ಸಂವಿಧಾನದ ಆಶಯ ಈಡೇರದಿದ್ದರೆ ನಾವೇ ಹೊಣೆ: ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಮಾ.16: ಸಂವಿಧಾನದ ಆಶಯಗಳು ಇವತ್ತು ಈಡೇರದೆ ಇದ್ದರೆ ಆಡಳಿತ ನಡೆಸಿದ ನಮ್ಮನ್ನೆ ನಾವು ಹೊಣೆಗಾರರನ್ನಾಗಿಸಿಕೊಳ್ಳಬೇಕು. ಸಂವಿಧಾನ ಯಾರ ಕೈಯಲ್ಲಿ ಸುರಕ್ಷಿತವಾಗಿರುತ್ತದೆ ಎಂಬುದು ಮುಖ್ಯ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಸೋಮವಾರ ವಿಧಾನಸಭೆಯಲ್ಲಿ ಸಂವಿಧಾನದ ಮೇಲೆ ನಡೆದ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಡಳಿತ ನಡೆಸುವವರು ಕೆಟ್ಟವರಾಗಿದ್ದರೆ ಒಳ್ಳೆಯ ಸಂವಿಧಾನವು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಉತ್ತಮ ಆಡಳಿತಗಾರರ ಕೈಗೆ ಕೆಟ್ಟ ಸಂವಿಧಾನ ಕೊಟ್ಟರೂ ಅದನ್ನು ಉತ್ತಮವನ್ನಾಗಿಸುತ್ತಾರೆ ಎಂದರು.
ಅಧಿಕಾರ ಕೆಲವೇ ಜನರ ಕೈಯಲ್ಲಿ, ಬಲಾಢ್ಯರ ಕೈಯಲ್ಲಿ ಇರಬಾರದು. ಕೆಳಸ್ತರದ, ತುಳಿತಕ್ಕೆ ಒಳಗಾಗಿರುವ, ಶೋಷಿತರ ಕೈಗೂ ಅಧಿಕಾರ ಸಿಗಬೇಕು. ಸಮಾನತೆ, ಸ್ವಾತಂತ್ರ್ಯ, ಸಹೋದರತೆ ನಮ್ಮ ಜೀವನದ ಅಡಿಗಲ್ಲು ಆಗಬೇಕು ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು ಎಂದು ಅವರು ಹೇಳಿದರು.
ಅಂಬೇಡ್ಕರ್‌ಗೆ ದೇಶದ, ಸಾಮಾಜಿಕ, ಆರ್ಥಿಕ, ರಾಜಕೀಯ ವ್ಯವಸ್ಥೆ ಬಗ್ಗೆ ಸಂಪೂರ್ಣ ಅರಿವಿತ್ತು. ಆದುದರಿಂದಲೆ, ಇಷ್ಟೊಂದು ಉತ್ತಮವಾದ ಸಂವಿಧಾನವನ್ನು ರಚನೆ ಮಾಡಲು ಸಾಧ್ಯವಾಯಿತು. ಅವರಿಗೆ ಸಂವಿಧಾನ ಕರಡು ಸಮಿತಿಯ ಎಲ್ಲ ಸದಸ್ಯರು ತಮ್ಮದೆ ಆದ ರೀತಿಯಲ್ಲಿ ಸಹಕಾರ ನೀಡಿದ್ದರು ಎಂದು ಸಿದ್ದರಾಮಯ್ಯ ತಿಳಿಸಿದರು.
ವಿಶ್ವದ 195 ದೇಶಗಳ ಪೈಕಿ ಸ್ವಾತಂತ್ರ ಹೊಂದಿರುವ 176 ದೇಶಗಳಲ್ಲಿ ಸಂವಿಧಾನವಿದೆ. ನಮ್ಮ ದೇಶದ್ದು ಅತ್ಯಂತ ದೊಡ್ಡ ಲಿಖಿತ ಸಂವಿಧಾನ. 1930ರ ಜನವರಿ 26ರಂದು ಲಾಹೋರ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪೂರ್ಣ ಸ್ವರಾಜ್ಯದ ತೀರ್ಮಾನ ಕೈಗೊಳ್ಳಲಾಗಿತ್ತು. ಅದರ ಹಿನ್ನೆಲೆಯಲ್ಲಿ 1950ರ ಜನವರಿ 26ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು.
ದೇಹದಲ್ಲಿ ರಕ್ತದ ಕೊನೆಯ ಕಣ ಇರುವವರೆಗೂ ಸಂವಿಧಾನ ರಕ್ಷಣೆ ಮಾಡಲು ಪ್ರಯತ್ನಿಸಿ. ಇಲ್ಲದಿದ್ದರೆ, ಅರಾಜಕತೆ ಉಂಟಾಗಿ, ಶೋಷಣೆ, ದಮನಕಾರಿ ಶಕ್ತಿಗಳು ತಲೆ ಎತ್ತುತ್ತವೆ ಎಂದು ಅಂಬೇಡ್ಕರ್ ಹೇಳಿದ್ದರು. ಸಚಿವರೊಬ್ಬರು ಸಂವಿಧಾನ ಬದಲಾವಣೆ ಮಾಡುವುದಕ್ಕಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳಿದ ಮಾತುಗಳನ್ನು ನಾವು ಕೇಳಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಜಾತ್ಯತೀತ ಅನ್ನೋದು ಧರ್ಮವನ್ನು ರಾಜಕಾರಣದಿಂದ ಬೇರ್ಪಡಿಸುವುದು. ಯಾವುದೆ ಧರ್ಮಕ್ಕೆ ಆದ್ಯತೆ ಇರಬಾರದು ಎಂದು ರಾಧಾಕೃಷ್ಣ ತಮ್ಮ ‘ಡಿಸ್ಕವರಿ ಆಫ್ ಫೇತ್’ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಸಂವಿಧಾನ ರಚನೆಯಾದಾಗ ಜಾತ್ಯತೀತ ಎಂಬುದನ್ನು ಸೇರಿಸಿರಲಿಲ್ಲ. 1976ರಲ್ಲಿ ಸಂವಿಧಾನಕ್ಕೆ ತಂದ 42ನೆ ತಿದ್ದುಪಡಿ ವೇಳೆ ಜಾತ್ಯತೀತ ಪದವನ್ನು ಸೇರಿಸಲಾಯಿತು ಎಂದು ಅವರು ಹೇಳಿದರು.
ಅಂಬೇಡ್ಕರ್ ಅವರಿಗೆ ಬರೋಡದ ಮಹಾರಾಜರು ತಮ್ಮ ಆಸ್ಥಾನದಲ್ಲಿ ಹಣಕಾಸು ಮಂತ್ರಿ ಹಾಗೂ ರಕ್ಷಣಾ ಕಾರ್ಯದರ್ಶಿಯನ್ನಾಗಿ ಮಾಡಿದ್ದರು. ಆದರೆ, ಅವರಿಗೆ ಇರಲು ಒಂದು ಮನೆಯು ಸಿಗಲಿಲ್ಲ. ಜಾತಿ ಪದ್ಧತಿ, ಅಸ್ಪೃಶತೆ ಅಂಬೇಡ್ಕರ್ ಅವರನ್ನು ಯಾವ ಮಟ್ಟಕ್ಕೆ ಕಾಡಿರಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಇವತ್ತು ಮೀಸಲಾತಿ ಯಾರಿಗೆ ಸಿಗುತ್ತಿಲ್ಲ. ಪ್ರತಿಯೊಬ್ಬರಿಗೂ ಮೀಸಲಾತಿ ಸಿಗುತ್ತಿದೆ. ಆರಂಭದಲ್ಲಿ ಕೇವಲ ಎಸ್ಸಿ-ಎಸ್ಟಿಗಳಿಗೆ ಮೀಸಲಾತಿ ಇತ್ತು. 1951ರಲ್ಲಿ ಸಂವಿಧಾನಕ್ಕೆ ಮೊದಲ ತಿದ್ದುಪಡಿ ತಂದು ಓಬಿಸಿಗಳಿಗೆ ಮೀಸಲಾತಿ ನೀಡಲು ನಿರ್ಧರಿಸಲಾಯಿತು. ಜಾತಿ ವ್ಯವಸ್ಥೆ ಇರುವವರೆಗೆ ಮೀಸಲಾತಿ ಇರಲೇಬೇಕು ಎಂದು ಅವರು ತಿಳಿಸಿದರು.
ನಮ್ಮ ದೇಶದ ಜಾತಿ ವ್ಯವಸ್ಥೆಯಲ್ಲಿ ಜಡತ್ವ ಸೇರಿಕೊಂಡಿದ್ದು, ಚಲನೆ ಇಲ್ಲ. ಚಲನೆ ಇಲ್ಲದ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಲೋಹಿಯಾ ಹೇಳುತ್ತಿದ್ದರು. ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು ಎಂದು ಸಂವಿಧಾನದ 17 ಕಲಂ ಹೇಳುತ್ತದೆ. ಈ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಲಿಂಗತಾರತಮ್ಯ ಇರಬಾರದು ಎಂದು ಸಂವಿಧಾನ ಹೇಳುತ್ತದೆ. ಆದರೆ, ರಾಜ್ಯಸಭೆಯಲ್ಲಿ ಅನುಮೋದನೆ ಪಡೆದುಕೊಂಡಿರುವ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ವಿಧೇಯಕಕ್ಕೆ ಈವರೆಗೆ ಲೋಕಸಭೆಯಲ್ಲಿ ಅಂಗೀಕಾರ ನೀಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಇಂದಿರಾ ಸಹಾನಿ ಪ್ರಕರಣದಲ್ಲಿ ತೀರ್ಪು ನೀಡಿದ 13 ಮಂದಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಓರ್ವ ನ್ಯಾಯಮೂರ್ತಿ ಕನ್ಯಾಕುಮಾರಿ ಮೂಲದ ಪಾಂಡಿಯನ್ ಎಂಬುವರು, ಮಡಿವಾಳ ಸಮಾಜದವರನ್ನು ‘ನಿಶಾಚರಿ’ಗಳು ಎಂದು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದರು.
ಮಹಾತ್ಮ ಗಾಂಧೀಜಿ ಅಂಬೇಡ್ಕರ್ ಅವರ ವಿದ್ವತ್ ನೋಡಿ ಅವರನ್ನು ಕೆಲಕಾಲ ಬ್ರಾಹ್ಮಣ ಎಂದು ಭಾವಿಸಿದ್ದರು ಎಂದು ಸಿದ್ದರಾಮಯ್ಯ ಹೇಳಿದಾಗ, ಮಧ್ಯಪ್ರವೇಶಿಸಿದ ಹಿರಿಯ ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್, ಪರಮೇಶ್ವರ್ ಅವರನ್ನು ನೋಡಿ ನಮಗೂ ಹಾಗೆ ಅನ್ನಿಸಿತ್ತು ಎಂದರು. ಸಂವಿಧಾನದಿಂದಾಗಿ ಇವತ್ತು ಪರಮೇಶ್ವರ್ ಈ ಮಟ್ಟಿಗೆ ಬೆಳೆಯಲು ಸಾಧ್ಯವಾಯಿತು ಎಂದು ಸಿದ್ದರಾಮಯ್ಯ ಹೇಳಿದರು.
1776ರ ಅಮೆರಿಕ ಕ್ರಾಂತಿಯ ಘೋಷಣೆ ‘ಸೃಷ್ಟಿಯಲ್ಲಿ ಎಲ್ಲ ಮಾನವರು ಸಮಾನರು’, 1789ರ ಫ್ರೆಂಚ್ ಕ್ರಾಂತಿಯ ಘೋಷಣೆ ‘ಸ್ವಾತಂತ್ರ, ಸಮಾನತೆ, ಸೌಹಾರ್ದತೆ’, 1917ರ ರಷ್ಯಾ ಕ್ರಾಂತಿಯ ಘೋಷಣೆ ‘ಸಾಮರ್ಥ್ಯಕ್ಕೆ ತಕ್ಕಂತೆ ದುಡಿಯಬೇಕು, ಅಗತ್ಯಕ್ಕೆ ತಕ್ಕಂತೆ ಗಳಿಸಬೇಕು’, 1948ರಲ್ಲಿ ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕುಗಳ ಘೋಷಣೆ. ಇವೆಲ್ಲವೂ ನಮ್ಮ ಸಂವಿಧಾನ ರಚನೆಯ ಮೇಲೆ ಪ್ರಭಾವ ಬೀರಿವೆ.
ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ