×
Ad

ಕೊರೋನ ಸೋಂಕಿತರು ನಿಯಮ ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

Update: 2020-03-19 23:07 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.19: ಕೊರೋನ ಸೋಂಕು ದೃಢಪಟ್ಟವರು ಪ್ರತೇಕ ಮನೆ ಇಲ್ಲವೇ ಕೊಠಡಿಯಲ್ಲಿದ್ದು, ಆರೋಗ್ಯ ಇಲಾಖೆ ಸೂಚಿಸಿರುವ ಮುಂಜಾಗ್ರತಾ ಕ್ರಮಗಳನ್ನು ಪಾಲಿಸದಿದ್ದರೆ ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ 1985 ಮತ್ತಿತರ ಕರ್ನಾಟಕ ಸರಕಾರದ ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಲಿದೆ ಎಂದು ಆರೋಗ್ಯ ಇಲಾಖೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಕೊರೋನ ಪೀಡಿತರನ್ನು ಪ್ರತ್ಯೇಕ ಶೌಚಾಲಯ, ಉತ್ತಮ ಗಾಳಿ-ಬೆಳಕು ಹೊಂದಿರುವ ಕೊಠಡಿಯಲ್ಲಿ ಇರಿಸಿ ನಿಗಾ ವಹಿಸಬೇಕು. ಒಂದು ವೇಳೆ ಕುಟುಂಬದ ಇನ್ನಿತರ ಸದಸ್ಯರು ಇದೇ ಕೊಠಡಿಯಲ್ಲಿ ಉಳಿಯುವ ಅಗತ್ಯಬಿದ್ದಲ್ಲಿ ಇಬ್ಬರ ನಡುವೆ ಕನಿಷ್ಠ 1 ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಸೋಪ್, ನೀರು ಅಥವಾ ಸ್ಯಾನಿಟೈಸರ್‌ನಿಂದ ಆಗಿಂದಾಗ್ಗೆ ಕೈಗಳನ್ನು ಶುಚಿಗೊಳಿಸಬೇಕು, ಸೋಂಕಿತರನ್ನು ಮನೆಯಲ್ಲಿಯೂ ಎಲ್ಲಿಯೂ ಹೋಗದಂತೆ ನಿರ್ಬಂಧಿಸಬೇಕು.

ಸೋಂಕಿತರು ಯಾವಾಗಲೂ ಸರ್ಜಿಕಲ್ ಮಾಸ್ಕ್ ಧರಿಸಬೇಕು, 6-8 ಗಂಟೆಗಳಿಗೊಮ್ಮೆ ಮಾಸ್ಕ್‌ಗಳನ್ನು ಬದಲಾವಣೆ ಮಾಡಬೇಕು, ಬಳಸಲಾದ ಮಾಸ್ಕ್‌ಗಳನ್ನು ವಿಲೇವಾರಿ ಮಾಡಬೇಕು, ಸೋಂಕಿತರು ಅಥವಾ ಅವರನ್ನು ಉಪಚರಿಸಿದವರು ಬಳಸಿದ ಮಾಸ್ಕ್‌ಗಳನ್ನು ಬೆಂಕಿಯಲ್ಲಿ ಸುಟ್ಟುಹಾಕಬೇಕು ಅಥವಾ ಆಳವಾದ ಮಣ್ಣಿನಲ್ಲಿ ಹೂಳಬೇಕು.

ಸೋಂಕಿನ ಲಕ್ಷಣ ಕಂಡುಬಂದವರು ಮನೆಯಲ್ಲಿರುವ ಹಿರಿಯರು, ಗರ್ಭಿಣಿಯರು, ಮಕ್ಕಳು ಮತ್ತು ಅಸ್ತಮಾ, ಮಧುಮೇಹ ಮತ್ತಿತರ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಂದ ದೂರ ಇರಬೇಕು, ಮದುವೆ, ಸಮಾರಂಭಗಳಲ್ಲಿ ಭಾಗವಹಿಸಬಾರದು, ಕುಡಿಯುವ ನೀರಿನ ಲೋಟಗಳು, ಊಟದ ತಟ್ಟೆ, ಟವಲ್, ಹಾಸಿಗೆ ಇನ್ನಿತರ ವಸ್ತುಗಳನ್ನು ಮನೆಯಲ್ಲಿರುವ ಇತರರೊಂದಿಗೆ ಹಂಚಿಕೊಳ್ಳಬಾರದು, ಪ್ರತ್ಯೇಕ ಮನೆಯಲ್ಲಿಟ್ಟು ನಿಗಾ ವಹಿಸಲು ಕುಟುಂಬದಲ್ಲಿನ ಒಬ್ಬ ವ್ಯಕ್ತಿಯನ್ನು ಮಾತ್ರ ನಿಯೋಜಿಸಬೇಕು.

ಅಂತವರು ಹಸ್ತಲಾಘವ ಮಾಡಬಾರದು, ವಿಲೇವಾರಿ ಮಾಡುವಂತಹ ಕೈಗವಸುಗಳನ್ನು ಕೈಗಳಿಗೆ ಹಾಕಿಕೊಳ್ಳಬೇಕು, ಗ್ಲೌಸ್‌ಗಳನ್ನು ತೆಗೆದ ನಂತರ ಸೋಪ್ ಮತ್ತು ನೀರಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು, ಜ್ವರ, ನೆಗಡಿ, ಕೆಮ್ಮು ಮತ್ತಿತರ ಲಕ್ಷಣ ಕಂಡುಬಂದಲ್ಲಿ ಅಂತಹವರನ್ನು ವೈದ್ಯರ ಪರೀಕ್ಷೆ ವರದಿ ಬರುವವರೆಗೂ 14 ದಿನಗಳ ಕಾಲ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಿಸಿ ನಿಗಾ ವಹಿಸಬೇಕು.

ಕೊರೋನ ಸೋಂಕಿನ ಬಗ್ಗೆ ಮಾಹಿತಿಗಾಗಿ ಈಗಾಗಲೇ ಇರುವ 104 ಸಹಾಯವಾಣಿ ಜೊತೆಗೆ 080-46848600 ಮತ್ತೊಂದು ಸಹಾಯವಾಣಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತೆರೆದಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News