ಸಿಎಎ ಸಂವಿಧಾನಕ್ಕೆ ಪೂರಕವಾಗಿ ತಿದ್ದುಪಡಿಯಾಗಲಿ: ಪ್ರಕಾಶ್ ರಾಠೋಡ್

Update: 2020-03-17 18:17 GMT

ಬೆಂಗಳೂರು, ಮಾ.17: ಕೇಂದ್ರದ ಸರಕಾರ ಜಾರಿ ಮಾಡಿರುವ ಸಿಎಎ ಕಾಯ್ದೆಯಲ್ಲಿ ಮುಸ್ಲಿಮ್ ಸಮುದಾಯವನ್ನು ಕೈಬಿಟ್ಟಿರುವುದು ಸಂವಿಧಾನದ ಪ್ರಸ್ತಾವನೆಗೆ ವಿರುದ್ಧವಾಗಿದೆ. ಹೀಗಾಗಿ ಸಿಎಎ ಕಾಯ್ದೆಯನ್ನು ಸಂವಿಧಾನಕ್ಕೆ ಪೂರಕವಾಗಿ ತಿದ್ದುಪಡಿ ಮಾಡಬೇಕಿದೆ ಎಂದು ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಠೋಡ್ ಒತ್ತಾಯಿಸಿದ್ದಾರೆ.

ಮಂಗಳವಾರ ವಿಧಾನಪರಿಷತ್‌ನಲ್ಲಿ ಸಂವಿಧಾನದ ಕುರಿತ ಚರ್ಚೆಯ ವೇಳೆ ಮಾತನಾಡಿದ ಅವರು, ಸಂವಿಧಾನದ ಮೂಲ ಆಶಯಗಳನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯಗಳಲ್ಲಿ ಒಂದಾಗಿದೆ. ಆದರೆ, ಕೇಂದ್ರ ಸರಕಾರ ಇದಕ್ಕೆ ವಿರುದ್ಧವಾಗಿ ಕಾಯ್ದೆ ರೂಪಿಸಿದೆ ಎಂದು ಆರೋಪಿಸಿದರು.

ಸಿಎಎ ಕಾಯ್ದೆಗೆ ನಮ್ಮ ವಿರೋಧವಿಲ್ಲ. ಆದರೆ, ಸಂಸತ್‌ನಲ್ಲಿ ಬಹುಮತ ಇದ್ದ ಮಾತ್ರಕ್ಕೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾನೂನು ರೂಪಿಸಲು ಹೊರಟಿರುವುದು ಸರಿಯಲ್ಲ. ನಮ್ಮದು ಜಾತ್ಯತೀತ, ಧರ್ಮನಿರಪೇಕ್ಷ ರಾಷ್ಟ್ರವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಎ ಕಾಯ್ದೆಯಲ್ಲಿ ಮುಸ್ಲಿಮರನ್ನು ಒಳಗೊಳಿಸಿಕೊಳ್ಳಬೇಕೆಂದು ಅವರು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಗಳನ್ನು ನಿರಂತರವಾಗಿ ಹಬ್ಬಿಸುವಂತಹ ಷಡ್ಯಂತ್ರಗಳು ನಡೆಯುತ್ತಿವೆ. ನೆಹರೂ, ಗಾಂಧಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಅವಹೇಳನ ಮಾಡಲಾಗುತ್ತಿದ್ದು, ಇದನ್ನು ತಡೆಯುವಂತಹ ಕಾರ್ಯಗಳಾಗಬೇಕಾಗಿದೆ ಎಂದು ಅವರು ಒತ್ತಾಯಿಸಿದರು.

ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದಿದ್ದರೂ ದೇಶದಿಂದ ಶೋಷಣೆ ತೊಲಗಿಲ್ಲ. ಜೀತಪದ್ದತಿಯಿಂದ ಮೊದಲಗೊಂಡು ಎಲ್ಲ ರೀತಿಯ ಶೋಷಣೆಗಳು ಯಥಾಪ್ರಕಾರವಾಗಿ ನಡೆಯುತ್ತಿವೆ. ಈ ಬಗ್ಗೆ ನಾಗರಿಕ ಸಮಾಜ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇವತ್ತು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಎಲ್ಲವೂ ಹದಗೆಟ್ಟಿದ್ದು, ಅದು ಸರಿಹೋಗದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಈ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಂಡು ಮುನ್ನಡೆಯಬೇಕಾಗಿದೆ. ಆಗ ಮಾತ್ರ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯಗಳು ಪರಿಪೂರ್ಣವಾಗಲು ಸಾಧ್ಯವೆಂದು ಅವರು ಹೇಳಿದರು.

ಸುಳ್ಯ ಕ್ಷೇತ್ರದ ಶಾಸಕ ಎಸ್.ಅಂಗಾರ ಅವರನ್ನು ವಿಧಾನಪರಿಷತ್‌ನಲ್ಲಿ ಇಂದು ಪಕ್ಷಭೇದ ಮರೆತು ಹೊಗಳಿದ ಪ್ರಸಂಗ ನಡೆಯಿತು. ಬಿಜೆಪಿ ಸದಸ್ಯ ರವಿಕುಮಾರ್ ಸಂವಿಧಾನ ಕುರಿತ ಚರ್ಚೆಯ ವೇಳೆ ಮಾತನಾಡುತ್ತಾ, 'ಇವತ್ತು ಬಡವರು ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಲು ಸಾಧ್ಯವೇ ಇಲ್ಲದಂತ ಪರಿಸ್ಥಿತಿ ನಿರ್ಮಾಣ ಅಗಿದೆ. ಚುನಾವಣೆ ಕೋಟ್ಯಂತರ ರೂ. ಖರ್ಚು ಮಾಡಬೇಕಾದ ಸಂದರ್ಭ ಎದುರಾಗಿದೆ. ಚುನಾವಣೆ ಎನ್ನುವುದು ವ್ಯಾಪಾರ ಆಗಿದೆ. ಆದರೆ, ಇದರ ನಡುವೆಯು ಸುಳ್ಯ ಕ್ಷೇತ್ರದ ಶಾಸಕ ಎಸ್.ಅಂಗಾರ ಕೇವಲ 35 ಸಾವಿರ ರೂ.ನಲ್ಲಿ ಖರ್ಚು ಮಾಡಿ ತಮ್ಮ ಮೊದಲ ಚುನಾವಣೆಯಲ್ಲಿ ಜಯಗಳಿಸಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೆ ಐವನ್ ಡಿಸೋಜಾ ಸೇರಿದಂತೆ ಎಲ್ಲರೂ ಧ್ವನಿಗೂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News