×
Ad

ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪ್ರಯೋಗಾಲಯ ಸ್ಥಾಪನೆ: ಆರೋಗ್ಯ ಸಚಿವ ಶ್ರೀರಾಮುಲು

Update: 2020-03-18 22:30 IST

ಬೆಂಗಳೂರು, ಮಾ. 18: ಕೊರೋನ ವೈರಸ್ ಸೋಂಕು ಪರೀಕ್ಷೆಗೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಪ್ರಯೋಗಾಲಯ ಸ್ಥಾಪಿಸಲು ಪ್ರಯತ್ನ ನಡೆಸಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ-2, ಮೈಸೂರು, ಹಾಸನ, ಶಿವಮೊಗ್ಗ ಜಿಲ್ಲೆಯಲ್ಲಿ ಒಂದೊಂದು ಪ್ರಯೋಗಾಲಯ ಕಾರ್ಯ ನಿರ್ವಹಿಸುತ್ತಿವೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಸದಸ್ಯರಾದ ಅಜಯ್ ಸಿಂಗ್, ಪ್ರಿಯಾಂಕ್ ಖರ್ಗೆ, ಕರುಣಾಕರ ರೆಡ್ಡಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ಕಲಬುರಗಿ ಮತ್ತು ಮಂಗಳೂರಿನಲ್ಲಿಯೂ ಪ್ರಯೋಗಾಲಯ ಸ್ಥಾಪಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಅಲ್ಲದೆ, ಬಳ್ಳಾರಿ, ಹುಬ್ಬಳ್ಳಿ, ಬೀದರ್ ಜಿಲ್ಲೆಗಳಲ್ಲೂ ತುರ್ತು ಪ್ರಯೋಗಾಲಯ ಸ್ಥಾಪಿಸಬೇಕೆಂಬ ಬೇಡಿಕೆ ಇದೆ. ಈಗಾಗಲೇ ಕಲಬುರಗಿ ಪ್ರಯೋಗಾಲಯಕ್ಕೆ ದಿಲ್ಲಿಯ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯಿಂದ ಯಂತ್ರೋಪಕರಣ ಬಂದಿದ್ದು, ಅದನ್ನು ಕಲಬುರಗಿಗೆ ರವಾನಿಸಿದ್ದು ಪ್ರಯೋಗಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರು ಕೊರೋನ ವೈರಸ್ ಸೋಂಕಿಗೆ ಆತಂಕಪಡುವ ಅಗತ್ಯವಿಲ್ಲ. ಆ ಹಿನ್ನೆಲೆಯಲ್ಲಿ ಜನರಿಗೆ ಧೈರ್ಯ ತುಂಬುವ ದೃಷ್ಟಿಯಿಂದ ನಾನೇ ಖುದ್ದು ಕಲಬುರಗಿ ಹಾಗೂ ಮಂಗಳೂರಿನ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಸ್ಥಾಪಿಸಿರುವ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ ಎಂದು ಹೇಳಿದರು.

ರಾಜ್ಯದಲ್ಲಿ ಮಾಸ್ಕ್‌ಗಳಿಗೆ ತೊಂದರೆ ಇಲ್ಲ. ಥರ್ಮಲ್ ಸ್ಕ್ರೀನಿಂಗ್‌ಗಳ ದಾಸ್ತಾನು ಮಾಡಲಾಗಿದೆ. ವಿದೇಶದಿಂದ ರಾಜ್ಯಕ್ಕೆ ಕರೆತರಲು ಪ್ರಯತ್ನ ನಡೆಸಲಾಗಿದೆ ಎಂದ ಅವರು, ಸೋಂಕಿತರನ್ನು ಮತ್ತು ಸಂಶಯವಿರುವವರನ್ನು ಪ್ರತ್ಯೇಕ ನಿಗಾ ವ್ಯವಸ್ಥೆಯಲ್ಲಿ ಇರಿಸಲಾಗಿದೆ. ಆರೋಗ್ಯ ಇಲಾಖೆ ಮತ್ತು ಸರಕಾರ ಯುದ್ದೋಪಾದಿಯಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕೆ ಸನ್ನದ್ಧವಾಗಿದೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News