×
Ad

ಡಿಕೆಶಿ, ದಿಗ್ವಿಜಯ್ ಸಿಂಗ್ ಬಂಧನ ವಿಚಾರ: ವಿಧಾನಸಭೆಯಲ್ಲಿ ಗದ್ದಲ, ಕಾಂಗ್ರೆಸ್ ಧರಣಿ

Update: 2020-03-18 22:35 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ. 18: ಮಧ್ಯಪ್ರವೇಶ ಶಾಸಕರನ್ನು ಅಕ್ರಮ ಬಂಧನದಲ್ಲಿ ಇರಿಸಲಾಗಿದೆ ಎಂದು ಆರೋಪಿಸಿ ಅವರ ಭೇಟಿಗೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಸೇರಿ ಹಲವರ ಬಂಧನ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು.

ಬುಧವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸಿನ ಸದಸ್ಯ ಎಚ್.ಕೆ.ಪಾಟೀಲ್, ಈ ಸದನದ ಸದಸ್ಯರಾದ ಡಿ.ಕೆ.ಶಿವಕುಮಾರ್, ಡಾ.ರಂಗನಾಥ್, ರಿಝ್ವಾನ್ ಅರ್ಶದ್ ಸೇರಿ ಹಲವು ಮಂದಿಯನ್ನು ಬಂಧಿಸಲಾಗಿದೆ ಎಂದು ಪ್ರಸ್ತಾಪಿಸಿದರು.

ಇದಕ್ಕೆ ಸಚಿವರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಮಾಧುಸ್ವಾಮಿ, ಸಿ.ಟಿ.ರವಿ ಸೇರಿ ಹಲವು ಸದಸ್ಯರು ಆಕ್ಷೇಪಿಸಿದರಲ್ಲದೆ, ‘ರಾಜ್ಯದ ಜನತೆ ಕೊರೋನ ವೈರಸ್ ಸಮಸ್ಯೆಯಿಂದ ಬಳಲುತ್ತಿದ್ದರೆ, ಇವರು ರಾಜಕಾರಣ ಮಾಡುತ್ತಿದ್ದಾರೆ. ಕಲಾಪ ನಡೆಯುವುದು ಬೇಕಿಲ್ಲ. ಯಾವುದೇ ನೋಟಿಸ್ ಇಲ್ಲದೆ ವಿಷಯ ಪ್ರಸ್ತಾಪ ಸಲ್ಲ’ ಎಂದು ಆಕ್ಷೇಪಿಸಿದರು.

ಈ ವೇಳೆ ಎದ್ದುನಿಂತ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ನಗರದಲ್ಲಿ ಅಕ್ರಮ ಬಂಧನದಲ್ಲಿರುವ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರ ಭೇಟಿಗೆ ಹೋಗಿರುವ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಪೊಲೀಸರು ತಡೆದಿದ್ದಾರೆ, ನಮ್ಮ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇದೇನು ಪೊಲೀಸ್ ರಾಜ್ಯವೇ?’ ಪ್ರಶ್ನಿಸಿದರು.

‘ರಾಜ್ಯದ ಬಿಜೆಪಿ ಸರಕಾರದ ಉಸ್ತುವಾರಿಯಲ್ಲಿಯೇ ಬೆಂಗಳೂರಿನಲ್ಲಿ ಮಧ್ಯಪ್ರದೇಶದ 22 ಕಾಂಗ್ರೆಸ್ ಶಾಸಕರನ್ನು ಅಕ್ರಮ ಬಂಧನದಲ್ಲಿರಿಸಲಾಗಿದೆ. ನಗರದ ಪೊಲೀಸರು ರಾಜ್ಯ ಸರಕಾರದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಹಾಡಹಗಲೇ ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ’ ಎಂದು ಏರಿದ ಧ್ವನಿಯಲ್ಲಿ ವಾಗ್ದಾಳಿ ನಡೆಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ನೀವು ಯಾವುದೇ ನೋಟಿಸ್ ನೀಡಿಲ್ಲ. ಹೀಗಾಗಿ ವಿಷಯ ಪ್ರಸ್ತಾಪಕ್ಕೆ ಅವಕಾಶವಿಲ್ಲ ಎಂದು ನಿರಾಕರಿಸಿದರು. ಇದರಿಂದ ಆಡಳಿತ ಮತ್ತು ವಿಪಕ್ಷಗಳ ಮಧ್ಯ ವಾಗ್ವಾದ-ಗದ್ದಲ ಸೃಷ್ಟಿಯಾಯಿತು. ಆಗ ಕಾಂಗ್ರೆಸ್ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಸತ್ಯಾಗ್ರಹ ಆರಂಭಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಈ ಸದನದ ಸದಸ್ಯರನ್ನು ಬಂಧಿಸಿದ್ದಾರೆ. ಈ ಬಗ್ಗೆ ನಿಮಗೆ(ಸ್ಪೀಕರ್) ಮಾಹಿತಿ ಇದೆಯೇ’ ಎಂದು ಪ್ರಶ್ನಿಸಿದರು. ಈ ಬಗ್ಗೆ ‘ನಾನು ಮಾಹಿತಿ ಪಡೆಯುತ್ತೇನೆ. ನಿಮ್ಮ ಧರಣಿ ಸತ್ಯಾಗ್ರಹ ಸಲ್ಲ’ ಎಂದು ಸ್ಪೀಕರ್, ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಭೋಜನ ವಿರಾಮಕ್ಕೆ ಕಲಾಪವನ್ನು ಮುಂದೂಡಿದರು.

ನಮ್ಮ ಸಹನೆ ಪರೀಕ್ಷೆ ಬೇಡ

‘ಅಕ್ರಮ ಬಂಧನದಲ್ಲಿರುವ ಕಾಂಗ್ರೆಸ್ ಶಾಸಕರು ದಿಗ್ವಿಜಯ್ ಸಿಂಗ್ ಅವರನ್ನು ಭೇಟಿಯಾಗಬಯಸಿದ್ದಾರೆ. ಆದರೆ ಪೊಲೀಸರು ಶಾಸಕರ ಫೋನ್ ಕಿತ್ತುಕೊಂಡಿದ್ದಾರೆ. ಶಾಸಕರ ಭೇಟಿಗೆ ಅವರ ತಂದೆ-ತಾಯಿಗಳಿಗೂ ಅವಕಾಶ ನೀಡುತ್ತಿಲ್ಲ. ಇದೇನು ಪ್ರಜಾಪ್ರಭುತ್ವವೇ? ಸರ್ವಾಧಿಕಾರವೇ? ನಮ್ಮ ಸಹನೆಯ ಪರೀಕ್ಷೆ ಬೇಡ’

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News