×
Ad

ಕೋಲಾಹಲದ ನಡುವೆ ವಿಧಾನಸಭೆಯಲ್ಲಿ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕಕ್ಕೆ ಅಸ್ತು

Update: 2020-03-19 22:20 IST

ಬೆಂಗಳೂರು, ಮಾ.19: ರಾಜ್ಯ ಸರಕಾರ ಜಾರಿಗೆ ತರಲು ಮುಂದಾಗಿರುವ ಕರ್ನಾಟಕ ಭೂ ಸುಧಾರಣೆಗಳ(ತಿದ್ದುಪಡಿ) ವಿಧೇಯಕ-2020 ರೈತ ವಿರೋಧಿಯಾಗಿದೆ ಎಂದು ಆರೋಪಿಸಿ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದ ನಡುವೆಯೂ ವಿಧಾನಸಭೆಯಲ್ಲಿ ವಿಧೇಯಕಕ್ಕೆ ಅನುಮೋದನೆ ಸಿಕ್ಕಿತು.

ಗುರುವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಕಂದಾಯ ಸಚಿವ ಆರ್.ಅಶೋಕ್ ಮಂಡಿಸಿದ ಈ ವಿಧೇಯಕದ ಮೇಲೆ ಮಾತನಾಡಿದ, ಹಿರಿಯ ಕಾಂಗ್ರೆಸ್ ಸದಸ್ಯ ಆರ್.ವಿ.ದೇಶಪಾಂಡೆ, ಈಗಿರುವ ಕಾಯ್ದೆಯಲ್ಲಿ ಕೆಐಡಿಬಿಯಲ್ಲಿ ಭೂಮಿ ಹಂಚಿಕೆ ಮಾಡುವ ವೇಳೆ ಕೈಗಾರಿಕೆಗಳು ಶೇ.55ರಷ್ಟು ಭೂಮಿ ಬಳಸಿದರೆ ಅದನ್ನು ಮಾರಾಟ ಮಾಡುವ ಅವಕಾಶ ಇದೆ ಎಂದರು.

2015ರ ತಿದ್ದುಪಡಿಯಲ್ಲೆ ಮಾರಾಟ ಮಾಡುವ ಅವಕಾಶಗಳಿವೆ. ಹೀಗಿದ್ದಾಗ ಇದೀಗ ಮತ್ತೆ ತಿದ್ದುಪಡಿಯ ಅಗತ್ಯವಿಲ್ಲ. ಈ ತಿದ್ದುಪಡಿ ಕಾಯ್ದೆ ದುರುಪಯೋಗ ಆಗುವ ಸಾಧ್ಯತೆ ಇದೆ. ಕೈಗಾರಿಕೋದ್ಯಮಿಗಳು ಬಳಸಿದ ಭೂಮಿಯನ್ನು ಮಾತ್ರ ಮಾರಾಟ ಮಾಡುವ ಅವಕಾಶ ನೀಡಬೇಕು. ಅದರ ಬದಲು ಇಡೀ ಜಮೀನನ್ನೆ ಮಾರಾಟ ಮಾಡಲು ಅವಕಾಶ ನೀಡಬಾರದು ಎಂದು ದೇಶಪಾಂಡೆ ಆಕ್ಷೇಪ ವ್ಯಕ್ತಪಡಿಸಿದರು.

ಸೆಕ್ಷನ್ 109 ಅಡಿಯಲ್ಲಿ ವಿನಾಯಿತಿ ಪಡೆದ ಭೂಮಿಯನ್ನು ಯಾವ ಉದ್ದೇಶಕ್ಕಾಗಿ ಬಳಸಲು ಅನುಮತಿ ನೀಡಲಾಗಿದೆಯೋ ಆ ಉದ್ದೇಶಕ್ಕಾಗಿ ಏಳು ವರ್ಷಗಳ ಅವಧಿಗಾಗಿ ಬಳಸಿದ ನಂತರ, ಆರ್ಥಿಕ ಮುಗ್ಗಟ್ಟು ನಿಭಾಯಿಸುವುದಕ್ಕಾಗಿ ಕೈಗಾರಿಗಳು ಇತರ ಕಂಪೆನಿ ಅಥವಾ ಸಂಸ್ಥೆಗೆ ಮಾರಾಟ ಮಾಡಲು ಅನುಮತಿ ನೀಡಲು ಈ ವಿಧೇಯಕ ತರಲಾಗಿದೆ ಎಂದು ಅಶೋಕ್ ಸ್ಪಷ್ಟನೆ ನೀಡಿದರು.

ಬಳಿಕ ಮಾತನಾಡಿದ ಹಿರಿಯ ಕಾಂಗ್ರೆಸ್ ಸದಸ್ಯ ಕೆ.ಆರ್.ರಮೇಶ್ ಕುಮಾರ್, ಇದು ರಿಯಲ್ ಎಸ್ಟೇಟ್‌ಗೆ ಪರೋಕ್ಷವಾಗಿ ಲಾಭ ಮಾಡಲು ಮಾಡುತ್ತಿರುವ ತಿದ್ದುಪಡಿ. ಹಳ್ಳಿ ಕುಟುಂಬದಿಂದ ಬಂದವರು ಈ ವಿಧೇಯಕ ತಂದರೆ ಇದು ದೊಡ್ಡ ಅಪರಾಧ ಆಗುತ್ತದೆ. ಇದರಿಂದ ರಿಯಲ್ ಎಸ್ಟೇಟ್‌ಗೆ ಪ್ರೋತ್ಸಾಹ ಸಿಗದಲಿದೆಯೆ ಹೊರತು, ಕೈಗಾರಿಕೆಗಳಿಗೆ ಯಾವುದೇ ಲಾಭ ಆಗುವುದಿಲ್ಲ ಎಂದರು. ಕೈಗಾರಿಕೆಗಳಿಗೆ ನೀಡುವ ಭೂ ಮಂಜೂರಾತಿ ವಿಳಂಬ ತಪ್ಪಿಸಲು, ಕಾಯ್ದೆಯಲ್ಲಿನ ನಿಯಮಗಳನ್ನು ಸರಳೀಕರಣ ಮಾಡಲು ಈ ವಿಧೇಯಕ ತರಲಾಗಿದೆ ಎಂದು ಅವರು ಹೇಳಿದರು.

ಕೃಷಿಕರಿಗೂ, ಕೃಷಿ ಭೂಮಿಗೂ ತೊಡಕುಂಟು ಮಾಡುವ ವಿಧೇಯಕ ಇದು. ಭೂ ಸುಧಾರಣೆಯ ಮೂಲಕ್ಕೆ ಕೊಡಲಿ ಹಾಕುವ ವಿಧೇಯಕ ಇದು. ಭೂ ಸುಧಾರಣೆ ಕಾಯ್ದೆಯ ಮೂಲ ಆಶಯಗಳಿಗೆ ವಿರುದ್ಧವಾಗಿ ತಿದ್ದುಪಡಿ ಮಾಡಿದರೆ ಮೃಗೀಯ ತೀರ್ಮಾನ ಮಾಡಿದಂತಾಗುತ್ತದೆ. ಕೈ ಮುಗಿದು ಕೇಳಿಕೊಳ್ಳುತ್ತೇನೆ ಈ ತಿದ್ದುಪಡಿ ವಿಧೇಯಕವನ್ನು ಹಿಂಪಡೆಯಿರಿ ಎಂದು ರಮೇಶ್ ಕುಮಾರ್ ಆಗ್ರಹಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ನಮ್ಮ ಸರಕಾರ ಭೂಸುಧಾರಣೆ ಕಾಯ್ದೆಯ ವಿರೋಧಿ ಅಲ್ಲ. ಆ ಕಾಯ್ದೆಯ ಮೂಲ ಉದ್ದೇಶಕ್ಕೆ ನಮ್ಮ ವಿರೋಧ ಇಲ್ಲ. ಕೈಗಾರಿಕಾ ಉದ್ದೇಶಕ್ಕೆ ಖರೀದಿಸಿದ ಭೂಮಿ ಮತ್ತೆ ಮಾರಾಟಕ್ಕೆ ಅವಕಾಶ ಇಲ್ಲದೆ, ಎಷ್ಟೋ ಪ್ರಮಾಣದ ಭೂಮಿ ವ್ಯರ್ಥವಾಗಿದೆ. ಆ ಭೂಮಿಯ ಮರು ಮಾರಾಟಕ್ಕೆ ಈ ವಿಧೇಯಕದಿಂದ ಅವಕಾಶ ಸಿಗಲಿದೆ ಎಂದರು.

ಮೊದಲು ಯಾವ ಉದ್ದೇಶಕ್ಕೆ ಭೂಮಿಯನ್ನು ಖರೀದಿಸಲಾಗಿತ್ತೋ, ಅದೇ ಉದ್ದೇಶಕ್ಕೆ ಮಾತ್ರ ಭೂಮಿ ಮಾರಾಟ ಮಾಡಲು ಅವಕಾಶ ಕೊಡಲಾಗುತ್ತಿದೆ. ಹೊಸದಾಗಿ ಸರಕಾರದಿಂದ ಭೂಮಿ ಹಂಚಿಕೆ ಮಾಡುತ್ತಿಲ್ಲ. ಅಲ್ಲದೆ, ಸರಕಾರದಿಂದ ನೀಡಿದ ಭೂಮಿಗೆ ಈ ವಿಧೇಯಕ ಅನ್ವಯ ಆಗುವುದಿಲ್ಲ ಎಂದು ಮಾಧುಸ್ವಾಮಿ ಹೇಳಿದರು.

ಕೈಗಾರಿಕೋದ್ಯಮಿಗಳು ತಾವೇ ಖರೀದಿಸಿದ ಭೂಮಿಯನ್ನು ಅದೇ ಉದ್ದೇಶದವರಿಗೆ ಮರು ಮಾರಾಟಕ್ಕೆ ಈ ವಿಧೇಯಕ ಅವಕಾಶ ಕೊಡಲಿದೆ. ಇದರಿಂದ ಕೈಗಾರಿಕಾ ಭೂಮಿ ದುರ್ಬಳಕೆ, ಅವ್ಯವಹಾರದ ಪ್ರಶ್ನೆ ಬರಲ್ಲ ಎಂದು ಅವರು ಹೇಳಿದರು.

ಚರ್ಚೆಯಲ್ಲಿ ಕಾಂಗ್ರೆಸ್ ಸದಸ್ಯರಾದ ದಿನೇಶ್ ಗುಂಡೂರಾವ್, ಎಚ್.ಕೆ.ಪಾಟೀಲ್, ಜೆಡಿಎಸ್ ಸದಸ್ಯ ಎಚ್.ಡಿ.ರೇವಣ್ಣ ಸೇರಿದಂತೆ ಇನ್ನಿತರರು ಮಾತನಾಡಿದರು. ಈ ವಿಧೇಯಕವನ್ನು ಸ್ಪೀಕರ್ ಮತಕ್ಕೆ ಹಾಕಲು ಮುಂದಾದಾಗ, ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಈ ವಿಧೇಯಕದ ಬಗ್ಗೆ ಇನ್ನೂ ತುಂಬಾ ಜನ ಚರ್ಚೆ ಮಾಡಬೇಕಿದೆ. ಇದನ್ನು ಮತಕ್ಕೆ ಹಾಕಬೇಡಿ ಎಂದರು.

ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ಮಾಡಿದರು. ಈ ಸಂದರ್ಭದಲ್ಲಿ ಸದನದಲ್ಲಿ ಕೋಲಾಹಲ ಉಂಟಾಯಿತು. ಗದ್ದಲದ ನಡುವೆ ಕಾಂಗ್ರೆಸ್ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು. ಇದೇ ವೇಳೆ ವಿಧೇಯಕ್ಕೆ ಧ್ವನಿಮತದ ಅಂಗೀಕಾರ ಸಿಕ್ಕಿತು.

ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟುಗಳ ಮೀಸಲಾತಿ ಕಲ್ಪಿಸುವ 2020ನೆ ಸಾಲಿನ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ತಿದ್ದುಪಡಿ ವಿಧೇಯಕ, 2020ನೆ ಸಾಲಿನ ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ ತಿದ್ದುಪಡಿ ವಿಧೇಯಕ, 2020ನೆ ಸಾಲಿನ ಕರ್ನಾಟಕ ರಾಜಭಾಷಾ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News