ಬೆಂಗಳೂರಿನ ಆಸ್ಪತ್ರೆಯಲ್ಲಿ ಓಡಾಡಿದ್ದ ಕೊರೋನ ಸೋಂಕಿತೆ: ಕಂಗಾಲಾದ ಸಿಬ್ಬಂದಿ
ಬೆಂಗಳೂರು, ಮಾ.18: ಲಂಡನ್‌ನಿಂದ ಬಂದ ಯುವತಿಗೆ ಕೊರೋನ ಸೋಂಕು ತಗುಲಿರುವುದು ದೃಢವಾಗಿದೆ. ಸೋಂಕಿತ ಯುವತಿಯು ವಿಕ್ಟೋರಿಯಾ ಆಸ್ಪತ್ರೆಯ ನೆಫ್ರೋ ಯುರಾಲಜಿ ವಿಭಾಗದ ನಿರ್ದೇಶಕರ ಸಂಬಂಧಿಯಾಗಿದ್ದು, ಅವರೊಂದಿಗೆ ಆಸ್ಪತ್ರೆಗೆ ಸಹ ಭೇಟಿ ನೀಡಿದ್ದರು. ಹೀಗಾಗಿ, ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆತಂಕ ಮನೆ ಮಾಡಿದೆ.
ಕಳೆದ ಭಾನುವಾರ ಆಸ್ಪತ್ರೆಗೆ ಬಂದಿದ್ದ ಈ ಯುವತಿ ಆಸ್ಪತ್ರೆಯ ಆವರಣದಲ್ಲಿ ಸುತ್ತಾಡಿದ್ದರು. ಇದು ಆಸ್ಪತ್ರೆಯ ಸಿಬ್ಬಂದಿಗೆ ಆತಂಕ ತಂದೊಡ್ಡಿದೆ. ವಿದೇಶದಿಂದ ಬಂದ ನಂತರ ಈ ಯುವತಿ ತಪಾಸಣೆಗೆ ಒಳಗಾಗಿ ಮನೆಯಲ್ಲಿ ಇರಬೇಕಿತ್ತು. ಆದರೆ ಅವರು ವೈದ್ಯರ ಜೊತೆ ಆಸ್ಪತ್ರೆಯ ಆವರಣದಲ್ಲಿ ಓಡಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಅಲ್ಲದೇ, ನೆಫ್ರೋಯುರಾಲಜಿ ವೈದ್ಯ ಕೂಡ ಆಸ್ಪತ್ರೆಯ ಕೆಲ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದರು. ಜತೆಗೆ ನೂರಾರು ಜನರನ್ನು ಭೇಟಿಯಾಗಿದ್ದರು. ಯುವತಿಗೆ ಸೋಂಕು ಇರುವ ಮಾಹಿತಿ ಹೊರ ಬರುತ್ತಿದ್ದಂತೆ ಆ ವೈದ್ಯರು ಸಹ ನಾಪತ್ತೆಯಾಗಿರುವುದು ಸಿಬ್ಬಂದಿಗಳನ್ನು ಚಿಂತೆಗೀಡು ಮಾಡಿದೆ.