ಐಎಂಎ ಪ್ರಕರಣ: 465 ಕೋಟಿ ರೂ. ಆಸ್ತಿ ಮುಟ್ಟುಗೋಲು; ಸಚಿವ ಮಾಧುಸ್ವಾಮಿ

Update: 2020-03-17 16:29 GMT

ಬೆಂಗಳೂರು, ಮಾ.17: ಐಎಂಎ ಪ್ರಕರಣದಲ್ಲಿ ಸುಮಾರು 70 ಸಾವಿರ ಜನರಿಗೆ ವಂಚನೆಯಾಗಿದ್ದು, ಈ ಸಂಬಂಧ ಒಟ್ಟು 465 ಕೋಟಿ ರೂ.ಗಳ ಚರ ಮತ್ತು ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರಕಾರ ಆದೇಶ ಹೊರಡಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ನಡೆದ ಸಾರ್ವಜನಿಕ ಮಹತ್ವದ ವಿಷಯದ ಮೇಲೆ ನಡೆದ ಚರ್ಚೆಗೆ ಸರಕಾರದ ಪರವಾಗಿ ಉತ್ತರ ನೀಡಿದ ಅವರು, ಐಎಂಎಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ವಿಶೇಷ ತನಿಖಾ ದಳವನ್ನು ರಚಿಸಲಾಗಿದೆ ಎಂದರು.

ಐಎಂಎ ಸಂಸ್ಥಾಪಕ ಮನ್ಸೂರ್ ಅಲಿ ಖಾನ್ ವಿರುದ್ಧ ಹಲವು ಹೂಡಿಕೆದಾರರು ದೂರು ಕೊಟ್ಟಿದ್ದಾರೆ. ಈಗಾಗಲೆ ಸಿಬಿಐಯಿಂದ ತನಿಖೆ ನಡೆಯುತ್ತಿದೆ. ತನಿಖಾ ವರದಿಯನ್ನು ಹೈಕೋರ್ಟ್‌ಗೆ ಕಾಲಕಾಲಕ್ಕೆ ಸಿಬಿಐ ಸಲ್ಲಿಸುತ್ತಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ರಿಸರ್ವ್ ಬ್ಯಾಂಕ್‌ನ ಸ್ಥಳೀಯ ಮುಖ್ಯಸ್ಥರು ಮತ್ತು ವಿವಿಧ ವ್ಯಕ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ, ವಂಚಕ ಕಂಪೆನಿಗಳ ಮೇಲೆ ನಿಗಾ ಇಡಲಾಗಿದೆ. ಸಾರ್ವಜನಿಕರಲ್ಲಿಯೂ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಐಎಂಎ ಪ್ರಕರಣದ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡುವ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮನವಿ ಮಾಡಿದ್ದೇವೆ. 70 ಸಾವಿರ ಅರ್ಜಿಗಳನ್ನು ಒಂದೇ ನ್ಯಾಯಾಲಯದಲ್ಲಿ ವಿಚಾರಣೆ ಮಾಡಲು ಸಾಧ್ಯವೆ ಅನ್ನುವ ಪ್ರಶ್ನೆ ಉದ್ಭವವಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಸದಸ್ಯೆ ಸೌಮ್ಯಾ ರೆಡ್ಡಿ, ಭವಿಷ್ಯದಲ್ಲಿ ಐಎಂಎ ಅಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ಇಂತಹ ಹೂಡಿಕೆ ಸಂದರ್ಭದಲ್ಲಿ ವಿಮೆ ಮಾಡಿಸಲು ಸಾಧ್ಯವೇ ಎಂಬುದನ್ನು ಪರಿಶೀಲನೆ ನಡೆಸಬೇಕು. ಅಲ್ಲದೆ, ತನಿಖೆಯನ್ನು ಪೂರ್ಣಗೊಳಿಸಲು ಗಡುವು ನಿಗದಿ ಮಾಡಬೇಕು ಎಂದರು.

ಐಎಂಎಯಿಂದ ಜಪ್ತಿಯಾಗಿರುವ ಆಸ್ತಿ, ಹಣ ಬಗ್ಗೆ ನ್ಯಾಯಾಲಯ ನಿರ್ಧಾರ ತೆಗೆದುಕೊಳ್ಳಬೇಕು. ಹೂಡಿಕೆದಾರರಿಗೆ ಹಣ ಹಂಚುವ ಅಧಿಕಾರ ಸರಕಾರಕ್ಕಿಲ್ಲ. ಆದರೂ, ಜಪ್ತಿಯಾಗಿರುವ ಹಣವನ್ನು ಹೂಡಿಕೆದಾರರಿಗೆ ಹಂಚಬಹುದೆ ಎಂದು ಮನವಿ ಸಲ್ಲಿಸಿ ಕೇಳುತ್ತೇವೆ. ಐಎಂಎ ಪ್ರಕರಣ ತ್ವರಿತಗತಿಯಲ್ಲಿ ಇತ್ಯರ್ಥ ಆಗಲೇಬೇಕು ಎಂದು ಮಾಧುಸ್ವಾಮಿ ಹೇಳಿದರು.

ಬಡವರ ಹಣ ಮೊದಲು ವಾಪಸ್ ಮಾಡಿ

ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರ ಈವರೆಗೆ ಎಷ್ಟು ಆಸ್ತಿಯನ್ನು ಜಪ್ತಿ ಮಾಡಿದೆ ಎಂಬ ಮಾಹಿತಿ ಸಾರ್ವಜನಿಕರಿಗೆ ಗೊತ್ತಿಲ್ಲ. ನಮ್ಮ ಸರಕಾರ ಈ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಿತ್ತು. ಈ ಸರಕಾರ ಅದನ್ನು ಸಿಬಿಐ ತನಿಖೆಗೆ ಒಪ್ಪಿಸಿದೆ. ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವವರು ಬಡವರು, ಅನೇಕ ಕಾರಣಗಳಿಂದ ಅವರು ಹೂಡಿಕೆ ಮಾಡಿದ್ದರು. 50 ಸಾವಿರ ರೂ.ಗಳಿಂದ 1 ಲಕ್ಷ ರೂ.ಗಳವರೆಗೆ ಯಾರು ಹೂಡಿಕೆ ಮಾಡಿದ್ದಾರೆ. ಅವರ ಹಣವನ್ನು ಆದ್ಯತೆ ಮೇರೆಗೆ ವಾಪಸ್ ನೀಡಲು ಕ್ರಮ ಕೈಗೊಳ್ಳಿ.

-ಝಮೀರ್ ಅಹ್ಮದ್ ಖಾನ್, ಕಾಂಗ್ರೆಸ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News