‘ಅಗ್ರಿಗೋಲ್ಡ್’ ನಿರ್ದೇಶಕರು, ಮಾಲಕರ ಆಸ್ತಿ ಜಪ್ತಿ: ಗೃಹ ಸಚಿವ ಬಸವರಾಜ ಬೊಮ್ಮಾಯಿ
ಬೆಂಗಳೂರು, ಮಾ. 19: ‘ಅಗ್ರಿಗೋಲ್ಡ್’ ಹಗರಣದಲ್ಲಿ ಠೇವಣಿದಾರರಿಗೆ ಹಣ ವಾಪಸ್ ಕೊಡಿಸಲು ಸಂಸ್ಥೆಯ ಮಾಲಕರು ಮತ್ತು ನಿರ್ದೆಶಕರ ಆಸ್ತಿ ಜಪ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಗುರುವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಬಿಜೆಪಿ ವಿರೂಪಾಕ್ಷಪ್ಪ ರುದ್ರಪ್ಪ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, 2014-15ರಲ್ಲಿ ಅಗ್ರಿಗೋಲ್ಡ್ ಸಂಸ್ಥೆ 84,616 ಮಂದಿ ಠೇವಣಿದಾರರಿಂದ 1,500 ಕೋಟಿ ರೂ.ಗಳಿಗೂ ಹೆಚ್ಚಿನ ಠೇವಣಿ ಸಂಗ್ರಹಿಸಿದೆ. ಆದರೆ, ಸಂಗ್ರಹ ಮಾಡಿದ ಠೇವಣಿಗೆ ಪ್ರತಿಯಾಗಿ ಲಾಭಾಂಶ ಅಥವಾ ಬಡ್ಡಿ ಠೇವಣಿದಾರರಿಗೆ ನೀಡಿಲ್ಲ. ಠೇವಣಿದಾರರು ಈಗಲೂ ಅಲೆದಾಡುತ್ತಿದ್ದಾರೆ. ಕೇಸು ದಾಖಲಾಗಿದ್ದು, ಸಿಐಡಿ ತನಿಖೆ ಪ್ರಗತಿಯಲ್ಲಿದೆ. ಹಣವನ್ನು ನಿರ್ದೇಶಕರು ವೈಯಕ್ತಿಕ ಖಾತೆಗೆ ಬಳಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ. ಠೇವಣಿದಾರರಿಗೆ ಹಣ ವಾಪಸ್ ಕೊಡಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಆರಂಭಕ್ಕೆ ಮಾತನಾಡಿದ ರುದ್ರಪ್ಪ, ಅಗ್ರಿಗೋಲ್ಡ್ ಮಾಲಕರು ಆಂಧ್ರ, ತೆಲಂಗಾಣದಲ್ಲಿ 16 ಸಾವಿರ ಎಕರೆಗೂ ಹೆಚ್ಚಿನ ಭೂಮಿ ಹೊಂದಿದ್ದು, ಬೆಂಗಳೂರಿನಲ್ಲೇ 250 ಎಕರೆ ಭೂಮಿ ಅವರ ಹೆಸರಿನಲ್ಲಿದೆ. ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಠೇವಣಿದಾರರಿಗೆ ನಷ್ಟದ ಪರಿಹಾರ ಕೊಡಿಸಬೇಕೆಂದು ಆಗ್ರಹಿಸಿದರು.