ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ

Update: 2020-03-19 18:22 GMT

ಪ್ರತಿ ವರ್ಷ ಮಾರ್ಚ್ 20ರಂದು ವಿಶ್ವ ಬಾಯಿಯ ಆರೋಗ್ಯ ದಿನ ಎಂದು ಆಚರಿಸಲಾಗುತ್ತಿದ್ದು, ಬಾಯಿಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು, ಬಾಯಿಯ ಆರೋಗ್ಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಧನಾತ್ಮಕವಾದ ವಿಚಾರಧಾರೆಗಳನ್ನು ಮೂಡಿಸಲು ಮತ್ತು ಬಾಯಿಯ ಆರೋಗ್ಯದಿಂದ, ದೇಹದ ಆರೋಗ್ಯದ ಮತ್ತು ವ್ಯಕ್ತಿಯ ವ್ಯಕ್ತಿತ್ವದ ಮೇಲಾಗುವ ಪರಿಣಾಮಗಳ ಬಗ್ಗೆ ಹೊಸ ಚಿಂತನೆಗಳನ್ನು ಮೂಡಿಸುವ ಸದುದ್ದೇಶವನ್ನು ಈ ಆಚರಣೆ ಹೊಂದಿದೆ. ಈ ಆಚರಣೆ 2007ರಲ್ಲಿ FDI (ಅಂತರ್‌ರಾಷ್ಟ್ರೀಯ ದಂತ ಸಂಘ) ಆಚರಣೆಗೆ ತಂದಿತು. FDI ಇದರ ಜನಕರಾದ ಚಾರ್ಲ್‌ಗೊಡನ್ ಅವರು ಹುಟ್ಟಿದ ದಿನವಾದ ಸೆಪ್ಟಂಬರ್ 12ರಂದು ಈ ಆಚರಣೆಯನ್ನು ಜಾರಿಗೆ ತರಲಾಯಿತು. ಆದರೆ 2013ರಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ವಿಶ್ವ ಬಾಯಿ ಆರೋಗ್ಯ ದಿನವನ್ನು ಮಾರ್ಚ್ 20ಕ್ಕೆ ಬದಲಾಯಿಸಲಾಯಿತು.

 ಮುಖ ಮನಸ್ಸಿನ ಕನ್ನಡಿ, ಸುಂದರವಾದ ಮುಖದಲ್ಲಿ ಅಂದವಾದ ದಂತ ಪಂಕ್ತಿಗಳಿಂದ ಕೂಡಿದ ಶುಭ್ರ, ನಿಷ್ಕಲ್ಮಶ ನಗು ಮತ್ತು ಆರೋಗ್ಯವಂತ ಬಾಯಿ ದೇಹದ ಅರೋಗ್ಯದ ದಿಕ್ಸೂಚಿ. ಪ್ರತಿಯೊಬ್ಬ ಮನುಷ್ಯನೂ ಬಯಸುವುದು ಕೂಡಾ ಸುಂದರ ನಿಷ್ಕಲ್ಮಶ ನಗುವನ್ನೇ. ಹಲ್ಲುಗಳು ವಜ್ರಕ್ಕಿಂತಲೂ ಅಮೂಲ್ಯವಾದ ಆಸ್ತಿ. ನಮ್ಮ ಹಲ್ಲಿನ ಆರೈಕೆಯು ನಮ್ಮ ಶರೀರದ ಸಾಮಾನ್ಯ ಆರೋಗ್ಯದ ಒಂದು ಪ್ರಮುಖ ಅಂಗವಾಗಿದೆ. ಹಲ್ಲಿನ ಆರೋಗ್ಯವನ್ನು ನಿರ್ಲಕ್ಷಿಸಿದರೆ ನಮ್ಮ ಸಾಮಾನ್ಯ ಆರೋಗ್ಯದ ಮೇಲೂ ಅದರ ದುಷ್ಪರಿಣಾಮವಾಗಬಹುದು. ಆದ್ದರಿಂದ ಹಲ್ಲಿನ ಆರೈಕೆಯನ್ನು ಚೆನ್ನಾಗಿ ಮಾಡಿದರೆ ಅವು ನಮ್ಮ ಆರೋಗ್ಯದ ಆರೈಕೆ ಮಾಡುತ್ತದೆ. ಸುಂದರವಾದ ಸದೃಢವಾದ ಹಲ್ಲುಗಳು ಆಹಾರವನ್ನು ಸರಿಯಾಗಿ ಜಗಿಯಲು ಅನುಕೂಲ ಮಾಡಿಕೊಟ್ಟು ದೇಹದ ಪಚನ ಕ್ರಿಯೆಗೆ ಸಹಾಯ ಮಾಡುತ್ತದೆ. ಅಲ್ಲದೇ ಸದೃಢವಾದ ಆರೋಗ್ಯವಂತ ಹಲ್ಲುಗಳು ಮನುಷ್ಯನಿಗೆ ಎಲ್ಲ ರೀತಿಯ ಆಹಾರ ಪದಾರ್ಥಗಳನ್ನು, ಗೆಡ್ಡೆಗೆಣಸುಗಳನ್ನು, ನಾರುಯುಕ್ತ, ಪೌಷ್ಟಿಕಾಂಶಯುಕ್ತ ಹಸಿ ತರಕಾರಿ, ಹಣ್ಣು- ಹಂಪಲುಗಳನ್ನು ತಿನ್ನಲು ಸಹಾಯ ಮಾಡಿ, ದೇಹದ ಆರೋಗ್ಯದ ಮೇಲೆ ಹತೋಟಿ ಇಡುತ್ತದೆ.

ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕ ಆಹಾರ ಬಾಯಿಯ ಮೂಲಕವೇ ಜಠರವನ್ನು ತಲುಪಬೇಕು. ತಿಂದ ಆಹಾರ ದೇಹಕ್ಕೆ ಹಿಡಿಯಬೇಕಾದರೆ ಅದನ್ನು ಸರಿಯಾಗಿ ಜಗಿದು ತಿಂದಿರಬೇಕು. ಈ ಕೆಲಸಕ್ಕೆ ಸ್ವಸ್ಥವಾದ ಹಲ್ಲುಗಳು ಅತೀ ಅಗತ್ಯ. ಹಲ್ಲುಗಳು ಮಾತನಾಡಲು ಕೂಡಾ ಅವಶ್ಯಕ. ಕೃತಕ ಹಲ್ಲುಗಳಿಂದ ಸ್ಪಷ್ಟಉಚ್ಚಾರದಲ್ಲಿ ಮೊದಮೊದಲು ಕಷ್ಟವಾಗಬಹುದು. ಹಲ್ಲುಗಳಿಲ್ಲದಿದ್ದರೆ ಕೆಲವು ಅಕ್ಷರಗಳನ್ನು ಸ್ಪಷ್ಟವಾಗಿ ಉಚ್ಚರಿಸುವುದು ಅಸಾಧ್ಯ. ಹಲ್ಲುಗಳು ಮುಖದ ಅಂದವನ್ನು ಹೆಚ್ಚಿಸುವ ಜೊತೆಗೆ ವ್ಯಕ್ತಿಯ ಆತ್ಮವಿಶ್ವಾಸಕ್ಕೂ ಹೆಚ್ಚಿನ ಬಲ ನಿಡುತ್ತದೆ. ಆದ್ದರಿಂದಲೇ ಹಲ್ಲಿನ ಜೋಪಾನವೇ ಸುಖ ಜೀವನಕ್ಕೆ ಸೋಪಾನವಾಗುತ್ತದೆ. ಒಟ್ಟಿನಲ್ಲಿ ಸುಂದರವಾದ ಸದೃಢವಾದ ಹಲ್ಲುಗಳು, ಮನುಷ್ಯನ ಆತ್ಮವಿಶ್ವಾಸದ ಪ್ರತೀಕ. ಸುಂದರವಾಗಿ ನಗಲು, ಆಹಾರವನ್ನು ಜಗಿಯಲು, ಸ್ಪಷ್ಟವಾಗಿ ಮಾತನಾಡಲು ಮತ್ತು ದೇಹದ ಆರೋಗ್ಯದ ಸಮತೋಲನವನ್ನು ಕಾಯ್ದಕೊಳ್ಳಲು ಹಲ್ಲಿನ ಆರೋಗ್ಯ ಅತೀ ಅವಶ್ಯಕ.

ಸುಂದರ ನಗುವಿನ ಹಿಂದಿನ ರಹಸ್ಯಗಳು

ಸುಂದರವಾದ ನಗು ಅಂದವಾದ ಮುಖಕ್ಕೆ ಮೌಲ್ಯ ಮತ್ತು ಮೆರುಗನ್ನು ನೀಡುತ್ತದೆ. ಆರೋಗ್ಯವಂತವಾದ, ಸದೃಢವಾದ, ಚಂದವಾದ ಹಾಗೆಯೇ ಆರೋಗ್ಯವಂತ ಬಾಯಿ ಆರೋಗ್ಯವಂತ ದೇಹಕ್ಕೆ ಮೂಲ ಆಧಾರ ಮತ್ತು ಮನುಷ್ಯನ ಆತ್ಮವಿಶ್ವಾಸಕ್ಕೆ ಭದ್ರ ತಳಪಾಯ ಹಾಕುತ್ತದೆ. ಇಷ್ಟೆಲ್ಲಾ ಹಿನ್ನೆಲೆಯಿಂದ ಬರಬಲ್ಲ ಆರೋಗ್ಯವಂತ ಆಕರ್ಷಕ ನಗು ಮನುಷ್ಯನ ಯಶಸ್ಸಿಗೆ ಸೋಪಾನವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತಾನು ತಿನ್ನುವ ಆಹಾರದ ಬಗ್ಗೆ ಶಿಸ್ತನ್ನು ಹೊಂದಿರಬೇಕು. ತಾನು ಏನು ತಿನ್ನುತ್ತಿದ್ದೇನೆೆ, ಯಾಕಾಗಿ ತಿನ್ನುತ್ತಿದ್ದೇನೆ ಎಂಬುದರ ಅರಿವು ಇರಬೇಕು. ಹಾಗಿದ್ದಲ್ಲಿ ಮಾತ್ರ ಆತ ತನ್ನ ಆರೋಗ್ಯವನ್ನು ಸೀಮಿತದಲ್ಲಿ ಇಟ್ಟುಕೊಳ್ಳಲು ಸಾಧ್ಯ. ಇಲ್ಲವಾದಲ್ಲಿ ನೂರಾರು ಕಾಯಿಲೆಗಳ ದಾಸನಾಗುವುದರಲ್ಲಿ ಎರಡು ಮಾತಿಲ್ಲ. ಅದಕ್ಕಾಗಿಯೇ ಬಲ್ಲವರು/ಜ್ಞಾನಿಗಳು ಹೇಳುತ್ತಾರೆ, ತಿನ್ನುವುದೇ ಒಂದು ರೋಗ. ನಾವು ನಮ್ಮ ನಾಲಗೆ ಮತ್ತು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡರೆ ಬಹುಶಃ ನಾವು ರೋಗರುಜಿನಗಳಿಲ್ಲದೆ ಬದುಕಬಹುದು. ಅದಕ್ಕಾಗಿಯೇ ಬಲ್ಲವರು ಹೇಳುತ್ತಾರೆ, ನಾಲಗೆಗೆ ದಾಸನಾದರೆ ರೋಗ ರುಜಿನಗಳಿಗೆ ರಹದಾರಿ ನೀಡಿದಂತೆ ಈ ನಿಟ್ಟಿನಲ್ಲಿ ನಮ್ಮ ಆರೋಗ್ಯವಂತ ಹಲ್ಲುಗಳು ಮತ್ತು ನಮ್ಮ ಸುಂದರವಾದ ನಗು ನಮ್ಮ ನಿಜವಾದ ಶಕ್ತಿ ಎಂದರೆ ಅತಿಶಯೋಕ್ತಿಯಲ್ಲ. ಇಂದು ಮಾರುಕಟ್ಟೆಯಲ್ಲಿ ಬಾಯಿಯ ಆರೋಗ್ಯ ಕಾಪಾಡುವ ನೂರಾರು ಬಗೆಯ ಪರಿಕರಗಳು ಲಭ್ಯವಿದೆ. ಈ ಬಗ್ಗೆ ರಂಗುರಂಗಿನ ಮಾಹಿತಿಗಳು ಜಾಹೀರಾತುಗಳು ಮಾಧ್ಯಮಗಳಲ್ಲಿ ಕಾಣಸಿಗುತ್ತವೆ. ಸುಂದರ, ಸದೃಢ ಹಲ್ಲುಗಳಿಗಾಗಿ ಬಳಸುವ ದಂತ ಪರಿಕರಗಳನ್ನು ಮೂರು ರೀತಿಯಾಗಿ ವಿಂಗಡಿಸಬಹುದು.

1. ದಂತಚೂರ್ಣ (Tooth paste), 2. ದಂತ ಕುಂಚ (Tooth brush), 3. ದಂತ ಬಳ್ಳಿ (Dental Floss)

ನಾಗರಿಕತೆ, ವಿಜ್ಞಾನ ಬೆಳೆದಂತೆಲ್ಲಾ ಕಳೆದ ನಾಲ್ಕೈದು ದಶಕಗಳಲ್ಲಿ ದಂತ ಸಂರಕ್ಷಣೆಗೆ ಸಂಬಂಧಿಸಿದಂತೆ ಟೂತ್‌ಪೇಸ್ಟ್ ಮತ್ತು ಟೂತ್‌ಬ್ರಶ್ (ದಂತ ಕುಂಚಗಳ) ಉತ್ಪಾದನೆಯಲ್ಲಿ ಅದ್ಭುತವಾದ ಕ್ರಾಂತಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ನಮ್ಮ ಪೂರ್ವಜರು ಬೇವಿನಸೊಪ್ಪು, ಮಾವು, ಗೇರು ಎಲೆ, ತೆಂಗಿನನಾರು, ಉಪ್ಪು, ಮಸಿ ಮುಂತಾದ ನೈಸರ್ಗಿಕ ಬಳುವಳಿಗಳನ್ನು ದಂತ ರಕ್ಷಣೆಗೆ ಉಪಯೋಗಿಸುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಅಂತಹ ವಸ್ತುಗಳ ಅಗತ್ಯ ನಮಗಿಲ್ಲ. ಆ ಕಾಲದ ಆಹಾರ ಪದಾರ್ಥಕ್ಕೂ ಜೀವನಶೈಲಿಗೂ, ಮೇಲೆ ತಿಳಿಸಿದ ನೈಸರ್ಗಿಕ ಪರಿಕರಗಳು ಪೂರಕವಾಗಿತ್ತು. ಇಂದಿನ ಜನಾಂಗ ಹೆಚ್ಚು ರೆಡಿಮೇಡ್ ಆಹಾರ ಪದಾರ್ಥಗಳನ್ನು ತಿನ್ನುವುದೇ ಜಾಸ್ತಿ. ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಆಹಾರ ಪದಾರ್ಥಗಳು ಹಲ್ಲುಗಳ ಆರೋಗ್ಯಕ್ಕೆ ಪೂರಕವಾಗಿತ್ತು ಮತ್ತು ಆಹಾರ ಸೇವನೆಯಿಂದಲೇ ಹಲ್ಲು ಶುಚಿಯಾಗುತ್ತಿತ್ತು. ಆದರೆ ಈಗಿನ ಜನಾಂಗ ತಿನ್ನುವ ಆಹಾರ ಹಲ್ಲುಗಳ ಆರೋಗ್ಯಕ್ಕೆ ಮಾರಕವಾಗಿದೆ. ಚಾಕೊಲೇಟ್, ಕುರುಕುರೆ ಮುಂತಾದ ಅಂಟು ಪದಾರ್ಥ ತಿಂದಲ್ಲಿ ಹಲ್ಲು ಶುಚಿಯಾಗುವ ಬದಲು ಹಲ್ಲಿನ ರೋಗ ರುಜಿನಗಳಿಗೆ ನಾಂದಿ ಹಾಡುತ್ತದೆ. ಅಲ್ಲದೆ ನಮ್ಮ ಇಂದಿನ ಜನಾಂಗ ತಿನ್ನುವ ಪರಿ ನೋಡಿದರೆ ಬಹುಶಃ ಅದಕ್ಕಾಗಿಯೇ ಹುಟ್ಟಿದ್ದಾರೆಂದು ಭಾಸವಾಗುತ್ತದೆ. ಹಿರಿಯರು ಹೇಳಿದ ಮಾತು, ‘‘ಬದುಕುವುದಕ್ಕಾಗಿ ತಿನ್ನಿ, ತಿನ್ನುವುದಕ್ಕಾಗಿ ಬದುಕಬೇಡಿ’’ ಎಂಬ ಮಾತು ಬಹುಶಃ ಎಲ್ಲರೂ ಮರೆತೇ ಬಿಟ್ಟಿರುವುದು ವಿಚಿತ್ರವಾದರೂ ಸತ್ಯ.

ಆರೋಗ್ಯವಂತ ಹಲ್ಲುಗಳು, ನಮ್ಮ ದೇಹದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರಲು ಸುದೃಢ ಮತ್ತು ಸ್ವಚ್ಛವಾದ ಹಲ್ಲುಗಳು ಅತೀ ಅವಶ್ಯಕ. ನಾವು ನಮ್ಮ ಬಾಯಿಯ ಸ್ವಚ್ಛತೆ, ಹಲ್ಲುಗಳ ಭದ್ರತೆ ಮತ್ತು ಬಾಯಿಯ ಆರೋಗ್ಯವನ್ನು ಕಾಪಾಡದಿದ್ದಲ್ಲಿ ಹತ್ತು ಹಲವಾರು ರೋಗಗಳಿಗೆ ರಹದಾರಿಯಾಗಬಲ್ಲುದು. ನಾವು ತಿನ್ನುವ ಆಹಾರದ ಪಚನಕ್ಕೆ ಮತ್ತು ಜೀರ್ಣ ಕ್ರಿಯೆಗಳಿಗೆ ಆರೋಗ್ಯ ಪೂರ್ಣ ಹಲ್ಲುಗಳು ಅತೀ ಅವಶ್ಯಕ. ಇಲ್ಲವಾದಲ್ಲಿ ಒಂದಕ್ಕೊಂದು ಸಮಸ್ಯೆಗಳು ಕೂಡಿಕೊಂಡು ವ್ಯಕ್ತಿಯು ರೋಗರುಜಿನಗಳ ಹಂದರವಾಗಬಹುದು. ಅಪೂರ್ಣ ಜೀರ್ಣ ಕ್ರಿಯೆಯಿಂದ ರಕ್ತಹೀನತೆ ಬರಬಹುದು. ರಕ್ತಹೀನತೆಯಿಂದ ಇನ್ಯಾವುದೋ ರೋಗಕ್ಕೆ ಮೂಲವಾಗಬಹುದು. ಅದೇ ರೀತಿ ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ ವಸಡು ರೋಗಗಳು ಹುಟ್ಟಿಕೊಳ್ಳಬಹುದು. ವಸಡು ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಮಧುಮೇಹ ರೋಗಿಗಳು ಕೂಡಾ ವಸಡು ರೋಗದಿಂದ ಹೆಚ್ಚು ಬಳಲುತ್ತಾರೆ ಎಂದು ಅಂಕಿಅಂಶಗಳು ಸಾರಿ ಹೇಳುತ್ತವೆ. ಬಾಯಿ ಎನ್ನುವುದು ಬ್ಯಾಕ್ಟೀರಿಯಾಗಳ ದೊಡ್ಡ ಕಾರ್ಖಾನೆ ಇದ್ದಂತೆ. ಇಲ್ಲಿ ಲಕ್ಷಾಂತರ ಸೂಕ್ಷಾಣು ಜೀವಿಗಳು ತಮ್ಮ ಅಸ್ತಿತ್ವವನ್ನು ಕಂಡು ಕೊಂಡಿದೆ. ಕಾರಣಾಂತರಗಳಿಂದ ವ್ಯಕ್ತಿಯ ದೈಹಿಕ ರೋಗ ನಿರೋಧಕ ಶಕ್ತಿ ಕುಂಠಿತವಾದಲ್ಲಿ, ಈ ರೋಗಾಣುಗಳು ತಮ್ಮ ರುದ್ರನರ್ತನವನ್ನು ಆರಂಭಿಸುತ್ತವೆ. ಬ್ಯಾಕ್ಟೀರಿಯಾ ಇಲ್ಲದ, ರೋಗವಿಲ್ಲದ ಬಾಯಿ ಇರಲಿಕ್ಕಿಲ್ಲ. ನಿರುಪದ್ರವಿ ಬ್ಯಾಕ್ಟೀರಿಯಗಳು ಬಾಯಿಯೊಳಗೆ ಇರುತ್ತವೆ. ನಮ್ಮ ಬಾಯಿಯ ಆರೋಗ್ಯ ಮತ್ತು ದೇಹದ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಂಡಲ್ಲಿ ಈ ಬ್ಯಾಕ್ಟೀರಿಯಗಳು ತಮ್ಮ ಪಾಡಿಗೆ ತಾವಿದ್ದು ಯಾವುದೇ ರೀತಿಯ ತೊಂದರೆ ಮಾಡಲಿಕ್ಕಿಲ್ಲ. ಒಟ್ಟಿನಲ್ಲಿ ಆರೋಗ್ಯವಂತ ಬಾಯಿಯಿಂದ ವ್ಯಕ್ತಿಯ ದೈಹಿಕ ಮಾನಸಿಕ ಆರೋಗ್ಯ ವೃದ್ಧಿಸಿ ಸುಂದರ, ಸುದೃಢ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣವಾಗುವುದರಲ್ಲಿ ಎರಡು ಮಾತಿಲ್ಲ.

Writer - ಡಾ. ಮುರಲೀಮೋಹನ್, ಚೂಂತಾರು

contributor

Editor - ಡಾ. ಮುರಲೀಮೋಹನ್, ಚೂಂತಾರು

contributor

Similar News