×
Ad

ಐಟಿ-ಬಿಟಿ ಕಂಪೆನಿಗಳಲ್ಲಿ ‘ವರ್ಕ್ ಫ್ರಮ್ ಹೋಮ್’ ಕಟ್ಟುನಿಟ್ಟಾಗಿ ಪಾಲಿಸಿ: ಡಿಸಿಎಂ ಅಶ್ವಥ್ ನಾರಾಯಣ

Update: 2020-03-20 17:21 IST

ಬೆಂಗಳೂರು, ಮಾ.20: ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಐಟಿ-ಬಿಟಿ ಕಂಪೆನಿಗಳ ಎಲ್ಲ ಉದ್ಯೋಗಿಗಳು ಮನೆಯಿಂದಲೆ ಕೆಲಸ ಮಾಡಬೇಕು ಎಂದು ನೀಡಿದ್ದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ನಿರ್ದೇಶಿಸಿದ್ದಾರೆ.

ಶುಕ್ರವಾರ ನಗರದ ಎಂ.ಎಸ್.ಬಿಲ್ಡಿಂಗ್‌ನಲ್ಲಿರುವ ಐಟಿ-ಬಿಟಿ ಇಲಾಖೆಯ ಕಚೇರಿಯಲ್ಲಿ ಐಟಿ- ಬಿಟಿ, ಸ್ಟಾರ್ಟ್ ಅಪ್ ಕಂಪನಿಗಳ ಮುಖ್ಯಸ್ಥರ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿದ ಅವರು, ಕೊರೋನ ನಿಯಂತ್ರಣ ಸಂಬಂಧ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ವಿವರಿಸಿದರು. ರಾಜ್ಯದ ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣ, ಬಿಟಿ ವಿಷನ್ ಗ್ರೂಪ್ ಸದಸ್ಯೆ ಡಾ.ಕಿರಣ್ ಮಜುಂದಾರ್ ಷಾ, ನಾಸ್ಕಾಂ ಅಧ್ಯಕ್ಷೆ ದೇಬಜಾನಿ ಘೋಷ್ ಹಾಗೂ ಇನ್ನಿತರ ಪ್ರಮುಖ ಐಟಿ ಸಂಸ್ಥೆಗಳ ಮುಖ್ಯಸ್ಥರು ವೀಡಿಯೊ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ, ಕೊರೋನ ಸೋಂಕಿತರು ಅಥವಾ ಕ್ವಾರಂಟೈನ್‌ನಲ್ಲಿರುವವರ ಮೇಲೆ ನಿಗಾ ವಹಿಸುವ ಜತೆಗೆ ಅಗತ್ಯ ಸೌಲಭ್ಯ ಒದಗಿಸಲು ಅಭಿವೃದ್ಧಿಪಡಿಸುವ ಆ್ಯಪ್ ಹಾಗೂ ದೇಶಿಯವಾಗಿ ಅಭಿವೃದ್ಧಿ ಪಡಿಸುತ್ತಿರುವ ಟೆಸ್ಟ್ ಕಿಟ್ ಬಗ್ಗೆ ಅಶ್ವಥ್ ನಾರಾಯಣ ಮಾಹಿತಿ ಪಡೆದರು. ಕೊರೋನ ನಿಯಂತ್ರಣಕ್ಕಾಗಿ ಐಟಿ ಬಿಟಿ, ಸ್ಟಾರ್ಟ್ ಅಪ್ ಕಂಪನಿ ಉದ್ಯೋಗಿಗಳು ಮನೆಯಿಂದಲೆ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಈ ಮೊದಲೇ ಸಲಹೆ ನೀಡಲಾಗಿತ್ತು. ಆದರೆ, ಕೆಲವಡೆ ಇದು ಜಾರಿ ಆಗಿಲ್ಲ ಎಂಬ ದೂರು ಕೇಳಿಬಂದಿತ್ತು. ಮುಂದಿನ ದಿನಗಳಲ್ಲಿ ವರ್ಕ್ ಫ್ರಮ್ ಹೋಂ ನೀತಿಯ ಕಟ್ಟುನಿಟ್ಟಿನ ಜಾರಿಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದರು.

ಶೀಘ್ರದಲ್ಲೆ ಈ ಸಂಬಂಧ ನಿರ್ದೇಶನ ಹೊರಡಿಸಲಾಗುವುದು. ಸರಕಾರ ಇದನ್ನು ಕಡ್ಡಾಯಗೊಳಿಸುವ ಬದಲು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಕಂಪೆನಿಗಳೆ ಅಗತ್ಯ ನಿರ್ಣಯ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಸರಕಾರಿ ಕೆಲಸ, ಆರೋಗ್ಯ ಹಾಗೂ ಬ್ಯಾಂಕಿಂಗ್ ಮುಂತಾದ ಅಗತ್ಯ ಸೇವೆ ಒದಗಿಸುವಂಥ ಐಟಿ ಉದ್ಯೋಗಿಗಳನ್ನು ಮಾತ್ರ ಕಚೇರಿಗೆ ಕರೆಸಲಾಗುತ್ತಿದೆ. ಕೆಲ ಸೇವೆಗಳಲ್ಲಿ ಗೌಪ್ಯತೆ ಕಾಯ್ದುಕೊಳ್ಳುವ ಅನಿವಾರ್ಯತೆಯೂ ಇರುತ್ತದೆ. ಉಳಿದಂತೆ ಹೆಚ್ಚಿನವರು ಮನೆಯಿಂದಲೆ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇನ್ನೂ ಹೆಚ್ಚಿನ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗುವುದು ಎಂದು ಐಟಿ ಬಿಟಿ ಕಂಪೆನಿ ಮುಖ್ಯಸ್ಥರು ಆಶ್ವಾಸನೆ ನೀಡಿದರು.

ಮನೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಬ್ರಾಡ್ ಬ್ಯಾಂಡ್, ಇಂಟರ್‌ನೆಟ್, ವಿದ್ಯುತ್ ಸಮಸ್ಯೆ ಎದುರಾಗುತ್ತದೆ. ಜತೆಗೆ, ಬಹಳಷ್ಟು ಮಂದಿ ಯುವ ಉದ್ಯೋಗಿಗಳು ಊಟದ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಪಿಜಿಗಳಲ್ಲಿ ಸಮಸ್ಯೆ ಆಗುತ್ತಿವೆ ಎಂಬ ವಿಷಯಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ ಎಂದು ಅವರು ಹೇಳಿದರು.

ಈ ಸಂಬಂಧ ಬೆಸ್ಕಾಂ ಹಾಗೂ ಟೆಲಿಕಾಂ ಸಂಸ್ಥೆಗಳ ಜತೆ ಮಾತುಕತೆ ನಡೆಸಲಾಗುವುದು. ಈ ಎಲ್ಲ ಸಮಸ್ಯೆಗಳ ಬಗ್ಗೆ ಗಮನ ಹರಿಸಿ, ಸರಕಾರ ಅಗತ್ಯ ಕ್ರಮ ಕೈಗೊಳ್ಳುವುದು. ಮುಖ್ಯಮಂತ್ರಿ ಈಗಾಗಲೆ 200 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದು ಅಶ್ವಥ್ ನಾರಾಯಣ ತಿಳಿಸಿದರು.

ಕೊರೋನ ವೈರಸ್‌ನಂತಹ ಸಾಂಕ್ರಾಮಿಕ ರೋಗಗಳ ತಡೆಗೆ ಪ್ರತ್ಯೇಕ ಆಸ್ಪತ್ರೆ ನಿಗದಿಪಡಿಸಿದರೆ, ಅದಕ್ಕೆ ಸಿಎಸ್‌ಆರ್ ನಿಧಿಯಿಂದ ಅಗತ್ಯ ನೆರವು ಒದಗಿಸಲಾಗುವುದು ಎಂದು ಕಿರಣ್ ಮಜುಂದಾರ್ ತಿಳಿಸಿದರು.

ಕೊರೋನದಿಂದ ಆರ್ಥಿಕತೆ ಸಂಕಷ್ಟ ಎದುರಾಗಿದೆ. ಹಲವರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಸಣ್ಣ ಉದ್ದಿಮೆದಾರರು ಸಾಲದ ಕಂತು ಕಟ್ಟಲಾಗದೇ ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕ್ರಿಸ್ ಗೋಪಾಲಕೃಷ್ಣ ಮನವಿ ಮಾಡಿದರು. ಐಟಿ ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ ರಮಣರೆಡ್ಡಿ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್, ಐಟಿಬಿಟಿ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ, ಎಂ.ಎಂ.ಆಕ್ಟೀವ್ ವಿಜ್ಞಾನ-ತಂತ್ರಜ್ಞಾನ ಸಂವಹನದ ಅಧ್ಯಕ್ಷ ಜಗದೀಶ್ ಪಟಾಂಕರ್ ಹಾಗೂ ಸ್ಟಾರ್ಟ್ ಅಪ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News