×
Ad

ಬೆಂಗಳೂರು: ಜನತಾ ಕರ್ಫ್ಯೂಗೆ ನಗರದಾದ್ಯಂತ ವ್ಯಾಪಕ ಬೆಂಬಲ

Update: 2020-03-20 22:05 IST

ಬೆಂಗಳೂರು, ಮಾ.20: ರವಿವಾರ ಪ್ರಧಾನಿ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಕ್ಯಾಬ್, ಆಟೋ ಚಾಲಕರು, ಸಂಘ-ಸಂಸ್ಥೆಗಳು, ಹೋಟೆಲ್‌ಗಳು ಬೆಂಬಲ ವ್ಯಕ್ತಪಡಿಸಿವೆ.

ಕೊರೋನ ವೈರಸ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದು, ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮತ್ತು ತಡೆ ನೀಡಲು ಪ್ರಧಾನಿ ಮೋದಿ ಮಾ. 22ರಂದು ಜನತಾ ಕರ್ಫ್ಯೂ ಆಚರಿಸಲು ಕರೆ ನೀಡಿದ್ದಾರೆ. ಇದಕ್ಕೆ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಕೊರೋನ ವೈರಸ್ ಹರಡುವುದನ್ನು ತಡೆಯಲು ಸರಕಾರ ಮತ್ತು ವೈದ್ಯರು ಸಾಕಷ್ಟು ಪರಿಶ್ರಮ ಹಾಕುತ್ತಿದ್ದು, ದೇಶದಲ್ಲಿ 5 ಮಂದಿ ಈಗಾಗಲೇ ಸೋಂಕಿನಿಂದ ಮೃತಪಟ್ಟಿದ್ಧಾರೆ. 200 ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದಿದ್ದರೆ ಲಕ್ಷಾಂತರ ಮಂದಿ ಅಪಾಯಕ್ಕೆ ಸಿಲುಕುವುದು ನಿಶ್ಚಿತವಾಗಿದೆ.

ರವಿವಾರ ಬೆಳಗ್ಗೆ 7ರಿಂದ 9ರವರೆಗೆ ಕರೆ ನೀಡಿರುವ ಜನತಾ ಕರ್ಫ್ಯೂಗೆ ಬೃಹತ್ ಬೆಂಗಳೂರು ಹೊಟೇಲ್‌ಗಳ ಸಂಘಟನೆ ಬೆಂಬಲ ಸೂಚಿಸಿದೆ. ಕೊರೋನ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಒಂದು ದಿನ ನಮ್ಮ ಮನೆಯಲ್ಲಿಯೇ ಇರಬೇಕು. ಆ ದಿನ ಹೊಟೇಲ್-ರೆಸ್ಟೋರೆಂಟ್, ಸ್ವೀಟ್ ಸ್ಟಾಲ್, ಬೇಕರಿಗಳು ಸಂಪೂರ್ಣವಾಗಿ ಬಂದ್ ಮಾಡಲಾಗುವುದು. ಒಂದು ದಿನ ಗ್ರಾಹಕರು, ಕಾರ್ಮಿಕರು, ಮನೆಯಲ್ಲಿಯೇ ಇದ್ದು ಆರೋಗ್ಯ ಕಾಪಾಡಬೇಕು ಎಂದು ಹೊಟೇಲ್ ಸಂಘಟನೆಯ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.

ನಗರದ ಕೆ.ಆರ್.ಮಾರುಕಟ್ಟೆ, ಯಶವಂತಪುರ, ಜಯನಗರ, ಮಲ್ಲೇಶ್ವರ ಮಾರುಕಟ್ಟೆ ಪ್ರದೇಶಗಳು ಬಂದ್ ಆಗುವ ಸಾಧ್ಯತೆ ಹೆಚ್ಚಾಗಿದ್ದು, ಚಿಕ್ಕಪೇಟೆ ವರ್ತಕರ ಸಂಘ, ಚಾಮರಾಜಪೇಟೆ ವರ್ತಕರ ಸಂಘಗಳು ಸದ್ಯಕ್ಕೆ ಜನತಾ ಕರ್ಫ್ಯೂಗೆ ಬೆಂಬಲ ನೀಡಿವೆ. ಮಾರುಕಟ್ಟೆ ಪ್ರದೇಶಗಳಲ್ಲಿರುವ ಬಹುತೇಕ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಲಿವೆ. ಬಹಳ ದಿನಗಳ ನಂತರ ಚಿಕ್ಕಪೇಟೆ ಪ್ರದೇಶ ಬಂದ್ ಆಗುತ್ತಿರುವುದರಿಂದ ಮಾರುಕಟ್ಟೆ ಸ್ವಚ್ಛಗೊಳಿಸಬೇಕು ಎಂದು ಅಲ್ಲಿಯ ವರ್ತಕರ ಸಂಘ ಬಿಬಿಎಂಪಿಗೆ ಮನವಿ ಮಾಡಿಕೊಂಡಿದೆ.

ಪೀಣ್ಯ ಕೈಗಾರಿಕಾ ಪ್ರದೇಶ ಭಾನುವಾರ ಸಂಪೂರ್ಣ ಸ್ತಬ್ಧಗೊಳ್ಳಲಿದೆ. ಈ ಪ್ರದೇಶದಲ್ಲಿ 12 ಸಾವಿರ ಕೈಗಾರಿಕೆಗಳಿದ್ದು, 9 ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಾರೆ. ಇಲ್ಲಿ ಪ್ರತೀ ರವಿವಾರ ಶೇ. 70 ರಷ್ಟು ರಜೆ ಇರುತ್ತದೆ. ಜನತಾ ಕರ್ಫ್ಯೂ ಹಿನ್ನೆಲೆ ಸಂಪೂರ್ಣವಾಗಿ ಬಂದ್ ಮಾಡುವುದಾಗಿ ಪೀಣ್ಯ ಕೈಗಾರಿಕಾ ಸಂಘದ ಕಾರ್ಯದರ್ಶಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.

ಅಗತ್ಯಕ್ಕೆ ಅನುಗುಣವಾಗಿ ಬಸ್ ಸಂಚಾರ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿಲ್ಲ. ಜನರು ರಸ್ತೆಗಿಳಿದರೆ ಬಸ್ ಸೇವೆ ಒದಗಿಸಲು ತೀರ್ಮಾನಿಸಿದೆ. ಪ್ರಸ್ತುತ 6 ಸಾವಿರ ಬಸ್‌ಗಳಿದ್ದು, ಪ್ರಯಾಣಿಕರ ಕೊರತೆಯಿಂದ 1 ಸಾವಿರ ಬಸ್‌ಗಳ ಸೇವೆಯನ್ನು ರದ್ದುಗೊಳಿಸಿದೆ. ಶನಿವಾರ ಶೇ.50ರಷ್ಟು ಬಸ್‌ಗಳ ಸಂಚಾರ ರದ್ದುಗೊಳ್ಳಲಿದ್ದು, ರವಿವಾರ ಶೇ. 20ರಷ್ಟು ಬಸ್‌ಗಳು ಮಾತ್ರ ರಸ್ತೆಗೆ ಇಳಿಯಲಿವೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಹೆಚ್ಚಿನ ಬಸ್‌ಗಳ ಸೇವೆ ಒದಗಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News