×
Ad

ಕಾಡಾನೆ, ಕೃಷ್ಣಮೃಗಗಳಿಂದ ಬೆಳೆ ಹಾನಿ: ಪರಿಹಾರ ಮೊತ್ತ ಹೆಚ್ಚಳಕ್ಕೆ ಚಿಂತನೆ- ಅರಣ್ಯ ಸಚಿವ ಆನಂದ್‌ಸಿಂಗ್

Update: 2020-03-19 23:52 IST

ಬೆಂಗಳೂರು, ಮಾ. 19: ಆನೆ, ಕೃಷ್ಣಮೃಗ ಸೇರಿದಂತೆ ಕಾಡು ಪ್ರಾಣಿಗಳಿಂದ ಉಂಟಾಗುವ ರೈತರ ಬೆಳೆ ನಷ್ಟಕ್ಕೆ ಪರಿಹಾರ ಮೊತ್ತವನ್ನು ಹೆಚ್ಚಿಸಲು ಸರಕಾರ ಚಿಂತನೆ ನಡೆಸಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್‌ ಸಿಂಗ್ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಎಸ್.ಎನ್. ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಕ್ಷೇತ್ರಗಳ ಶಾಸಕರ ಸಭೆಯನ್ನು ಇತ್ತೀಚೆಗಷ್ಟೇ ನಡೆಸಿದ್ದು, ಅವರಿಂದ ಸಲಹೆಗಳನ್ನು ಪಡೆದಿದ್ದೇನೆ ಎಂದರು.

ರೇಡಿಯೋ ಕಾಲರ್: ಆನೆಗಳ ದಾಳಿ ತಡೆಗಟ್ಟುವ ದೃಷ್ಟಿಯಿಂದ ಈಗಾಗಲೇ ಹಾಸನ ಜಿಲ್ಲೆ ವ್ಯಾಪ್ತಿಯಲ್ಲಿನ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಅದೇ ಮಾದರಿಯಲ್ಲಿ ಬಂಗಾರಪೇಟೆ ಭಾಗದಲ್ಲಿಯೂ ಆನೆಗಳಿಗೆ ರೇಡಿಯೋ ಕಾಲರ್ ಅವಳಡಿಸಲಾಗುವುದು ಎಂದು ಆನಂದ್‌ ಸಿಂಗ್ ತಿಳಿಸಿದರು.

ಕಾಡು ಪ್ರಾಣಿಗಳಿಂದ ಉಂಟಾಗುವ ಪ್ರಾಣ ಹಾನಿಗೆ 7.50 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ ಎಂದ ಅವರು, ಬಂಗಾರಪೇಟೆ ಕ್ಷೇತ್ರದ ವ್ಯಾಪ್ತಿಯಲ್ಲಿ 3 ವರ್ಷಗಳಲ್ಲಿ 5 ಬಾರಿ ಆನೆ ದಾಳಿ ಮಾಡಿದ್ದು, ಬೆಳೆ ಹಾನಿಗೆ 18.92 ಲಕ್ಷ ರೂ.ಪಾವತಿಸಲಾಗಿದೆ ಎಂದರು.

ತಂತಿಬೇಲಿ: ಮಧುಗಿರಿ ತಾಲೂಕಿನ ಜಯಮಂಗಲಿ ಕೃಷ್ಣಮೃಗ ಸಂರಕ್ಷಿತ ಪ್ರದೇಶದ ವಿಸ್ತೀರ್ಣ 798 ಎಕರೆ ಇದ್ದು 500 ಕೃಷ್ಣಮೃಗಗಳಿವೆ. ಅವುಗಳಿಗೆ ಮೇವು ಕಲ್ಪಿಸಲು ಹೆಬ್ಬೇವು ತೋಪು, ರಾಗಿ, ಜೋಳ, ಹಲಸಂಧೆ ಬೆಳೆಯಲಾಗುವುದು. ಜೊತೆಗೆ ಅವುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಕೃಷ್ಣಮೃಗಗಳ ನಿಯಂತ್ರಣಕ್ಕೆ ಸೋಲಾರ್ ಬೇಲಿ ಅಳವಡಿಸಿಕೊಳ್ಳಲು ರೈತರು ಮುಂದೆ ಬಂದರೆ ಇಲಾಖೆಯಿಂದ ಅವರಿಗೆ ಶೇ.50ರಷ್ಟು ಸಬ್ಸಿಡಿ ನೀಡಲಾಗುವುದು ಎಂದ ಅವರು, ಕೃಷ್ಣಮೃಗ ಧಾಮದ ವ್ಯಾಪ್ತಿಯ ರೈತರ ಭೂಮಿ ಸ್ವಾಧೀನಕ್ಕೂ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News