ನಿಮ್ಮ ಮೂತ್ರಪಿಂಡಗಳ ಆರೋಗ್ಯಕ್ಕಾಗಿ ಈ ಆಹಾರಗಳನ್ನು ಸೇವಿಸಿ

Update: 2020-03-17 13:09 GMT

ಮೂತ್ರಪಿಂಡಗಳು ನಮ್ಮ ಶರೀರವು ಸೂಕ್ತವಾಗಿ ಕಾರ್ಯ ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ. ರಕ್ತವನ್ನು ಸೋಸುವ ಜೊತೆಗೆ ಶರೀರದಿಂದ ವಿಷವಸ್ತುಗಳನ್ನು ಹೊರಗೆ ಹಾಕುವಲ್ಲಿ ಮತ್ತು ರಕ್ತದೊತ್ತಡವನ್ನು ಕಾಯ್ದುಕೊಳ್ಳುವಲ್ಲಿಯೂ ನೆರವಾಗುತ್ತವೆ. ಮೂತ್ರಪಿಂಡಗಳ ಆರೋಗ್ಯವನ್ನು ಕಾಯ್ದುಕೊಳ್ಳಲು ಮತ್ತು ಮೂತ್ರಪಿಂಡ ರೋಗಗಳನ್ನು ತಡೆಯಲು ಆರೋಗ್ಯಕರ ಆಹಾರ ಸೇವನೆಯು ಮುಖ್ಯವಾಗಿದೆ.

ಎಲ್ಲ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುವ ಆಹಾರವು ಕಿಡ್ನಿಗಳ ಕಾರ್ಯವನ್ನು ಉತ್ತೇಜಿಸುವುದು ಮಾತ್ರವಲ್ಲ,ಮೂತ್ರಪಿಂಡಗಳ ಸೋಂಕುಗಳ ಮತ್ತು ಕಲ್ಲುಗಳ ಅಪಾಯವನ್ನೂ ಕಡಿಮೆ ಮಾಡುತ್ತದೆ. ಅಂತಹ ಕೆಲವು ಆಹಾರಗಳ ಕುರಿತು ಮಾಹಿತಿಯಿಲ್ಲಿದೆ....

* ಕೆಂಪು ದೊಣ್ಣೆಮೆಣಸು

 ಇದು ಕಡಿಮೆ ಪ್ರಮಾಣದಲ್ಲಿ ಪೊಟ್ಯಾಷಿಯಂ ಮತ್ತು ಹೆಚ್ಚಿನ ಪ್ರಮಾಣದಲ್ಲಿ ವಿಟಾಮಿನ್ ಸಿ,ಎ,ಬಿ6,ಫಾಲಿಕ್ ಆ್ಯಸಿಡ್ ಮತ್ತು ನಾರಿನಂತಹ ಅಗತ್ಯ ವಿಟಾಮಿನ್‌ಗಳು ಹಾಗೂ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವ ಕೆಂಪು ದೊಣ್ಣೆಮೆಣಸು ಫ್ರೀ ರ್ಯಾಡಿಕಲ್‌ಗಳು ಮತ್ತು ಉರಿಯೂತದಿಂದ ಶರೀರಕ್ಕೆ ಮುಕ್ತಿ ನೀಡುತ್ತವೆ ಮತ್ತು ಅದನ್ನು ವಿವಿಧ ರೂಪಗಳ ಕ್ಯಾನ್ಸರ್‌ನಿಂದ ರಕ್ಷಿಸುತ್ತವೆ. ಜೊಲ್ಲು ಮತ್ತು ಜಠರ ದ್ರವಗಳ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಹಸಿವೆಯನ್ನು ಹೆಚ್ಚಿಸುತ್ತದೆ ಮತ್ತು ಶರೀರದಲ್ಲಿ ವಿಷವಸ್ತುಗಳನ್ನು ಕಡಿಮೆಗೊಳಿಸಿ ಮೂತ್ರಪಿಂಡಗಳನ್ನು ಆರೋಗ್ಯಯುತವಾಗಿರಿಸುತ್ತದೆ.

* ಕ್ಯಾಬೇಜ್

 ಕ್ಯಾಬೇಜ್‌ನಲ್ಲಿ ಫೈಟೊಕೆಮಿಕಲ್‌ಗಳು ಮತ್ತು ಫ್ಯೈಟೊನ್ಯೂಟ್ರಿಯಂಟ್‌ಗಳು ಹೇರಳವಾಗಿದ್ದು,ಉತ್ಕರ್ಷಣ ನಿರೋಧಕಗಳಾಗಿ ಕೆಲಸ ಮಾಡುತ್ತವೆ ಹಾಗೂ ಮೂತ್ರಪಿಂಡಗಳ ಕಾರ್ಯಕ್ಕೆ ವ್ಯತ್ಯಯವನ್ನುಂಟು ಮಾಡುವ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಫ್ರೀ ರ್ಯಾಡಿಕಲ್‌ಗಳನ್ನು ತಟಸ್ಥಗೊಳಿಸಲು ನೆರವಾಗುತ್ತವೆ. ಅಲ್ಲದೆ ಕ್ಯಾಬೇಜ್‌ನಲ್ಲಿ ಅಧಿಕ ಪ್ರಮಾಣದಲ್ಲಿರುವ ವಿಟಾಮಿನ್ ಸಿ ವಿಷವಸ್ತುಗಳನ್ನು ಶರೀರದಿಂದ ಹೊರಹಾಕಲು ಮತ್ತು ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಕ್ಯಾಬೇಜ್‌ನಲ್ಲಿ ವಿಟಾಮಿನ್ ಕೆ,ವಿಟಾಮಿನ್ ಬಿ6,ಫಾಲಿಕ್ ಆ್ಯಸಿಡ್ ಮತ್ತು ನಾರು ಹೇರಳವಾಗಿದ್ದು,ಇವು ಮೂತ್ರಪಿಂಡಗಳ ಮೇಲೆ ಧನಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಅಲ್ಲದೆ ಅದರಲ್ಲಿ ಪೊಟ್ಯಾಷಿಯಂ ಕಡಿಮೆ ಪ್ರಮಾಣದಲ್ಲಿರುವುದರಿಂದ ಮೂತ್ರಪಿಂಡ ರೋಗಿಗಳಿಗೆ ಸೂಕ್ತ ಆಹಾರವಾಗಿದೆ.

* ಕಾಲಿಫ್ಲವರ್

ಕಾಲಿಫ್ಲವರ್‌ ನಲ್ಲಿ ವಿಟಾಮಿನ್ ಸಿ,ಫಾಲೇಟ್‌ಗಳು ಮತ್ತು ನಾರು ಹೇರಳವಾಗಿರುವುದ ರಿಂದ ಮೂತ್ರಪಿಂಡಗಳ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಶರೀರದಿಂದ ವಿಷವಸ್ತುಗಳನ್ನು ಹೊರಗೆ ಹಾಕಲು ನೆರವಾಗುವ ಜೊತೆಗೆ ಮೂತ್ರಪಿಂಡಗಳು ಮತ್ತು ಒಟ್ಟಾರೆ ಶರೀರದ ಆರೋಗ್ಯಕ್ಕೆ ಪೂರಕವಾಗಿದೆ. ಅದರಲ್ಲಿರುವ ಉತ್ಕರ್ಷಣ ನಿರೋಧಕಗಳು ಶರೀರವನ್ನು ಉತ್ಕರ್ಷಣದಿಂದ ರಕ್ಷಿಸುತ್ತವೆ ಮತ್ತು ಮೂತ್ರಪಿಂಡಗಳ ಆರೋಗ್ಯಕ್ಕೆ ಹೇಳಿ ಮಾಡಿಸಿದ ಆಹಾರವಾಗಿದೆ.

* ಬ್ಲೂಬೆರ್ರಿ

ಈ ಹಣ್ಣುಗಳು ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳ ಆಗರವಾಗಿವೆ. ಈ ಪೋಷಕಾಂಶಗಳು ಮೂತ್ರಪಿಂಡಗಳ ಸೂಕ್ತ ಕಾರ್ಯ ನಿರ್ವಹಣೆಗೆ ಮತ್ತು ಮೂತ್ರಪಿಂಡಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು ನೆರವಾಗುತ್ತವೆ. ಇವುಗಳಲ್ಲಿ ಪೊಟ್ಯಾಷಿಯಂ ಮತ್ತು ರಂಜಕ ಅಲ್ಪಪ್ರಮಾಣದಲ್ಲಿರುವುದರಿಂದ ಮೂತ್ರಪಿಂಡಗಳ ಆರೋಗ್ಯಕ್ಕೆ ಪೂರಕವಾಗಿವೆ. ಈ ಖನಿಜಗಳು ಮೂತ್ರಪಿಂಡಗಳ ಮೇಲೆ ಒತ್ತಡ ಹೇರುವುದರಿಂದ ಮೂತ್ರಪಿಂಡ ರೋಗಿಗಳು ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುವ ಆಹಾರಗಳಿಂದ ದೂರವಿರಬೇಕಾಗುತ್ತದೆ.

* ಸೇಬು

ಸೇಬು ಹಣ್ಣಿನಲ್ಲಿ ಹೆಚ್ಚಿನ ಪೆಕ್ಟಿನ್,ಕರಗಬಲ್ಲ ನಾರು ಮತ್ತು ಕಡಿಮೆ ಗ್ಲುಕೋಸ್ ಮಟ್ಟವಿರುವುದರಿಂದ ರಕ್ತ ಸಂಚಾರವನ್ನು ಹೆಚ್ಚಿಸುವ ಜೊತೆಗೆ ಮೂತ್ರಪಿಂಡಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಸಮೃದ್ಧವಾಗಿರುವ ಉತ್ಕರ್ಷಣ ನಿರೋಧಕಗಳು ವಿಷವಸ್ತುಗಳನ್ನು ಹೊರಕ್ಕೆ ಹಾಕಲು ನೆರವಾಗುತ್ತವೆ ಮತ್ತು ಒಟ್ಟಾರೆ ಆರೋಗ್ಯ ರಕ್ಷಣೆಯನ್ನು ನೀಡುತ್ತವೆ. ಮೂತ್ರಪಿಂಡ ರೋಗಿಗಳು ಮತ್ತು ಮೂತ್ರಪಿಂಡ ವೈಫಲ್ಯಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಚೇತರಿಸಿಕೊಳ್ಳಲು ಸೇಬು ನೆರವಾಗುತ್ತದೆ.

* ಕೆಂಪು ದ್ರಾಕ್ಷಿಗಳು

ಇವುಗಳಲ್ಲಿ ಸಮೃದ್ಧವಾಗಿರುವ ಫ್ಲಾವನಾಯ್ಡಾಗಳು ಮತ್ತು ಉತ್ಕರ್ಷಣ ನಿರೋಧಕಗಳು ಉತ್ಕರ್ಷಣವನ್ನು ಮತ್ತು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತವೆ. ಇವು ಶರೀರದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುವ ಜೊತೆಗೆ ಮೂತ್ರಪಿಂಡಗಳ ಮೇಲಿನ ಒತ್ತಡವನ್ನು ತಗ್ಗಿಸುತ್ತವೆ. ಇವುಗಳಲ್ಲಿ ಅಧಿಕ ಪ್ರಮಾಣದಲ್ಲಿರುವ ವಿಟಾಮಿನ್ ಸಿ ಸಮರ್ಥ ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುತ್ತದೆ ಮತ್ತು ಶರೀರದಿಂದ ವಿಷವಸ್ತುಗಳನ್ನು ಹೊರಗೆ ಹಾಕಲು ನೆರವಾಗುತ್ತದೆ,ತನ್ಮೂಲಕ ಮೂತ್ರಪಿಂಡಗಳ ಮೇಲಿನ ವಿಷವಸ್ತುಗಳ ಹೊರೆಯನ್ನು ಕಡಿಮೆ ಮಾಡಿ ಅವುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News