ ಹುದ್ದೆಗಳನ್ನು ಸರಿಯಾದ ಸಮಯಕ್ಕೆ ತುಂಬದೇ ಖಾಲಿ ಬಿಡುತ್ತಾ ದಲಿತ ದಮನಿತರನ್ನು ವಂಚಿಸುವ ಕಾರ್ಯ ಮಾಮೂಲಿಯಾಗಿಬಿಟ್ಟಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಜಾಗತೀಕರಣ ನೀತಿಗಳ ಅಳವಡಿಕೆಯ ನಂತರ ಸರಕಾರಿ ಯಂತ್ರಾಂಗಗಳಲ್ಲಿನ ಉದ್ಯೋಗಾವಕಾಶಗಳನ್ನು ಕಡಿತಗೊಳಿಸುತ್ತಾ ಈಗ ಅತ್ಯಲ್ಪಮಟ್ಟಕ್ಕೆ ಇಳಿಸಲಾಗಿದೆ. ಜೊತೆಗೆ ಸಾರ್ವಜನಿಕ ಸಂಸ್ಥೆಗಳನ್ನು ಸಾರಾಸಗಟಾಗಿ ಭಾರೀ ಕಾರ್ಪೊರೇಟ್‌ಗಳಿಗೆ ಒಪ್ಪಿಸುವ ಕಾರ್ಯ ಬಿರುಸುಗೊಂಡಿದೆ. ಇತ್ತೀಚೆಗೆ ಬಿಎಸ್‌ಎನ್‌ಎಲ್‌ನಲ್ಲಿ ಸುಮಾರು 90,000ದಷ್ಟು ನೌಕರರನ್ನು ಕಡ್ಡಾಯ ನಿವೃತ್ತಿಗೊಳಪಡಿಸಿದ್ದನ್ನು ಇಲ್ಲಿ ಗಮನಿಸಬಹುದು. ಸಾರ್ವಜನಿಕ ಕ್ಷೇತ್ರ ಕುಬ್ಜಗೊಳ್ಳುವುದರೊಂದಿಗೆ ಉದ್ಯೋಗಾವಕಾಶಗಳಲ್ಲಿ ಮೀಸಲಾತಿ ಬಹುಪಾಲು ಜನರಿಗೆ ಕೇವಲ ಮರೀಚಿಕೆಯಂತಾಗಿದೆ. ಮೀಸಲಾತಿ ವ್ಯವಸ್ಥೆಯನ್ನೇ ರದ್ದುಗೊಳಿಸುವ ತಯಾರಿಯಲ್ಲಿ ಆಳುವ ಶಕ್ತಿಗಳು ತೊಡಗಿವೆ. ಮೇಲ್ಜಾತಿ ಮೇಲ್ವರ್ಗದ ಜನರನ್ನು ದಲಿತ ದಮನಿತರ ವಿರುದ್ಧ ಇದಕ್ಕಾಗಿ ಎತ್ತಿಕಟ್ಟಲಾಗುತ್ತಿದೆ.

 ಶಿಕ್ಷಣದಲ್ಲಿನ ಮೀಸಲಾತಿಯ ವಿಚಾರವನ್ನು ಗಮನಿಸಿದರೂ ಬಹಳ ನಿರಾಶಾದಾಯಕ ವಾತಾವರಣವೇ ಇದೆ. ಇಂಡಿಯಾದ 10 ಉನ್ನತ ವಿಶ್ವವಿದ್ಯಾನಿಲಯಗಳಲ್ಲಿ ಕೇವಲ ಮೂರು ವಿಶ್ವ ವಿದ್ಯಾನಿಲಯಗಳಲ್ಲಿ ಮಾತ್ರ ಶೇ 22.5 ರಷ್ಟು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿದ್ದಾರೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಮಾತ್ರ ದಲಿತ ಹಾಗೂ ಮಹಿಳೆಯರ ಸಂಖ್ಯೆ ಸಮಾಧಾನಕರವಾಗಿದೆ ಎನ್ನಬಹುದು. ಇನ್ನು ದೇಶದಲ್ಲಿರುವ 21 ಐಐಟಿಗಳಲ್ಲಿ ಶೇ. 19ಕ್ಕಿಂತಲೂ ಕಡಿಮೆ ದಲಿತ ವಿದ್ಯಾರ್ಥಿಗಳು 2018-2019ರಲ್ಲಿ ನೋಂದಾವಣೆಯಾಗಿದ್ದಾರೆ. ಅರ್ಧದಲ್ಲಿಯೇ ಉನ್ನತ ಶಿಕ್ಷಣವನ್ನು ಮೊಟಕುಗೊಳಿಸಿ ತೆರಳುವ ದಲಿತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ಜಾತಿದೌರ್ಜನ್ಯಗಳೂ ಕೂಡ ಅಧಿಕವಾಗಿವೆ. ಅನೇಕ ಆತ್ಮಹತ್ಯೆಗಳು ಇದರಿಂದಾಗಿ ನಡೆದಿವೆ.

ಇನ್ನು ಪ್ರಾಥಮಿಕ ಶಿಕ್ಷಣದಲ್ಲಿ ಸೇರ್ಪಡೆಯಾಗುವ ದಲಿತ ದಮನಿತ ಸಮುದಾಯಗಳಿಗೆ ಸೇರಿದ ಮಕ್ಕಳ ಸಂಖ್ಯೆ ಕೂಡ ಶೇಕಡಾವಾರು ಕಡಿಮೆಯೇ ಆಗಿದೆ. ಜೊತೆಗೆ ಶಾಲೆ ಅರ್ಧದಲ್ಲಿಯೇ ಬಿಡುವವರ ಸಂಖ್ಯೆಯೂ ಕೂಡ ಹೆಚ್ಚಾಗಿದೆ. 2010-2011ರಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹೊರಹೋಗುವ ಪರಿಶಿಷ್ಟಜಾತಿಯ ವಿದ್ಯಾರ್ಥಿಗಳ ಸಂಖ್ಯಾ ಪ್ರಮಾಣ ಶೇ. 29.90ರಷ್ಟಿದ್ದರೆ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಪ್ರಮಾಣ ಶೇ. 26.90ರಷ್ಟಿತ್ತು. ಕರ್ನಾಟಕದ ಒಟ್ಟಾರೆ ಪ್ರಮಾಣದಲ್ಲಿ ದಲಿತರಲ್ಲಿನ ಅಕ್ಷರಸ್ಥರ ಸಂಖ್ಯೆಯ ಅಂಕಿಅಂಶಗಳಲ್ಲಿ ಏರಿಕೆಯಾಗಿದ್ದರೂ ಅದನ್ನು ದಲಿತರ ಶಿಕ್ಷಣದ ಮಟ್ಟದ ಸುಧಾರಣೆಯಾಗಿದೆ ಎಂದು ಭಾವಿಸಲಾಗದು. ಯಾಕೆಂದರೆ ಒಟ್ಟಾರೆ ಶಿಕ್ಷಣ ವ್ಯವಸ್ಥೆಯೇ ಉಳ್ಳವರ ಹಕ್ಕು ಎಂಬಂತಹ ಸ್ಥಿತಿಯನ್ನು ನಿರ್ಮಿಸಲಾಗಿದೆ. ಇದರ ನೇರ ಹೊಡೆತ ದಲಿತ ದಮನಿತರ ಮೇಲೆಯೇ ಆಗುತ್ತದೆ ಎನ್ನುವುದು ಅರ್ಥವಾಗುವ ವಿಚಾರ.

ಈಗ ಜಾರಿಗೊಳಿಸುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆಗಳು ದಲಿತ ದಮನಿತರ ಪೌರತ್ವವನ್ನೇ ಪ್ರಶ್ನೆ ಮಾಡುತ್ತಿದೆ. ಇದು ದಲಿತ ದಮನಿತರ ಅಸ್ತಿತ್ವಕ್ಕೇ ಅಪಾಯವುಂಟುಮಾಡುವ ಸರಕಾರಿ ವ್ಯವಸ್ಥೆಯ ನಡೆಗಳಾಗಿವೆ. ಮುಂದಿನ ದಿನಗಳಲ್ಲಿ ದಲಿತ ದಮನಿತರಿಗೆ ಇರುವ ಅಲ್ಪಸ್ವಲ್ಪಸೌಲಭ್ಯಗಳನ್ನು ಕೂಡ ಪೌರತ್ವ ಕಾರಣ ಮುಂದೊಡ್ಡಿ ಕಿತ್ತುಕೊಂಡು ದೇಶ ಭ್ರಷ್ಟಗೊಳಿಸಿ ಜೀತಕ್ಕಿಳಿಸುವ ಹುನ್ನಾರ ಕೂಡ ಇದರಲ್ಲಿ ಸೇರಿದೆ.

ವಾಸ್ತವ ಇಷ್ಟೊಂದು ಪ್ರತಿಕೂಲಕರವಾಗಿ ಮಾರ್ಪಟ್ಟಿರುವಾಗ ದಲಿತ ದಮನಿತ ಸಮುದಾಯಗಳು ಹೆಚ್ಚಿನ ಮಟ್ಟದಲ್ಲಿ ತಮ್ಮ ನ್ಯಾಯಯುತ ಹಕ್ಕೊತ್ತಾಯಗಳನ್ನು ಮುಂದಿಡಬೇಕಾದ ಅಗತ್ಯವಿದೆ. ಕಳೆದುಹೋಗುತ್ತಿರುವ ಇದುವರೆಗೂ ಇದ್ದ ಸೌಲಭ್ಯಗಳನ್ನು ಉಳಿಸಿಕೊಳ್ಳಲು, ತಮ್ಮ ಪಾಲಿನ ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು, ವೈಜ್ಞಾನಿಕ ರೀತಿಯಲ್ಲಿ ಆಯಾ ಸಮುದಾಯಗಳ ಜನಸಂಖ್ಯಾವಾರು ಮೀಸಲಾತಿ ಹೆಚ್ಚಳ ಹಾಗೂ ಹಂಚಿಕೆಗಾಗಿ ಒಗ್ಗೂಡಬೇಕಾದ ಅವಶ್ಯಕತೆಯಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಿಲ್ಲಬೇಕಾದ ಅದೇ ವೇಳೆಯಲ್ಲಿ ಅವಕಾಶಗಳಲ್ಲಿ ತಮ್ಮ ನ್ಯಾಯಯುತ ಪಾಲನ್ನೂ ಬಲವಾಗಿ ಕೇಳುವಂತಾಗಬೇಕು. ಒಟ್ಟಾರೆ ದಲಿತ ದಮನಿತ ಸಮುದಾಯಗಳ ಹಿತಾಸಕ್ತಿಗಳ ರಕ್ಷಣೆಗಳಿಗೆ ಅನುಕೂಲವಾಗುವಂತಹ ನಡೆಗಳನ್ನಷ್ಟೇ ನಡೆಸಬೇಕಾದುದು ಅತ್ಯಗತ್ಯ. ವೋಟಿನ ರಾಜಕೀಯಕ್ಕಾಗಿ ಮಾತ್ರ ದಲಿತ ದಮನಿತರನ್ನು ಬಳಸಿಕೊಳ್ಳುವ, ಒಡೆದಾಳುವ ಶಕ್ತಿಗಳ ಬಗ್ಗೆ ದಲಿತ ದಮನಿತರು ಬಹಳ ಎಚ್ಚರಿಕೆಯಿಂದಿರಬೇಕಾದ ಸಂದರ್ಭ ಇದಾಗಿದೆ.

ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News