ಗೋವಾ ಕನ್ನಡಿಗರ ಮೇಲೆ ಹಲ್ಲೆ ಆರೋಪ: ಸದನದ ಬಾವಿಗಿಳಿದು ಪ್ರತಿಭಟಿಸಿದ ಪ್ರತಿಪಕ್ಷದ ಸದಸ್ಯರು
ಬೆಂಗಳೂರು, ಮಾ.20: ಗೋವಾದಲ್ಲಿರುವ ಕನ್ನಡಿಗರ ಮೇಲೆ ಹಲ್ಲೆಗಳು ನಡೆಯುತ್ತಿದ್ದರೂ ರಾಜ್ಯ ಸರಕಾರ ಇಲ್ಲಿಯವರೆಗೂ ಅವರ ನೆರವಿಗೆ ಹೋಗದೆ, ಕ್ಷುಲ್ಲಕ ಹೇಳಿಕೆ ನೀಡುತ್ತಿದೆ ಎಂದು ಅರೋಪಿಸಿ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಶುಕ್ರವಾರ ವಿಧಾನಪರಿಷತ್‌ನಲ್ಲಿ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, ಗೋವಾದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಲ್ಲಿನ ಕನ್ನಡಿಗರನ್ನು ಹೊರದಬ್ಬುವಂತಹ ಅಭಿಯಾನ ಆರಂಭಿಸಿದ್ದಾರೆ. ಇದರಿಂದಾಗಿ ಸುಮಾರು 50, 60 ವರ್ಷಗಳಿಂದ ಗೋವಾದಲ್ಲಿಯೇ ನೆಲೆಸಿರುವ ಕನ್ನಡಿಗರು ಭಯಭೀತರಾಗಿದ್ದಾರೆ. ಹೀಗಾಗಿ ರಾಜ್ಯ ಸರಕಾರ ಅವರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಗೋವಾ, ಕರ್ನಾಟಕ ಹಾಗೂ ದೇಶದಲ್ಲಿ ಆಡಳಿತದಲ್ಲಿರುವುದು ರಾಷ್ಟ್ರೀಯತೆಯನ್ನು ಸಂರಕ್ಷಿಸುವ ಪಕ್ಷವಾಗಿದೆ. ಕೆಲವರು ಭಾಷಾ ಅಸ್ಮಿತೆಯನ್ನು ದುರುಪಯೋಗ ಪಡಿಸಿಕೊಳ್ಳಲು ಮುಂದಾಗುತ್ತಾರೆ. ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲವೆಂದರು.
ಈ ವೇಳೆ ಮಧ್ಯೆಪ್ರವೇಶಿಸಿದ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಇಂತಹ ಭರವಸೆಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಗೋವಾ ಕನ್ನಡಿಗರ ಪರವಾಗಿ ರಾಜ್ಯ ಸರಕಾರ ಇಲ್ಲಿಯವರೆಗೂ ಯಾವ ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ತಿಳಿಸಿ ಎಂದು ಪಟ್ಟು ಹಿಡಿದರು. ಪ್ರತಿಪಕ್ಷದ ಎಲ್ಲ ಸದಸ್ಯರು ಧ್ವನಿಗೂಡಿಸಿದರು.
ಇದಕ್ಕೆ ಸಚಿವ ಸಿ.ಟಿ.ರವಿ, ಕೇಂದ್ರ ಸರಕಾರ ದೂರದ ಇರಾನ್, ಇರಾಕ್ ಜನರಿಗೆ ನೆರವಾಗುತ್ತಿದೆ. ಇನ್ನು ಗೋವಾದಲ್ಲಿರುವ ಕನ್ನಡಿಗರ ನೆರವಿಗೆ ಧಾವಿಸುವುದಿಲ್ಲವೇ ಎಂದು ಹೇಳುತ್ತಿದ್ದಂತೆ, ಪ್ರತಿಪಕ್ಷದ ಸದಸ್ಯರು ವಾಗ್ವಾದಕ್ಕೆ ಇಳಿದರು. ಮೊದಲು ಗೋವಾ ಕನ್ನಡಿಗರ ಬಗ್ಗೆ ಸರಿಯಾದ ಉತ್ತರ ನೀಡಿ, ಆಮೇಲೆ ಇತರೆ ದೇಶಗಳ ಬಗ್ಗೆ ಮಾತನಾಡಿ ಎಂದರು.
ಗೋವಾ ಸರಕಾರ ಮಹಾದಾಯಿ ನದಿಯ ನೀರನ್ನು ಸಮುದ್ರಕ್ಕೆ ಹೋಗಲು ಬಿಡುತ್ತಾರೆ. ಆದರೆ, ಕರ್ನಾಟಕ ಜನತೆಗೆ ಕೊಡಲು ಮುಂದಾಗುತ್ತಿಲ್ಲ. ಕೇಂದ್ರ ಸರಕಾರವು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಇಂತಹ ಸಂದರ್ಭದಲ್ಲಿ ಸುಮ್ಮನೆ ಭರವಸೆಗಳನ್ನು ಕೊಡುವುದು ಬೇಡ. ಗೋವಾ ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರಕಾರ ಏನು ಕ್ರಮ ಕೈಗೊಂಡಿದೆ ಎಂಬುದನ್ನು ಉತ್ತರಿಸಬೇಕೆಂದು ಒತ್ತಾಯಿಸಿ ವಿಪಕ್ಷ ನಾಯಕ ಎಸ್.ಅರ್.ಪಾಟೀಲ್ ನೇತೃತ್ವದಲ್ಲಿ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಈ ವೇಳೆ ವಾಗ್ವಾದ ಹೆಚ್ಚಾದಾಗ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು. ನಂತರ ಸದನ ಆರಂಭವಾದಾಗ, ಗೋವಾ ಕನ್ನಡಿಗರ ರಕ್ಷಣೆ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದನಕ್ಕೆ ಬಂದು ಪ್ರತಿಕ್ರಿಯೆ ನೀಡಬೇಕು. ಹಾಗೂ ಸರ್ವಪಕ್ಷಗಳ ನಿಯೋಗ ರಚಿಸಿ, ಗೋವ ಕನ್ನಡಿಗರನ್ನು ಭೇಟಿ ಮಾಡುವಂತಹ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಎಸ್.ಆರ್.ಪಾಟೀಲ್ ಒತ್ತಾಯಿಸಿದರು. ಈ ವೇಳೆ ಸಭಾ ನಾಯಕ ಶ್ರೀನಿವಾಸ ಪೂಜಾರಿ, ಗೋವಾ ಕನ್ನಡಿಗರ ಸುರಕ್ಷತೆಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪರಿಂದ ಸೋಮವಾರ ಸದನದಲ್ಲಿ ಉತ್ತರ ಕೊಡಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಪಕ್ಷದ ಸದಸ್ಯರು ತಮ್ಮ ಆಸನಗಳತ್ತ ತೆರಳಿದರು.