ಕಿರಾಣಿ ಅಂಗಡಿಯಿಂದ ವಿಧಾನಪರಿಷತ್‌ಗೆ ತಲುಪಿಸಿದ್ದು ಸಂವಿಧಾನ: ಕೋಟ ಶ್ರೀನಿವಾಸ ಪೂಜಾರಿ
ಬೆಂಗಳೂರು, ಮಾ.19: ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನಂತ ಸಾಮಾನ್ಯ ವ್ಯಕ್ತಿ ವಿಧಾನಪರಿಷತ್‌ನ ಸಭಾ ನಾಯಕನ ಸ್ಥಾನದಲ್ಲಿ ಕೂರಲು ಸಾಧ್ಯವಾಗಿದ್ದು ಡಾ.ಬಿ.ಆರ್.ಅಂಬೇಡ್ಕರ್ ರೂಪಿಸಿದ ಸಂವಿಧಾನದಿಂದ ಮಾತ್ರ ಎಂದು ಸಭಾನಾಯಕ ಶ್ರೀನಿವಾಸ ಪೂಜಾರಿ ಅಭಿಪ್ರಾಯಿಸಿದರು.
ಗುರುವಾರ ವಿಧಾನಪರಿಷತ್‌ನಲ್ಲಿ ಸಂವಿಧಾನ ಕುರಿತ ವಿಶೇಷ ಚರ್ಚೆಯ ವೇಳೆ ಮಾತನಾಡಿದ ಅವರು, ನಾನು ಕಾಲೇಜು ಮುಗಿಸಿಕೊಂಡು ಕಿರಾಣಿ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದೆ. ಅಲ್ಲಿ ತಿಂಗಳಿಗೆ 30ರೂ. ನೀಡುತ್ತಿದ್ದರು. ಅಲ್ಲಿಂದ ಇವತ್ತು ಸಭಾನಾಯಕ ಸ್ಥಾನ ಏರಲು ಸಂವಿಧಾನ ನನ್ನಂತವರಿಗೆ ಅನುವು ಮಾಡಿಕೊಟ್ಟಿದೆ ಎಂದು ತಿಳಿಸಿದರು.
ಸಂವಿಧಾನದ ಆಧಾರಸ್ತಂಭಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ತನ್ನ ಜವಾಬ್ದಾರಿ ಅರಿತುಕೊಂಡು ಕಾರ್ಯನಿರ್ವಹಿಸಿದರೆ ದೇಶದಲ್ಲಿ ಯಾವುದೇ ಸಮಸ್ಯೆ ತಲೆದೋರುವುದಿಲ್ಲ. ಅಂತಹ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕಾಗಿದೆ ಎಂದು ಅವರು ಹೇಳಿದರು.
ಇವತ್ತು ಸಾಮಾಜದಲ್ಲಿ ಹಣ ಇಲ್ಲದೆ ಏನು ಸಾಧ್ಯವಾಗದ ಮಟ್ಟಕ್ಕೆ ತಲುಪಿದೆ. ಎಲ್ಲ ಕಡೆಯೂ ಕುರುಡು ಕಾಂಚಾಣ ಕುಣಿಯುತ್ತಿದ್ದು, ಇದರಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಇದೆಲ್ಲವನ್ನು ಬದಲಾಯಿಸಿ, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ದೇಶಕ್ಕಾಗಿ ದುಡಿದ ಮಹನೀಯರ ಆಶಯಗಳನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣವೆಂದು ಅವರು ಆಶಿಸಿದರು.