ಮರಳು ನೀತಿ ಜಾರಿಗೆ ರೂಪುರೇಷೆ ಸಿದ್ಧತೆ: ಸಚಿವ ಸಿ.ಸಿ.ಪಾಟೀಲ್
ಬೆಂಗಳೂರು, ಮಾ. 20: ರಾಜ್ಯದಲ್ಲಿ ಮರಳು ನೀತಿ ಜಾರಿಗೆ ತರಲು ರೂಪುರೇಷೆಗಳನ್ನು ಸರಕಾರದಿಂದ ಸಿದ್ಧಪಡಿಸುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆ ಪ್ರಶ್ನೋತರ ವೇಳೆಯಲ್ಲಿ ಆಡಳಿತ ಪಕ್ಷದ ಶಾಸಕ ಸಂಜೀವ ಮಠಂದೂರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸುಸ್ಥಿರ ಮರಳು ಗಣಿಗಾರಿಕೆ ನಿರ್ವಹಣೆ, ಮಾರ್ಗಸೂಚಿಯಲ್ಲಿ ಪ್ರವಾಹದಿಂದ ಜಮೀನುಗಳಲ್ಲಿ ಸಂಗ್ರಹವಾಗಿರುವ ಮರಳನ್ನು ತೆರವುಗೊಳಿಸಲು, ಜಲಾಶಯ, ಅಣೆಕಟ್ಟು, ಬ್ಯಾರೇಜ್, ಕಿಂಡಿ ಅಣೆಕಟ್ಟಿನ ಹಿನ್ನೀರಿನ ಪ್ರದೇಶಗಳಲ್ಲಿ ಹೂಳಿನೊಂದಿಗೆ ಸಂಗ್ರಹವಾಗಿರುವ ಮರಳನ್ನು ತೆರವುಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ಪ್ರಕೃತಿ ವಿಕೋಪದಿಂದ ಸಂಗ್ರಹವಾಗಿರುವ ಮರಳನ್ನು ತೆರವುಗೊಳಿಸಿ ಉಪಯೋಗಿಸಲು ಸರಕಾರಕ್ಕೆ ಸಮಸ್ಯೆ ಇರುವುದಿಲ್ಲ. ಅದೇ ರೀತಿ ಪ್ರವಾಹದಿಂದ ನದಿಗಳ ಪಕ್ಕದ ಕೃಷಿ ಜಮೀನಿನಲ್ಲಿ ಸಂಗ್ರಹವಾಗುವ ಮರಳನ್ನು ತೆರವುಗೊಳಿಸಿ ಸ್ಥಳೀಯ ಕಾಮಗಾರಿಗಳಿಗೆ ಬಳಸಲು ಸರಕಾರ ಅವಕಾಶ ನೀಡಿದೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ 21 ಕಡೆಗಳಲ್ಲಿ ಪ್ರವಾಹದಿಂದ ಕೃಷಿ ಜಮೀನಿನಲ್ಲಿ ಸಂಗ್ರಹವಾಗಿರುವ ಮರಳನ್ನು ತೆಗೆಯುವ ಪ್ರಸ್ತಾವನೆಗೆ ಜಿಲ್ಲಾ ಮರಳು ಸಮಿತಿಗಳಿಂದ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ತುಂಬೆ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ 79 ಸಾವಿರ ಮೆಟ್ರಿಕ್ ಟನ್ ಮತ್ತು ಉಡುಪಿ ಜಿಲ್ಲೆ ಬಜೆ ಡ್ಯಾಂ ಹಿನ್ನೀರಿನ ಪ್ರದೇಶದಲ್ಲಿ 10,370 ಮೆಟ್ರಿಕ್ ಟನ್ ಮರಳನ್ನು ಸಾರ್ವಜನಿಕರಿಗೆ ಪೂರೈಸಲಾಗಿದೆ ಎಂದರು.
ಪ್ರಶ್ನೆ ಕೇಳಲು ಧರಣಿ: ಈ ವೇಳೆ ಪ್ರಶ್ನೆ ಕೇಳಲು ಕಾಂಗ್ರೆಸ್ ಸದಸ್ಯರಾದ ಯು.ಟಿ.ಖಾದರ್ ಮತ್ತು ಅಮರೇಗೌಡ ಬಯ್ಯೆಪುರ ಕೋರಿದರು. ಇದಕ್ಕೆ ನಿರಾಕರಿಸಿದ ಸ್ಪೀಕರ್, ‘ಇದು ಕರಾವಳಿಗೆ ಸೀಮಿತವಾದ ವಿಷಯ ನೀವೇಗೆ ಪ್ರಶ್ನೆ ಕೇಳ್ತೀರಿ’ ಎಂದು ಪ್ರತಿಕ್ರಿಯಿಸಿದರು.
ಇದರಿಂದ ಕೆರಳಿದ ಸದಸ್ಯರಿಬ್ಬರು, ‘ಮರಳು ಸಮಸ್ಯೆ ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು, ಕನಿಷ್ಟ ಪ್ರಶ್ನೆ ಕೇಳಲು ಅವಕಾಶವಿಲ್ಲ ಎಂದರೆ ಹೇಗೆ’ ಎಂದು ಸ್ಪೀಕರ್ ಪೀಠದ ಬಾವಿಗಿಳಿದು ಧರಣಿಗೆ ಮುಂದಾದರು. ಆಗ ಮರಳು ನೀತಿ ಸಂಬಂಧ ಅರ್ಧಗಂಟೆ ಚರ್ಚೆಗೆ ಅವಕಾಶ ನೀಡಿ ಎಂದು ಸಿ.ಸಿ.ಪಾಟೀಲ್ ಸಲಹೆ ಮಾಡಿದಾಗ ಸ್ಪೀಕರ್ ಒಪ್ಪಿದರು. ಹೀಗಾಗಿ ಧರಣಿಯಲ್ಲಿದ್ದ ಖಾದರ್ ಮತ್ತು ಬಯ್ಯಿಪುರ ತಮ್ಮ ಸ್ಥಾನಗಳಿಗೆ ಹಿಂದಿರುಗಿದರು.