ಎಲ್ಲ ಬಳಕೆದಾರರ ಕರೆ ವಿವರಗಳನ್ನು ಪಡೆಯುತ್ತಿರುವ ಕೇಂದ್ರ ಸರಕಾರ

Update: 2020-03-18 17:41 GMT

ಹೊಸದಿಲ್ಲಿ,ಮಾ.18: ಕೇಂದ್ರ ಸರಕಾರವು ಕಳೆದ ಕೆಲವು ತಿಂಗಳುಗಳಿಂದ ದೇಶದ ವಿವಿಧ ಭಾಗಗಳಲ್ಲಿಯ ಎಲ್ಲ ಮೊಬೈಲ್ ಚಂದಾದಾರರ ನಿರ್ದಿಷ್ಟ ದಿನಗಳ ಕರೆಗಳ ವಿವರ (ಸಿಡಿಆರ್)ಗಳನ್ನು ಪಡೆದುಕೊಳ್ಳುತ್ತಿದ್ದು,ಇದು ಕಣ್ಗಾವಲು ಮತ್ತು ಸರ್ವೋಚ್ಚ ನ್ಯಾಯಾಲಯವು ನಿಗದಿಗೊಳಿಸಿರುವ ಖಾಸಗಿತನ ಮಾರ್ಗಸೂಚಿಗಳ ಉಲ್ಲಂಘನೆಯ ಕಳವಳಗಳನ್ನು ಸೃಷ್ಟಿಸಿದೆ ಎಂದು indianexpress.com ವರದಿ ಮಾಡಿದೆ.

ದಿಲ್ಲಿ,ಆಂಧ್ರಪ್ರದೇಶ,ಹರ್ಯಾಣ,ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಕೇರಳ, ಒಡಿಶಾ,ಮಧ್ಯಪ್ರದೇಶ ಮತ್ತು ಪಂಜಾಬ ಸರ್ಕಲ್‌ಗಳಲ್ಲಿ ದೂರಸಂಪರ್ಕ ಇಲಾಖೆ (ಡಾಟ್)ಯ ಸ್ಥಳೀಯ ಘಟಕಗಳ ಮೂಲಕ ವಾಡಿಕೆಗೆ ದೂರವಾದ ಇಂತಹ ಮನವಿಗಳನ್ನು ಟೆಲಿಕಾಂ ಕಂಪನಿಗಳಿಗೆ ಸಲ್ಲಿಸಲಾಗುತ್ತಿದೆ.

ಹಲವಾರು ತಿಂಗಳುಗಳಿಂದಲೂ ಇದು ನಡೆದುಕೊಂಡು ಬರುತ್ತಿದೆ,ಆದರೆ ಜನವರಿ ಮತ್ತು ಫೆಬ್ರವರಿಯಲ್ಲಿ ಬೃಹತ್ ಪ್ರಮಾಣದಲ್ಲಿ ಇಂತಹ ಕೋರಿಕೆಗಳು ಬರುತ್ತಿರುವುದನ್ನು ನಾವು ಗಮನಿಸಿದ್ದೇವೆ ಎಂದು ಟೆಲಿಕಾಂ ಸಂಸ್ಥೆಯೊಂದರ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಎಲ್ಲ ಪ್ರಮುಖ ದೂರಸಂಪರ್ಕ ಸಂಸ್ಥೆಗಳನ್ನು ಪ್ರತಿನಿಧಿಸುವ ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಒಎಐ) ಫೆ.12ರಂದು ಡಾಟ್ ಕಾರ್ಯದರ್ಶಿ ಅಂಶು ಪ್ರಕಾಶ ಅವರಿಗೆ ಸಲ್ಲಿಸಿದ ದೂರಿನಲ್ಲಿ ಇಂತಹ ಕೋರಿಕೆಗಳ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿತ್ತು.

ನಿರ್ದಿಷ್ಟ ಮಾರ್ಗಗಳು/ಪ್ರದೇಶಗಳಿಗೆ ಸಿಡಿಆರ್‌ಗಳನ್ನು ಕೋರುವುದು,ವಿಶೇಷವಾಗಿ ಹಲವಾರು ವಿವಿಐಪಿ ಪ್ರದೇಶಗಳಿರುವ ದಿಲ್ಲಿಯಂತಹ ರಾಜ್ಯಗಳಲ್ಲಿ ಕಣ್ಗಾವಲಿನ ಆರೋಪಕ್ಕೆ ಕಾರಣವಾಗಬಹುದು ಎಂದು ಅದು ತನ್ನ ದೂರಿನಲ್ಲಿ ಆತಂಕ ವ್ಯಕ್ತಪಡಿಸಿತ್ತು.

ಸುಮಾರು 53 ಮಿಲಿಯನ್ ಮೊಬೈಲ್ ಚಂದಾದಾರರಿರುವ ದಿಲ್ಲಿಯಲ್ಲಿ ಈ ವರ್ಷದ ಫೆ.2,3 ಮತ್ತು 4ರ ಸಿಡಿಆರ್‌ಗಳನ್ನು ಒದಗಿಸುವಂತೆ ಮೊಬೈಲ್ ಕಂಪನಿಗಳಿಗೆ ಸೂಚಿಲಾಗಿತ್ತು. ಈ ವೇಳೆ ಸಿಎಎ ವಿರುದ್ಧ ಪ್ರತಿಭಟನೆಗಳು ಚಾಲ್ತಿಯಲ್ಲಿದ್ದವು. ದಿಲ್ಲಿ ಚುನಾವಣಾ ಪ್ರಚಾರ ಫೆ.6ಕ್ಕೆ ಅಂತ್ಯಗೊಂಡಿತ್ತು ಮತ್ತು ಫೆ.8ರಂದು ಮತದಾನ ನಡೆದಿತ್ತು.

ತಮ್ಮ ಕೋರಿಕೆಗಳಲ್ಲಿ ಡಾಟ್ ಘಟಕಗಳು ಈ ಸಿಡಿಆರ್‌ಗಳನ್ನು ಪಡೆದುಕೊಳ್ಳುವ ಉದ್ದೇಶವನ್ನಾಗಲೀ ಚಂದಾದಾರರ ಗುರುತನ್ನಾಗಲೀ ಉಲ್ಲೇಖಿಸುತ್ತಿಲ್ಲ ಮತ್ತು ಇದು ಖಾಸಗಿತನ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಸಿಒಎಐ ತಿಳಿಸಿದೆ.

ಮೊಬೈಲ್ ಕಂಪನಿಗಳು ಡಾಟ್‌ನೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಅವು ಭದ್ರತಾ ಕಾರಣಗಳಿಗಾಗಿ ಕರೆ ವಿವರಗಳನ್ನು ಕನಿಷ್ಠ ಒಂದು ವರ್ಷದವರೆಗೆ ಕಾದಿರಿಸಬೇಕಾಗುತ್ತದೆ ಮತ್ತು ವಿವಿಧ ಕಾನೂನು ಜಾರಿ ಸಂಸ್ಥೆಗಳು ಮತ್ತು ನ್ಯಾಯಾಲಯಗಳು ನಿಗದಿತ ಶಿಷ್ಟಾಚಾರಗಳಿಗೆ ಅನುಗುಣವಾಗಿ ನಿರ್ದಿಷ್ಟ ಕೋರಿಕೆಗಳನ್ನು ಸಲ್ಲಿಸಿದರೆ ಅಥವಾ ನಿರ್ದೇಶ ನೀಡಿದರೆ ಸಿಡಿಆರ್‌ಗಳನ್ನು ಒದಗಿಸಲು ಅವು ಬದ್ಧವಾಗಿರುತ್ತವೆ.

2013ರಲ್ಲಿ ಸಿಡಿಆರ್‌ಗಳ ಕುರಿತು ವಿವಾದವುಂಟಾದ ಬಳಿಕ ಆಗಿನ ಯುಪಿಎ ಸರಕಾರವು ಕರೆ ವಿವರಗಳನ್ನು ಪಡೆಯಲು ಮಾರ್ಗಸೂಚಿಗಳನ್ನು ಬಿಗುಗೊಳಿಸಿದ್ದು, ಎಸ್‌ಪಿ ಅಥವಾ ಮೇಲಿನ ದರ್ಜೆಯ ಅಧಿಕಾರಿಗಳು ಮಾತ್ರ ಈ ವಿವರಗಳಿಗಾಗಿ ಕೋರಿಕೆಯನ್ನು ಸಲ್ಲಿಸಬಹುದಾಗಿದೆ.

ಆದರೆ ಡಾಟ್‌ನ ಹಾಲಿ ಕೋರಿಕೆಗಳು ಈ ಮಾರ್ಗಸೂಚಿಗಳಿಗೆ ಅನುಗುಣವಾಗಿಲ್ಲ ಎಂದು ಟ್ರಾಯ್‌ನ ಮಾಜಿ ಅಧ್ಯಕ್ಷರೋರ್ವರು ಹೇಳಿದ್ದಾರೆ ಎಂದು indianexpress.com ವರದಿ ತಿಳಿಸಿದೆ.

ಕಣ್ಗಾವಲು ಆರೋಪ ನಿರಾಕರಿಸಿದ ಸರಕಾರ

ಪ್ರಜೆಗಳ ಕರೆ ವಿವರಗಳನ್ನು ತಾನು ಪಡೆದುಕೊಳ್ಳುತ್ತಿದ್ದೇನೆ ಎನ್ನುವುದನ್ನು ಕೇಂದ್ರ ಸರಕಾರವು ಬುಧವಾರ ನಿರಾಕರಿಸಿದೆ.

ವಿವಿಧ ಕಡೆಗಳಿಂದ ಕಾಲ್ ಡ್ರಾಪ್‌ಗಳ ದೂರುಗಳಿದ್ದವು,ಹೀಗಾಗಿ ಕರೆಗಳನ್ನು ಸಂಪರ್ಕಿಸಲು ಎಷ್ಟು ಪ್ರಯತ್ನಗಳು ನಡೆದಿದ್ದವು ಎನ್ನುವುದರ ಮತ್ತು ಕಾಲ್ ಡ್ರಾಪ್‌ಗಳ ಸಂಖ್ಯೆಯ ತನಿಖೆಗಾಗಿ ಯಾದ್ರಚ್ಛಿಕವಾಗಿ ಮತ್ತು ಸಗಟು ಪ್ರಮಾಣದಲ್ಲಿ ಕರೆ ವಿವರಗಳ ದಾಖಲೆಗಳನ್ನು ಒದಗಿಸುವಂತೆ ಸರಕಾರವು ಟೆಲಿಕಾಂ ಕಂಪನಿಗಳಿಗೆ ಸೂಚಿಸಿತ್ತು. ದೂರಸಂಪರ್ಕ ಸೇವೆಗಳನ್ನು ಉತ್ತಮಗೊಳಿಸುವದು ಸರಕಾರದ ಉದ್ದೇಶವಾಗಿದೆಯೇ ಹೊರತು ಪ್ರಜೆಗಳ ಮೇಲೆ ಬೇಹುಗಾರಿಕೆ ನಡೆಸುವುದಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿದವು. ಕಾಲ್‌ಡ್ರಾಪ್‌ಗಳಿಗಾಗಿ ಮೊಬೈಲ್ ಕಂಪನಿಗಳು ದಂಡಗಳನ್ನು ಪಾವತಿಸಲು ಬದ್ಧವಾಗಿವೆ ಎಂದು ಅವು ಬೆಟ್ಟು ಮಾಡಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News