ಬಿಪಿಎಲ್ ಕಂಪೆನಿಗೆ ಭೂಮಿ: ಪ್ರಕರಣ ಶೀಘ್ರ ವಿಲೇಗೆ ಲೋಕಾಯುಕ್ತಕ್ಕೆ ಮನವಿ- ಸಚಿವ ಜಗದೀಶ್ ಶೆಟ್ಟರ್

Update: 2020-03-20 14:36 GMT

ಬೆಂಗಳೂರು, ಮಾ. 20: ಬಿಪಿಎಲ್ ಕಂಪೆನಿಗೆ ಕೆಐಎಡಿಬಿಯಿಂದ ದಾಬಸ್‌ಪೇಟೆ 1ನೆ ಹಂತದ ಕೈಗಾರಿಕಾ ಪ್ರದೇಶದಲ್ಲಿ 149 ಎಕರೆ ಭೂಮಿ ಹಂಚಿಕೆ ಮಾಡಿದ್ದು ಶುದ್ಧ ಕ್ರಮಪತ್ರ ಮಾಡಿಕೊಟ್ಟಿರುವ ವಿಚಾರ ಲೋಕಾಯುಕ್ತ ಸಂಸ್ಥೆಯಲ್ಲಿದ್ದು, ಪ್ರಕರಣ ಶೀಘ್ರ ವಿಲೇವಾರಿಗೆ ಮನವಿ ಮಾಡಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ.

ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಶ್ರೀನಿವಾಸಮೂರ್ತಿ ಪ್ರಶ್ನೆಗೆ ಉತ್ತರಿಸಿದ ಅವರು, ಬಿಪಿಎಲ್ ಕಂಪೆನಿಗೆ ಹಂಚಿಕೆಯಾಗಿರುವ ವಿಸ್ತೀರ್ಣದಲ್ಲಿ ಶೇ.5.12ರಷ್ಟು ಜಮೀನನ್ನು ಕಟ್ಟಡಕ್ಕಾಗಿ ಬಳಸಿಕೊಂಡಿದೆ. ಈ ವಿಚಾರ 2014ರಲ್ಲಿ ಪರಿಷತ್ತಿನಲ್ಲಿ ಚರ್ಚೆಯಾಗಿದ್ದು, ಶುದ್ಧ ಕ್ರಯಪತ್ರ ರದ್ದು ಮಾಡಿಲ್ಲ. ಲೋಕಾಯುಕ್ತ ವಹಿಸಿದ್ದು, ಸಂಸ್ಥೆಗೆ ಅಗತ್ಯ ದಾಖಲೆಗಳನ್ನು ಒದಗಿಸಲಾಗಿದೆ ಎಂದರು.

ಕೆಐಎಡಿಬಿಯಿಂದ ಬಿಪಿಎಲ್ ಕಂಪೆನಿ ಕ್ರಯಪತ್ರ ಪಡೆದ ನಂತರ ಮಾರುತಿ ಸುಜುಕಿ ಇಂಡಿಯಾ, ಜಿಂದಾಲ್ ಅಲ್ಯೂಮಿನಿಯಂ, ಬಿಒಸಿ ಇಂಡಿಯಾ/ಲಿಂಡೆ ಇಂಡಿಯಾ ಕಂಪೆನಿ ಸೇರಿ ನಾಲ್ಕು ಕಂಪೆನಿಯ ಘಟಕಗಳು ಆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ವಿವರ ನೀಡಿದರು.

ಕ್ರಮಪತ್ರ ರದ್ದುಪಡಿಸಿ: ಬಿಪಿಎಲ್ ಕಂಪೆನಿ ಭೂಮಿ ಮಂಜೂರು ಮಾಡಿಸಿಕೊಂಡು ಬೇರೆ ಕಂಪೆನಿಗಳಿಗೆ ಭೂಮಿ ಮಾರಾಟ ಮಾಡಿದೆ. ಹೀಗಾಗಿ ಆ ಕಂಪೆನಿ ಕ್ರಯಪತ್ರ ರದ್ದುಪಡಿಸಬೇಕೆಂದು ಶ್ರೀನಿವಾಸಮೂರ್ತಿ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News