ಆಲ್ ಇಂಗ್ಲೆಂಡ್ ಓಪನ್‌ ನಲ್ಲಿ ಸ್ಪರ್ಧಿಗಳ ಸುರಕ್ಷತೆಯ ಬಗ್ಗೆ ರಾಜಿ ಮಾಡಿಕೊಳ್ಳಲಾಗಿತ್ತು

Update: 2020-03-18 18:44 GMT

ಹೊಸದಿಲ್ಲಿ, ಮಾ.18: ಕೋವಿಡ್-19 ಸಾಂಕ್ರಾಮಿಕ ರೋಗದ ಭೀತಿಯ ಹೊರತಾಗಿಯೂ ಕ್ರೀಡಾ ಆಡಳಿತಗಾರರು ಕಳೆದ ವಾರ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಮುಂದುವರಿಸುವ ಮೂಲಕ ಆಟಗಾರರ ಸುರಕ್ಷತೆಗಿಂತ ಹಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು ಎಂದು ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಆರೋಪಿಸಿದರು.

‘‘ನನ್ನ ಪ್ರಕಾರ ಆಟಗಾರರ ಕಲ್ಯಾಣ ಅಥವಾ ಭಾವನೆಗಳಿಗಿಂತ ಆರ್ಥಿಕ ಕಾರಣಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಕಳೆದ ವಾರ ಆಲ್ ಇಂಗ್ಲೆಂಡ್ ಓಪನ್ ಟೂರ್ನಿ ನಡೆಯಲು ಇದಕ್ಕಿಂತ ಬೇರೆ ಕಾರಣ ಇರಲಿಕ್ಕಿಲ್ಲ’’ ಎಂದು ಸೈನಾ ಟ್ವೀಟ್ ಮಾಡಿದ್ದಾರೆ.

 30ರ ಹರೆಯದ ಹೈದರಾಬಾದ್ ಆಟಗಾರ್ತಿ ಸೈನಾ ಅಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದರು. ಆದರೆ, ಅವರು ಮೊದಲ ಸುತ್ತಿನಲ್ಲೇ ಎಡವಿದ್ದರು. ಕೊರೋನ ವೈರಸ್ ಭೀತಿಗೆ ವಿಶ್ವದೆಲ್ಲೆಡೆಯ ಕ್ರೀಡಾ ಸ್ಪರ್ಧೆಗಳು ಒಂದೋ ರದ್ದುಗೊಂಡಿದ್ದವು ಅಥವಾ ಮುಂದೂಡಲ್ಪಟ್ಟಿದ್ದರೂ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ನಿಗದಿಯಂತೆ ನಡೆದಿತ್ತು.

ಕೊರೋನ ವೈರಸ್ ಭೀತಿಯ ಹೊರತಾಗಿಯೂ ಒಲಿಂಪಿಕ್ಸ್ ಅರ್ಹತೆಗೆ ರ್ಯಾಂಕಿಂಗ್ ಪಾಯಿಂಟ್ಸ್ ಗಳಿಸಲು ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ನಿರ್ಣಾಯಕವಾಗಿದ್ದ ಹಿನ್ನೆಲೆಯಲ್ಲಿ ಟೂರ್ನಿಯಲ್ಲಿ ಹಲವು ಪ್ರಮುಖ ಆಟಗಾರರು ಭಾಗವಹಿಸಿದ್ದರು.

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲೇ ಮುಗ್ಗರಿಸಿರುವ ಸೈನಾ ಅವರ ಒಲಿಂಪಿಕ್ಸ್ ಅರ್ಹತೆಯು ಡೋಲಾಯಮಾನವಾಗಿದೆ. ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಕೊನೆಗೊಂಡ ದಿನವೇ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್(ಬಿಡಬ್ಲುಎಫ್)ಎಲ್ಲ ಟೂರ್ನಿಗಳನ್ನು ರದ್ದು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News