×
Ad

ಕೊರೋನಾ ಭೀತಿ: ಅಯೋಧ್ಯೆಯ ಮಾ.24ರ ಉತ್ಸವ ಅಮಾನತು

Update: 2020-03-20 20:51 IST

 ಲಕ್ನೋ,ಮಾ.19: ಕೊರೋನಾ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಮುಂದಿನವಾರ ರಾಮನವಮಿ ಉತ್ಸವದ ಆರಂಭದಲ್ಲಿ ನಡೆಯಲಿರುವ ‘ರಾಮಕೋಟ್ ಪರಿಕ್ರಮ’ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.ಸಾಮಾನ್ಯವಾಗಿ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ಈ ಉತ್ಸವವು ಮಾರ್ಚ್ 24ರಂದು ನಡೆಯುವುದಾಗಿ ನಿಗದಿಯಾಗಿತ್ತು. ಆದರೆ ಅದನ್ನು ಸಂಘಟನಾ ಸಮಿತಿ ಅಮಾನತುಗೊಳಿಸಿದೆ.

 ‘‘ ಅಯೋಧ್ಯೆಯಲ್ಲಿ ಇಂತಹ ಹಲವಾರು ಪ್ರಮುಖ ಪರಿಕ್ರಮ ಕಾರ್ಯಕ್ರಮಗಳನ್ನು ನಾವು ಆಯೋಜಿಸುತ್ತಿರುತ್ತೇವೆ. ಆದರೆ ಕೊರೋನಾ ವೈರಸ್ ಹಾವಳಿ ಈಗ ರಾಷ್ಟ್ರಕ್ಕೆ ಬೆದರಿಕೆಯಾಗಿ ಪರಿಣಮಿಸಿರುವುದರಿಂದ ಮಾರ್ಚ್ 24ರಂದು ನಡೆಯುವುದಾಗಿ ನಿಗದಿಯಾಗಿದ್ದ ಈ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಇದರಿಂದಾಗಿ ಯಾರು ಕೂಡಾ ಸೋಂಕಿಗೊಳಗಾಗುವುದು ನಮಗೆ ಬೇಕಾಗಿಲ್ಲ. ಹೀಗಾಗಿ ನಾವು ಈ ಕಾರ್ಯಕ್ರಮವನ್ನು ಅಮಾನತುಗೊಳಿಸಿದ್ದೇವೆ’’ ಸಂಘಟನಾ ಸಮಿತಿಯ ಸದಸ್ಯ ಮಹಂತ ರಂಜನ್ ಕುಮಾರ್ ದಾಸ್ ತಿಳಿಸಿದ್ದಾರೆ.

 ಈ ಸಮಯದಲ್ಲಿ ಜನರು ದೇವಾಲಯವನ್ನು ಸಂದರ್ಶಿಸದಂತೆ ಹಾಗೂ ಸರಯೂ ನದಿಯಲ್ಲಿ ಸ್ನಾನ ಮಾಡದಂತೆ ಸಮಿತಿಯು ಜನರಿಗೆ ಸಲಹೆ ಮಾಡಿದೆ. ಕೊರೋನಾ ವೈರಸ್ ಸೋಂಕು ಹರಡುವ ಸಾಧ್ಯತೆಯಿರುವುದರಿಂದ ರಾಜ್ಯದಾದ್ಯಂತ ಧಾರ್ಮಿಕ ಸ್ಥಳಗಳಲ್ಲಿ ಜಮಾಯಿಸದಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ ಗುರುವಾರ ಜನತೆಗೆ ಮನವಿ ಮಾಡಿದ್ದರು.

ಉತ್ತರಪ್ರದೇಶದಲ್ಲಿ ಈವರೆಗೆ ಕೊರೋನ ವೈರಸ್‌ನ 23 ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 9 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News