'ಬ್ರಿಟಷರಿಗೆ ಅಭಿನಂದನೆ ಸಲ್ಲಿಸಬೇಕು': ಮೇಲ್ಮನೆಯಲ್ಲಿ ವಾದ-ವಿವಾದ
ಬೆಂಗಳೂರು, ಮಾ.17: ‘ಬ್ರಿಟಿಷರಿಗೂ ಅಭಿನಂದನೆಗಳು ಸಲ್ಲಿಸಬೇಕು’ ಎಂಬ ಪದ ಮೇಲ್ಮನೆಯಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ವಾದ-ವಿವಾದಕ್ಕೆ ಸಾಕ್ಷಿಯಾಯಿತು.
ಮಂಗಳವಾರ ವಿಧಾನಪರಿಷತ್‌ನಲ್ಲಿ ಸಂವಿಧಾನದ ಮೇಲಿನ ಮುಂದುವರಿದ ಚರ್ಚೆಯಲ್ಲಿ ಪಾಲ್ಗೊಂಡು ಪಿ.ಆರ್.ರಮೇಶ್ ಮಾತನಾಡುತ್ತಿದ್ದ ವೇಳೆ, ಬ್ರಿಟಿಷರಿದ್ದ ಕಾಲದಲ್ಲಿ ಆಡಳಿತ ಉತ್ತಮವಾಗಿತ್ತು. ಹೀಗಾಗಿ, ನಾವು ಅಭಿನಂದನೆಗಳನ್ನು ಸಲ್ಲಿಸಬೇಕಿದೆ ಎಂದು ಹೇಳಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿ, ನಮ್ಮ ಸಂಪತ್ತನ್ನು ಲೂಟಿ ಹೊಡೆದವರನ್ನು ಹೊಗಳುವುದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ. ಸದನದಲ್ಲಿ ಗಾಂಧಿಯ ಫೋಟೋ ತೆಗೆದು, ರಾಬರ್ಟ್ ಕ್ಲೈವ್ ಫೋಟೋ ಹಾಕಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ನಮ್ಮ ದೇಶದಿಂದ ಬ್ರಿಟಿಷರು ಎಷ್ಟು ಲೂಟಿ ಮಾಡಿದರು ಎಂಬ ಲೆಕ್ಕ ನಮ್ಮ ಬಳಿಯಿಲ್ಲ. ಆದರೆ, ಬ್ರಿಟನ್ ಲೈಬ್ರರಿಯಲ್ಲಿ ಅದರ ಬಗ್ಗೆ ಸಾಕಷ್ಟು ಮಾಹಿತಿಯಿದೆ ಎಂದ ಅವರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್, ಬ್ರಿಟಿಷರ ಜತೆ ಸೇರಿ ಹುನ್ನಾರ ಮಾಡಿದವರು ಯಾರೆಂದು ಎಲ್ಲರಿಗೂ ತಿಳಿದಿದೆ. ಸ್ವಾತಂತ್ರ್ಯ ಹೋರಾಟಕ್ಕಾಗಿ ಅನೇಕರು ಹೋರಾಟ ಮಾಡಿದ್ದು, ಪ್ರಾಣ ತ್ಯಾಗವನ್ನೂ ಮಾಡಿದ್ದಾರೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಪ್ರಾಣೇಶ್, ಬ್ರಿಟಿಷರಿಗೆ ಧನ್ಯವಾದ ಸಲ್ಲಿಕೆ ಮಾಡುವುದು ಹೋರಾಟಗಾರರಿಗೆ ಮಾಡುವ ಅಪಮಾನ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆಗ ರಮೇಶ್, ಬ್ರಿಟಿಷರ ಆಳ್ವಿಕೆಗಿಂತ ಈಗ ನಾವು ಕೆಟ್ಟದಾಗಿ ಬದುಕುತ್ತಿದ್ದೇವೆ. ನಾನು ಹೇಳಿದ್ದನ್ನು ನೀವು ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.
ಈ ವೇಳೆ ಬಿಜೆಪಿ ಸದಸ್ಯರಾದ ರವಿಕುಮಾರ್, ಪ್ರಾಣೇಶ್, ಮಹಾಂತೇಶ್ ಕವಟಗಿ, ಸುಬ್ರಮಣಿ ರಮೇಶ್‌ರ ಹೇಳಿಕೆಯನ್ನು ಖಂಡಿಸಿದರು. ಅಲ್ಲದೆ, ಅವರ ಹೇಳಿಕೆಗೆ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು. ಆಗ ರವಿಕುಮಾರ್ ಮಾತನಾಡಿ, ನಾವಿಂದು ಭಾರತದ ಸಂವಿಧಾನದ ಬಗ್ಗೆ ಮಾತನಾಡುತ್ತೇವೆ, ಹೊರತು ಬ್ರಿಟಿಷರ ಸಂವಿಧಾನದ ಬಗ್ಗೆ ಅಲ್ಲ ಎಂದು ರಮೇಶ್‌ರ ಕಾಲೆಳೆಯಲು ಪ್ರಯತ್ನಿಸಿದರು.
ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಸದನದಲ್ಲಿ ಎಲ್ಲರಿಗೂ ಮಾತನಾಡಲು ಅವಕಾಶವಿದೆ. ಆದರೆ, ಮಾತಿನ ಭರದಲ್ಲಿ ಬ್ರಿಟಿಷರಿಗೆ ಅಭಿನಂದನೆ ಸಲ್ಲಿಸುವುದು ಸಲ್ಲ. ಹೀಗಾಗಿ, ಅವರ ಹೇಳಿಕೆಯನ್ನು ಕಡತದಿಂದ ತೆಗೆಯಬೇಕು ಎಂದು ಮನವಿ ಮಾಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ, ಸದನದಲ್ಲಿ ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕಿದೆ. ಅವರಿಗೆ ಮಾತನಾಡಲು ಅವಕಾಶ ನೀಡಿದ್ದು, ಅವರ ಮಾತನ್ನು ಗೌರವಿಸಬೇಕು. ನೀವು ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದೀರಾ. ಆದರೆ, ಅವರು ಹೀಗೇ ಮಾತನಾಡಬೇಕು ಎಂದು ಹೇಳಲು ಸಾಧ್ಯವಿಲ್ಲ. ಸದನ ಮುಂದುವರಿಸಬೇಕಾ, ಬೇಡವಾ ಎಂದು ಪ್ರಶ್ನಿಸಿದ ಬಳಿಕ ಎಲ್ಲರೂ ಸುಮ್ಮನಾದರು.
ಮಾತು ಮುಂದುವರಿಸಿದ ಪಿ.ಆರ್.ರಮೇಶ್, ಬ್ರಿಟಿಷರು ಹಾಕಿದ ವಿಷ ಬೀಜವೇ ನಮಗಿಂದು ಅಮೃತವಾಗಿದೆ. ದೇಶದಲ್ಲಿ 75 ರಾಜ ವಶಂಸ್ಥರು, 600 ಕ್ಕೂ ಹೆಚ್ಚು ಆಡಳಿತಗಾರರು ಒಟ್ಟುಗೂಡಲು ಸಾಧ್ಯವಾಗಿದೆ. ನಮ್ಮ ಸಂವಿಧಾನದ ಉದ್ದೇಶ ಈಡೇರುವ ಬದಲಿಗೆ, ಅದರ ದುರುಪಯೋಗವೇ ಜಾಸ್ತಿಯಾಗುತ್ತಿದೆ ಎಂದರು.