ಬೆಂಗಳೂರು: ಕೊರೋನ ಸೋಂಕಿತ ಪುತ್ರನನ್ನು ಗೌಪ್ಯವಾಗಿಟ್ಟ ರೈಲ್ವೆ ಮಹಿಳಾ ಅಧಿಕಾರಿ ಅಮಾನತು

Update: 2020-03-20 14:10 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.20: ವಿದೇಶದಿಂದ ವಾಪಸಾಗಿದ್ದ ಕೊರೋನ ವೈರಸ್ ಸೋಂಕಿತ ಪುತ್ರನನ್ನು ರೈಲ್ವೆ ಅತಿಥಿಗೃಹದಲ್ಲಿ ಗೌಪ್ಯವಾಗಿರಿಸಿದ್ದ ನೈಋತ್ಯ ರೈಲ್ವೆ ಮಹಿಳಾ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯ ಅಸಿಸ್ಟೆಂಟ್ ಪರ್ಸನಲ್ ಆಫೀಸರ್ ಅಮಾನತು ಶಿಕ್ಷೆಗೆ ಒಳಗಾದ ಮಹಿಳಾ ಅಧಿಕಾರಿ ಎಂದು ವರದಿಯಾಗಿದೆ.

ಏನಿದು ಆರೋಪ?: ಮಾ.13ರಂದು ಜರ್ಮನಿಯಿಂದ ಸ್ಪೇನ್ ಮೂಲಕ ಮಹಿಳಾ ಅಧಿಕಾರಿಯ 25 ವರ್ಷದ ಪುತ್ರ ನಗರದ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸಾಗಿದ್ದ. ಈ ವೇಳೆ ತಪಾಸಣೆ ಮಾಡಿದ ಅಧಿಕಾರಿಗಳು ಆತನನ್ನು ಮನೆಯಲ್ಲಿ ಪ್ರತ್ಯೇಕವಾಗಿ ಇರಿಸುವಂತೆ ಸೂಚಿಸಿದ್ದರು. ಆದರೆ, ಈ ಮಹಿಳಾ ಅಧಿಕಾರಿ, ಮಗನನ್ನು ಮೆಜೆಸ್ಟಿಕ್‌ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ ಬಳಿ ಇರುವ ರೈಲ್ವೆ ಅತಿಥಿ ಗೃಹದಲ್ಲಿಟ್ಟಿದ್ದರು. ಈ ವಿಚಾರವನ್ನು ಹೊರಗಡೆ ಗೊತ್ತಾಗದಂತೆ ಗೌಪ್ಯವಾಗಿರಿಸಿದ್ದರು ಎನ್ನಲಾಗಿದೆ.

ನಾಲ್ಕು ದಿನಗಳ ಹಿಂದೆ, ಆತನೇ ವೈದ್ಯರ ಬಳಿ ಹೋಗಿ ತಪಾಸಣೆಗೆ ಒಳಗಾಗಿದ್ದು, ಕೊರೋನ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಬಳಿಕ ಆತನನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಲ್ಲದೆ, ಕೊರೋನ ವೈರಸ್ ಸೋಂಕಿರುವ ಯಾವುದೇ ದೇಶದಿಂದ ಬಂದಿರುವ ವ್ಯಕ್ತಿಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಥವಾ ಸರಕಾರದ ಗಮನಕ್ಕೆ ತರುವಂತೆ ಸೂಚಿಸಿದ್ದರೂ ಈ ಮಹಿಳಾ ಅಧಿಕಾರಿ ಗೌಪ್ಯತೆ ಕಾಯ್ದುಕೊಂಡಿದ್ದಾರೆ. ರೈಲ್ವೆ ಅಧಿಕಾರಿಗಳು ಇರುವ ಅತಿಥಿ ಗೃಹದಲ್ಲಿ ಮಗನನ್ನು ಇರಿಸಲು ಬಳಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್ ಕುಮಾರ್ ಸಿಂಗ್ ಅವರು ಈ ಮಹಿಳಾ ಅಧಿಕಾರಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News