ಎಪ್ರಿಲ್ ಅಂತ್ಯದೊಳಗೆ ವೈದ್ಯರ ನೇರ ನೇಮಕ: ಆರೋಗ್ಯ ಸಚಿವ ಬಿ.ಶ್ರೀರಾಮುಲು

Update: 2020-03-19 18:20 GMT

ಬೆಂಗಳೂರು, ಮಾ. 19: ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿಯನ್ನು ಎಪ್ರಿಲ್ ಅಂತ್ಯದೊಳಗೆ ನೇರ ನೇಮಕದ ಮೂಲಕ ಭರ್ತಿ ಮಾಡಲಾಗುವುದು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಮಹದೇವಪ್ಪ ಶಿವಲಿಂಗಪ್ಪ ಯಾದವಾಡ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಈಗಾಗಲೇ 977 ಅರೆ ವೈದ್ಯಕೀಯ ಸಿಬ್ಬಂದಿ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿ ಶೀಘ್ರದಲ್ಲೆ ಅವರೆಲ್ಲರನ್ನು ಸ್ಥಳ ನಿಯುಕ್ತಿ ಮಾಡಲಾಗುವುದು ಎಂದರು.

19 ಸಾವಿರ ಹುದ್ದೆಗಳು ಖಾಲಿ: ಆರೋಗ್ಯ ಇಲಾಖೆಯಲ್ಲಿ 19,348 ಹುದ್ದೆಗಳು ಖಾಲಿ ಇವೆ. ‘ಎ’ ಗುಂಪಿನಲ್ಲಿ 45, ‘ಬಿ’ ಗುಂಪಿನಲ್ಲಿ 24 ಹಾಗೂ ‘ಸಿ’ ಗುಂಪಿನಲ್ಲಿ 64 ಸೇರಿದಂತೆ ಒಟ್ಟು 133 ವೃಂದಗಳಿವೆ ಎಂದು ಸಚಿವ ಶ್ರೀರಾಮುಲು, ಆಡಳಿತ ಪಕ್ಷದ ಸದಸ್ಯ ರವಿಸುಬ್ರಹ್ಮಣ್ಯ ಪ್ರಶ್ನೆಗೆ ಉತ್ತರಿಸಿದರು.

ಎ, ಬಿ, ಸಿ ಈ 3 ಗುಂಪಿಗಳಿಗೆ ಸೇರಿದ 51,167 ಹುದ್ದೆಗಳ ಪೈಕಿ 19,348 ಹುದ್ದೆಗಳು ಖಾಲಿ ಇವೆ. ಡಿ ವರ್ಗದ 16,916 ಹುದ್ದೆಗಳು ಮಂಜೂರಾಗಿದ್ದು, 5,985 ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಇನ್ನು 10,991 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಚ್‌ಆರ್‌ಎಂಎಸ್ ಪ್ರಕಾರ ಆರೋಗ್ಯ ಇಲಾಖೆಯಲ್ಲಿ ತಾತ್ಕಾಲಿಕವಾಗಿ ಮಂಜೂರಾದ 837 ಹುದ್ದೆಗಳನ್ನು ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುತ್ತಿದೆ. ಈ ತಾತ್ಕಾಲಿಕ ಹುದ್ದೆಗಳಿಗೆ ಪದೋನ್ನತಿ ಮೂಲಕ ಭರ್ತಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News